ನಮ್ಮ ದುಡ್ಡಲ್ಲಿ, ನಾವೇ ಊರಿಗೆ ಹೋಗಿ, ಕ್ವಾರಂಟೀನ್‍ನಲ್ಲಿ ಉಳಿದರೂ ಹೆಸರು ಮಾತ್ರ ನಿಮ್ಮದು: ಇದೆಂಥಾ ತೀಟೆ? ಅನಿವಾಸಿಗಳಿಗಾದ ತೊಂದರೆಯ ಬಗ್ಗೆ ಅನಿವಾಸಿ ಕಾಮೆಂಟ್

0
2920

ಸನ್ಮಾರ್ಗ ವಾರ್ತೆ

ಅಲ್ಮೈಡಾ ಗ್ಲಾಡ್ಸನ್

ಟಿಕೇಟ್ ಹಣ NRIಗಳದ್ದೂ. ಅದೂ ಎಂದಿಗಿಂತ ಹೆಚ್ಚು. ಹಿಂದೆ two-way ಟಿಕೇಟಿಗೆ ಕೊಟ್ಟಷ್ಟೇ ಹಣ ಈವಾಗ one-way ಟಿಕೇಟ್ಟಿಗೆ. ಊರಿಗೆ ಬಂದನಂತರ ಕ್ವಾರಂಟೀನ್ ದುಡ್ಡು NRIಗಳದ್ದು. ಊಟ, ಔಷಧಿ ದುಡ್ಡು NRIಗಳದ್ದು. ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಕ್ವಾರಂಟೀನ್‍ಗೆ ತಲುಪಬೇಕಾದರೆ ಐದಾರು ಗಂಟೆ. ಕ್ವಾರಂಟೀನ್‍ಗೆ ಉಳಿದ ಹೊಟೇಲಿನಲ್ಲಿ ವಸತಿಗೆ, ಊಟಕ್ಕೆ ಪ್ರತ್ಯೇಕ ಹಣ. ಒಂದು ರೂಮಿಗೆ ದಿನಕ್ಕೆ ಒಂದರಿಂದ ಎರಡು ಸಾವಿರ ಬಾಡಿಗೆ ಪ್ಲಸ್ ಊಟದ ಖರ್ಚು. ಇಷ್ಟೆಲ್ಲಾ ನಾವೇ ಮಾಡಿ ಹೆಸರು ಮಾತ್ರ ಸರ್ಕಾರದ್ದು. ಇದುವೇ ವಂದೇ ಭಾರತ್ ಮಿಷನ್. ಇದು ನೀವು ಹೇಳುತ್ತಿರುವಂತೆ, ಮಾಧ್ಯಮಗಳ ಬೆನ್ನೆಲುಬು ಇಲ್ಲದ ಎಂಜಲು ಕಾಸು ಗಿರಾಕಿಗಳು ಹೇಳುತ್ತಿರುವಂತೆ Evacuation ಅಲ್ಲ, ಏರ್ ಲಿಫ್ಟೂ ಅಲ್ಲ. ನಮ್ಮದೇ ದುಡ್ಡಲ್ಲಿ ನಾವು ಎಂದಿನಂತೆ ನಮ್ಮ ದೇಶಕ್ಕೆ ಪ್ರಯಾಣಿಸುತ್ತಿದ್ದೇವೆ. ವಿಮಾನ ಸಂಚಾರ ಇಲ್ಲದ ಸಮಯದಲ್ಲಿ ವಿಮಾನ ಅರೇಂಜ್ ಮಾಡಿದ್ದಷ್ಟೇ ಸರಕಾರದ ಕೆಲಸ. ಒಂದ್ವೇಳೆ ಭಾರತದ ವಿಮಾನಗಳಲ್ಲದಿದ್ದರೆ, ಇಲ್ಲಿನ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ಕೊಟ್ಟಿದ್ದರೆ ಅವರೇ, ಏರ್ ಇಂಡಿಯಾಗಿಂತ ಕಡಿಮೆ ದರದಲ್ಲಿ ನಮ್ಮನ್ನು ಭಾರತಕ್ಕೆ ಕರೆತಂದು ಬಿಟ್ಟಿರುತ್ತಿದ್ದರು.

ಊರಿಗೆ ಹೋಗಲೇಬೇಕಾದ ಗರ್ಭಿಣಿಯರು, ಮಕ್ಕಳು, ಹಿರಿಯರು, ಬೇರೆ-ಬೇರೆ ರೋಗದಿಂದ ಬಳಲುತ್ತಿರುವವರು, ವಿಸಿಟಿಂಗ್, ಟೂರಿಸ್ಟ್ ವೀಸಾದ ಮೇಲೆ ಇಲ್ಲಿ ಬಂದು ಸಿಲುಕಿಕೊಂಡವರಷ್ಟೇ ಸದ್ಯಕ್ಕೆ ಪ್ರಯಾಣಿಸುತ್ತಿದ್ದಾರೆ. ಆನಂತರ ಕೆಲಸ ಕಳೆದುಕೊಂಡವರು ಯಾರಿದ್ದರೆ, ಅವರೂ ಹೋಗಬಹುದು. ಇಲ್ಲಿನ ಕೊರೋನಾ ಪರಿಸ್ಥಿತಿಗೆ ಹೆದರಿ ಯಾರೂ ಹೋಗುತ್ತಿಲ್ಲ. ಯಾಕೆಂದರೆ ಇಲ್ಲಿನ ಸರ್ಕಾರಗಳು ಕೋವಿಡ್ ಪೀಡಿತರಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ, ಕ್ವಾರಂಟೀನ್ ವ್ಯವಸ್ಥೆ ಮಾಡುತ್ತಿದ್ದಾರೆ, ಯಾವ ದೇಶದವರಾದರೂ ಕೂಡಾ. ಅವರ ಬಳಿ ವ್ಯಾಲೀಡ್ ವೀಸಾ ಇಲ್ಲದಿದ್ದರೂ, ಕೋವಿಡ್ ಪೀಡಿತರಾದರೆ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡುತ್ತಿದ್ದಾರೆ. ವಿಸಿಟಿಂಗ್, ಟೂರಿಸ್ಟ್ ಮುಂತಾದ ವೀಸಾದ ಮೇಲೆ ಬಂದು ಅವಧಿ ಮುಗಿದರೂ, ಪ್ರಯಾಣಿಸಲಾಗದವರ ಮೇಲೆ ಯಾವುದೇ ರೀತಿಯ ದಂಡ ಹಾಕುತ್ತಿಲ್ಲ. ಎಲ್ಲವೂ ಸರಿಯಾದ ಮೇಲೆ ಅವರಿಗೆ ತಮ್ಮ ದೇಶಗಳಿಗೆ ಪ್ರಯಾಣಿಸಲು ಇಂತಿಷ್ಟು ದಿನಗಳ ಸಮಯ ನೀಡುತ್ತೇವೆ. ಅಷ್ಟರವರೆಗೆ ಯಾರೂ ಹೆದರಬೇಕಾಗಿಲ್ಲ ಎಂದು ಅಭಯಹಸ್ತ ನೀಡುತ್ತಿವೆ ಇಲ್ಲಿನ ಸರ್ಕಾರಗಳು.

ಆದರೆ ನಮ್ಮದೇ ದುಡ್ಡಲ್ಲಿ, ನಮ್ಮದೇ ದೇಶಕ್ಕೆ ಪ್ರಯಾಣಿಸುತ್ತಿರುವವರಿಗೆ ನಮ್ಮ ದೇಶದಲ್ಲಿ ಆಗುತ್ತಿರುವ ಅವಸ್ಥೆ ನೋಡಿದರೆ, ಊರಿಗೆ ಹೋಗಲು ಯೋಚಿಸಿದವರೂ ಹತ್ತಾರು ಬಾರಿ ಹಿಂದು-ಮುಂದು ನೋಡಬಹುದು ಈವಾಗ. ನಮಗೆ ಫ್ರೀಯಾಗಿ ಪ್ರಯಾಣ ವ್ಯವಸ್ಥೆ ಮಾಡಿಕೊಡಿ ಎಂದು ಯಾರೂ ಕೇಳುತ್ತಿಲ್ಲ. ಆದರೆ ದುಡ್ಡು ಕೊಟ್ಟ ಮೇಲೆ, ಕನಿಷ್ಟ ಸೌಲಭ್ಯಗಳನ್ನಾದರೂ ಕೊಡಲು ಏನು ತೊಂದರೆ? ನಮ್ಮ ದುಡ್ಡಲ್ಲಿ, ನಾವೇ ಊರಿಗೆ ಹೋಗಿ, ಕ್ವಾರಂಟೀನ್‍ನಲ್ಲಿ ಉಳಿದರೂ ಹೆಸರು ಮಾತ್ರ ನಿಮ್ಮದು. ಇದೆಂಥಾ ತೀಟೆ?

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.