ಹೊಸ ವರ್ಷವು ಅಶಾಂತಿ, ಒಡಕುಗಳನ್ನು ಹೋಗಲಾಡಿಸಿ ಸರ್ವರಿಗೂ ಸಹಬಾಳ್ವೆಯ ಸವಿಯನ್ನು ಹಂಚಲಿ: ಬಿಸಿಸಿಐ ಹಾಗೂ ಡಿಕೆಎಂಎ ಅಧ್ಯಕ್ಷ ರಶೀದ್ ಹಾಜಿ

0
452

ಸನ್ಮಾರ್ಗ ವಾರ್ತೆ

ಮಂಗಳೂರು: ಕಳೆದೆರಡು ವರ್ಷಗಳಿಂದ ಕೊರೋನ ಸಾಂಕ್ರಾಮಿಕ ರೋಗದಿಂದಾಗಿ ವಿವಿಧ ರೀತಿಯಲ್ಲಿ ಸಂಕಷ್ಟಗಳನ್ನೇ ಎದುರಿಸಿ ನಮ್ಮ ಸಮಾಜವು ಬೇಸತ್ತಿದೆ. 2೦22ರ ಹೊಸ ವರ್ಷದೊಂದಿಗೆ ಬರಲಿರುವ ಮುಂದಿನ ದಿನಗಳನ್ನು ಸೃಷ್ಟಿಕರ್ತನು ಜಗತ್ತಿನ ಅತ್ಯುತ್ತಮವಾದ ದಿನಗಳನ್ನಾಗಿ ಮಾಡಲಿ. ಎಲ್ಲರ ಜೀವನದಲ್ಲಿ ಭರವಸೆಗಳನ್ನು ಹೊಂದಿದ ನವ ಚೈತನ್ಯ ಮತ್ತು ಹುರುಪನ್ನು ನೀಡಿ ಅನುಗ್ರಹಿಸಲಿ ಎಂದು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(B.C.C.I.) ಹಾಗೂ ದಕ್ಷಿಣ ಕನ್ನಡ ಮುಸ್ಲಿಮ್ ಅಸೋಸಿಯೇಷನ್(D.K.M.A.) ಇದರ ಅಧ್ಯಕ್ಷರಾಗಿರುವ ರಶೀದ್ ಹಾಜಿಯವರು ಹೊಸ ವರ್ಷದ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.

ಸಹೋದರತೆ, ಸೌಹಾರ್ದತೆ ಹಾಗೂ ಸಾಮರಸ್ಯವು ಇಂದಿನ‌ ಸಮಾಜದ ಬೇಡಿಕೆಯಾಗಿದೆ. ಕೊರೋನದಂತಹ ಸಂದಿಗ್ಧ ಪರಿಸ್ಥಿತಿಯ ನಡುವೆ ಪರಸ್ಪರಿಗೆ ಸಹಾಯ ಹಸ್ತ ಚಾಚುವ ಪ್ರಯತ್ನಗಳು ನಡೆಯಬೇಕಾದುದು ಈಗಿನ ಅವಶ್ಯಕತೆಯಾಗಿದೆ. ಹಾಗಾಗಿ ಅಶಾಂತಿ, ಕೆಡುಕು, ಒಡಕುಗಳಿಂದ ದೂರ ಉಳಿದು ರೋಗ ಮುಕ್ತವಾದ ವಾತಾವರಣ ಮುಂಬರುವ ದಿನಗಳಲ್ಲಿ ಸರ್ವರಿಗೂ ಲಭಿಸುವಂತಾಗಲಿ ಹಾಗೂ ಸಹಬಾಳ್ವೆಯನ್ನು ಸವಿಯಲು ಭಗವಂತನು ಸಕಲರಿಗೂ ಸದ್ಬುದ್ಧಿ ನೀಡಲಿ ಎಂಬುವುದಾಗಿ ಅವರು ಶುಭ ಹಾರೈಸಿದರು.