ಮಂಗಳೂರು ಗೋಲಿಬಾರ್: ಮೃತರಿಬ್ಬರು ಅಪರಾಧಿಗಳು ಎಂಬ ಶಂಕೆ; ಪರಿಹಾರ ಅಮಾನತಿನಲ್ಲಿ; ಯಡಿಯೂರಪ್ಪ

0
744

ಸನ್ಮಾರ್ಗ ವಾರ್ತೆ-

ಡಿ. 25- ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಗೋಲಿಬಾರ್ ಗೆ ಮೃತಪಟ್ಟ ಇಬ್ಬರಿಗೆ ರಾಜ್ಯ ಸರಕಾರ ಘೋಷಿಸಿರುವ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ತಕ್ಷಣಕ್ಕೆ ಕೊಡಲಾಗದು ಮತ್ತು ಅವರು ಅಪರಾಧಿಗಳು ಅನ್ನುವ ಶಂಕೆ ವ್ಯಕ್ತವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಅವರು ನಗರದ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮಗಳ ಜೊತೆ ಮಾತಾಡುತ್ತಿದ್ದರು.

ಗೋಲಿಬಾರ್ ನಲ್ಲಿ ಮೃತಪಟ್ಟವರು ಅಪರಾಧಿಗಳು ಎಂಬ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಈಗಲೇ ಪರಿಹಾರವನ್ನು ಕೊಡಲು ಸಾಧ್ಯವಿಲ್ಲ. ತನಿಖೆಯ ನಂತರವೇ ರಾಜ್ಯ ಸರಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಒಂದು ವೇಳೆ ಮೃತರಿಬ್ಬರು ಅಪರಾಧಿಗಳೆಂದು ಸಾಬೀತಾದರೆ ಪರಿಹಾರವನ್ನು ನೀಡಲಾಗದು ಎಂದೂ ಅವರು ಹೇಳಿದ್ದಾರೆ. ಈ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳೂರಿಗೆ ಭೇಟಿ ಕೊಟ್ಟಿದ್ದ ವೇಳೆ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿದ್ದರಲ್ಲದೆ ತಲಾ 10 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ಘೋಷಿಸಿದರು.

ಇದೇ ವೇಳೆ ಮಂಗಳೂರಿನ ಪೊಲೀಸರನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದ್ದು, ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಪರಿಸ್ಥಿತಿ ನಿರ್ವಹಿಸಲು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದಾರೆ. ಅವರನ್ನು ಸರಕಾರ ಬೆಂಬಲಿಸುತ್ತದೆ. ಸಬ್ಇ ನ್ಸ್ಪೆಕ್ಟರ್ ಅವರನ್ನು ಅಮಾನತು ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದ್ದರೂ ಬಗ್ಗೆ ಈಗಲೇ ಯಾವುದೇ ಕ್ರಮವನ್ನು ಕೈಗೊಳ್ಳಲಾಗುವುದು. ತನಿಖೆಯ ನಂತರವೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಅದೇ ವೇಳೆ ಶೋಭಾ ಕರಂದ್ಲಾಜೆ ಮಾತನಾಡಿ, ಅಪರಾಧಿಗಳಿಗೆ ಪರಿಹಾರ ಕೊಡುವ ಪದ್ಧತಿ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.