‘ನನ್ನ ಕುಟುಂಬದೊಂದಿಗೆ ಯಾವುದೇ ಸಂಬಂಧವಿಲ್ಲ’: ಸಹೋದರನ ವಿರುದ್ಧ ಗುಂಡಿನ ದಾಳಿ ಪ್ರಕರಣ ದಾಖಲಾಗುತ್ತಿದ್ದಂತೆ ಧೀರೇಂದ್ರ ಶಾಸ್ತ್ರಿ ಹೇಳಿಕೆ

0
315

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಗುಂಡಿನ ದಾಳಿ ಮತ್ತು ಹಲ್ಲೆ ಪ್ರಕರಣದಲ್ಲಿ ತಮ್ಮ ಕಿರಿಯ ಸಹೋದರ ಶಾಲಿಗ್ರಾಮ್ ಗರ್ಗ್ ವಿರುದ್ಧ ಪ್ರಕರಣ ದಾಖಲಾದ ನಂತರ, ಬಾಗೇಶ್ವರ್ ಧಾಮ್‌ನ ಮುಖ್ಯ ಅರ್ಚಕ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ತನ್ನ ಸಹೋದರನೊಂದಿಗೆ ಯಾವುದೇ ಸಂಪರ್ಕವಿಲ್ಲ ಮತ್ತು ಕಾನೂನು ತನ್ನ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಶಾಲಿಗ್ರಾಮ್ ಕಳೆದ ಕೆಲವು ವರ್ಷಗಳಿಂದ ಅನೇಕ ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಛತ್ತರ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಜತ್ ಸಕ್ಲೆಚಾ, ರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಾ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ನಡೆದ ವಿವಾದವು ಗುಂಡಿನ ದಾಳಿಗೆ ತಿರುಗಿದೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿದೆ ಎಂದರು.

ಈ ಕುರಿತು ಮಾಹಿತಿ ನೀಡಿದ ಎಸ್‌ಪಿ, ಎರಡು ಗುಂಪುಗಳ ನಡುವಿನ ವಿವಾದವು ಒಂದು ಕಡೆಯವರು ಆರಂಭಿಸಿದ ಗುಂಡಿನ ದಾಳಿಯ ಘಟನೆಯಾಗಿ ಮಾರ್ಪಟ್ಟಿದೆ. ಗಾಯಗೊಂಡ ವ್ಯಕ್ತಿಯೊಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ದೇಹದಲ್ಲಿ ಗುಂಡು ಇರುವುದು ಕಂಡುಬಂದಿದೆ. ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದ್ದು, ಅದರಲ್ಲಿ ಶಾಲಿಗ್ರಾಮ್ ಒಬ್ಬರು ಎಂದು ತಿಳಿಸಿರುವುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಗಾಯಗೊಂಡ ದೂರುದಾರ ಮೋತಿಲಾಲ್ ಕುಶ್ವಾಹ, ಶಾಲಿಗ್ರಾಮ್ ಮತ್ತು ಇತರರು ಗುಂಡು ಹಾರಿಸುವ ಮುನ್ನ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಲಿಗ್ರಾಮ್ ಗರ್ಗ್, ಅಂಕಿತ್ ಮಿಶ್ರಾ ಮತ್ತು ಇತರ ಇಬ್ಬರು ಅಥವಾ ಮೂವರು ಅಲ್ಲಿ ಇದ್ದರು. ಅವರು ತಮ್ಮ ಮೇಲೆ ಹಲ್ಲೆ ನಡೆಸಿ ಪಿಸ್ತೂಲ್‌ನಿಂದ ಮೂರು ಅಥವಾ ನಾಲ್ಕು ಸುತ್ತು ಗುಂಡು ಹಾರಿಸಿದರು. ಶಾಲಿಗ್ರಾಮ್ ಗರ್ಗ್ ಕೋಲಿನಿಂದ ಹೊಡೆದಿದ್ದಾರೆ ಮತ್ತು ಅವರು ಜನರ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಕುಶ್ವಾಹ ಆರೋಪಿಸಿದ್ದಾರೆ.

ಈ ಪ್ರಕರಣವು ಶಾಸ್ತ್ರಿ ಅವರ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ವಿವಾದಗಳ ಸರಣಿಗೆ ಸೇರ್ಪಡೆಗೊಂಡಿದೆ. ಇತ್ತೀಚಿನ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಶಾಸ್ತ್ರಿ, ತಮಗೆ ತಮ್ಮ ಸಹೋದರನೊಂದಿಗೆ ಯಾವುದೇ ಸಂಪರ್ಕವಿಲ್ಲ ಮತ್ತು ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಪ್ರತಿಯೊಂದು ಘಟನೆಗೂ ತಮ್ಮನ್ನು ಲಿಂಕ್ ಮಾಡಬಾರದು ಎಂದು ಹೇಳಿದರು. ಅವನಿಗೂ ತಮಗೂ ಯಾವುದೇ ಸಂಬಂಧವಿಲ್ಲ, ಇಡೀ ಜಗತ್ತು ಮತ್ತು ಸಮಾಜವೇ ತಮ್ಮ ಕುಟುಂಬ. ತಾನು ಸಮಾಜಕ್ಕಾಗಿ, ರಾಷ್ಟ್ರಕ್ಕಾಗಿ ಮತ್ತು ಸನಾತನ ಧರ್ಮಕ್ಕಾಗಿ ಬದುಕುತ್ತಿದ್ದೇನೆ. ಛತ್ತರ್‌ಪುರ ಜಿಲ್ಲೆ ಮತ್ತು ತಮ್ಮ ಕುಟುಂಬ ವಿಶಾಲವಾಗಿರುವುದರಿಂದ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳಲಿ ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ. ಯಾರೇ ಜವಾಬ್ದಾರರಾಗಿದ್ದರೂ ಅವರು ಅತ್ಯಂತ ಕಠಿಣ ಶಿಕ್ಷೆಯನ್ನು ಎದುರಿಸಬೇಕು, ಪ್ರತಿ ವಿಷಯಕ್ಕೂ ತಮ್ಮನ್ನು ಎಳೆದು ತರಬೇಡಿ ಎಂದು ಶಾಸ್ತ್ರಿ ಮನವಿ ಮಾಡಿದ್ದಾರೆ.

ಶಾಲಿಗ್ರಾಮ್ ಈ ಹಿಂದೆ ಎದುರಿಸಿದ ಪ್ರಕರಣಗಳಲ್ಲಿ ಹಲ್ಲೆ, ಬೆದರಿಕೆ ಮತ್ತು ಬಂದೂಕುಗಳ ಬಳಕೆ ಸೇರಿದಂತೆ ಹಲವು ಆರೋಪಗಳಿವೆ. ಫೆಬ್ರವರಿ 2023 ರಲ್ಲಿ ಮದುವೆಯೊಂದರಲ್ಲಿ ದಲಿತ ಕುಟುಂಬವೊಂದಕ್ಕೆ ಬಂದೂಕು ತೋರಿಸಿ ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್ ಆದ ನಂತರ ಛತ್ತರ್‌ಪುರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿತ್ತು ಮತ್ತು ಪೊಲೀಸರು ಶಾಲಿಗ್ರಾಮ್ ಅವರನ್ನು ಬಂಧಿಸಿದ್ದರು, ನಂತರ ಸ್ಥಳೀಯ ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.

ಏಪ್ರಿಲ್ 2024 ರಲ್ಲಿ, ಟೋಲ್ ಪ್ಲಾಜಾ ನೌಕರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಗುಲ್ಗಂಜ್ ಪೊಲೀಸರು ಶಾಲಿಗ್ರಾಮ್ ಮತ್ತು ಇತರರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ್ದರು. ಜೂನ್ 2024 ರಲ್ಲಿ, ಬಾಗೇಶ್ವರ್ ಧಾಮ್‌ಗೆ ಸಂಬಂಧಿಸಿದ ಕುಟುಂಬವೊಂದು ಶಾಲಿಗ್ರಾಮ್ ಮತ್ತು ಅವರ ಸಹಚರರು ತಮ್ಮ ಮನೆಗೆ ನುಗ್ಗಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ನಂತರ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.