ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಜಮಾಅತೆ ಇಸ್ಲಾಮಿ- ಎಚ್ ಆರ್ ಎಸ್ 

0
1613

ನೆರೆ ಹಾವಳಿಗೆ ತುತ್ತಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಸಂತ್ರಸ್ತ  ಪ್ರದೇಶಗಳಿಗೆ ಧಾವಿಸಿದ ಜಮಾಅತೆ ಇಸ್ಲಾಮೀ ಹಿಂದ್  ನ ಪ್ರಕೃತಿ ದುರಂತ ಪರಿಹಾರ ನಿರ್ವಹಣಾ ಸ್ವಯಂ ಸೇವಾ ಸಂಸ್ಥೆಯಾದ  ಹೆಚ್ ಆರ್.ಎಸ್.(ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ) ನ ಸ್ವಯಂ ಸೇವಕರು  ತಂಡಗಳನ್ನು ರಚಿಸಿ ಬಿರುಸಿನ ಕಾರ್ಯಾಚರಣೆಯಲ್ಲಿ ತೊಡಗಿದರು.
ಬಂಟ್ವಾಳ ತಾಲೂಕಿನ ಗೂಡಿನಬಳಿ, ಬಂಟ್ವಾಳ, ಪಾಣೆಮಂಗಳೂರು, ನಂದಾವರ, ಜಕ್ರಿಬೆಟ್ಟು ಮುಂತಾದ ನೆರೆಪೀಡಿತ ಪ್ರದೇಶಗಳಿಗೆ ಹೆಚ್.ಆರ್.ಎಸ್ ಕರ್ನಾಟಕ ಕ್ಯಾಪ್ಟನ್ ಅಮೀರ್ ಸಿದ್ದೀಕ್ ಕುದ್ರೋಳಿ ನೇತೃತ್ವದ ತಂಡವು ಭೇಟಿ ನೀಡಿ ಪರಿಶೀಲಿಸಿತು. ಬಂಟ್ವಾಳ ಪರಿಸರದ ಕೆಲವು ಮನೆಗಳಿಗೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ದಿಕ್ಕುಗಾಣದೆ ನಿಂತಿದ್ದ ಜನರನ್ನು ಮತ್ತು ಅವರ ಸಾಮಗ್ರಿಗಳನ್ನು ಕಾರ್ಯಕರ್ತರು ಸುರಕ್ಷಿತ ಸ್ಥಳಗಳಿಗೆ  ಸ್ಥಳಾಂತರಿಸಿದರು. ಬೋಳಂಗಡಿ ಶಾಲೆಯ ಗಂಜಿ ಕೇಂದ್ರಕ್ಕೆ ಬೇಕಾದ ವ್ಯವಸ್ಥೆ ಮಾಡಲಾಯಿತು.
ಕೊಡಗಿನ ಜೋಡುಪಾಲದಲ್ಲಿ ಗುಡ್ಡ ಕುಸಿದ ಸಂತ್ರಸ್ತರ ಕೇಂದ್ರಗಳಿಗೆ ಭೇಟಿ ನೀಡಲಾಯಿತು. ಸಂಪಾಜೆ, ಆರಂತೋಡು, ಕಲ್ಲುಗುಂಡಿ ಮುಂತಾದ ಸಂತ್ರಸ್ತರ ಶಿಬಿರಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸಲಾಯಿತು.

 

ಕೊಡಗಿನ ಪೀಡಿತ ಸ್ಥಳಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ತಂಡವು ಧಾವಿಸಿತಲ್ಲದೆ,  ಕುಶಾಲ್ ನಗರ, ಸಿದ್ಧಾಪುರ, ವಿರಾಜಪೇಟೆ, ಮಡಿಕೇರಿ, ಮಕ್ಕಂದೂರು ಮುಂತಾದ ಕಡೆಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಯಿತು ಮತ್ತು  ಜಲಾವೃತಗೊಂಡ ಪ್ರದೇಶದ ಮನೆಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಗಂಜಿ ಕೇಂದ್ರಗಳಿಗೆ ಭೇಟಿ ನೀಡಲಾಯಿತಲ್ಲದೆ,  ಗಂಜಿ ಕೇಂದ್ರಗಳಿಗೆ ಮತ್ತು ಸಂತ್ರಸ್ತರಿಗೆ ಬೇಕಾದ ಸಾಮಗ್ರಿಗಳನ್ನು ಪೂರೈಸಲಾಯಿತು.  ಕೊಡಗು ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಯಿತು.  ಸದ್ಯ ಕಾರ್ಯಕರ್ತರು ಹಗಲು ರಾತ್ರಿಯೆನ್ನದೆ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್, ಹೆಚ್.ಆರ್.ಎಸ್ ಮುಂದಿನ ದಿನಗಳಲ್ಲಿ ದುರಂತ ಪೀಡಿತ ಸ್ಥಳಗಳ ಸಂಪೂರ್ಣ ಅಧ್ಯಯನ ನಡೆಸಿ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿಯ ಕಾರ್ಯ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವ್ರತವಾಗಲಿದೆ.