ಪ್ರವಾದಿವರ್ಯರ(ಸ) ಪ್ರಭಾವದ ಅಲೆಯಲ್ಲಿ ಖದೀಜಾ(ರ)- 04
ಸನ್ಮಾರ್ಗ ವಾರ್ತೆ
✍️ ವಿ.ಕೆ. ಜಲೀಲ್
ಕಅಬಾಕ್ಕೆ ಸಂಬಂಧಿಸಿ ಅಬೂಲಹಬ್ ಕೂಡಾ ಸಾರ್ವಜನಿಕ ಸೊತ್ತುಗಳ ಸಂರಕ್ಷಕನಾಗಿದ್ದ. ಈ ವಿಚಾರದಲ್ಲಿ ಆತ ನಂಬಿಕಸ್ಥನಾಗಿರಲಿಲ್ಲ. ಸಾರ್ವಜನಿಕ ಸೊತ್ತುಗಳನ್ನು ತನ್ನ ಸಂಪಾದನೆಯೊಂದಿಗೆ ಸೇರಿಸಿ ದೊಡ್ಡ ಶ್ರೀಮಂತನಾದನು. ಇದರ ಪಾಪಗಳನ್ನು ಆತ ಬೇರೆ ಬೇರೆ ವಿಧದಲ್ಲಿ ಅನುಭವಿಸಬೇಕಾಯಿತು. ಕೊನೆಗೆ ಆತನನ್ನು ಅದು ದರಿದ್ರನನ್ನಾಗಿಸಿತು.
“ಮುಹಮ್ಮದ್ ಸಹಿತ ನಮ್ಮ ಮಕ್ಕಳು ದೊಡ್ಡವರಾದರೆ ನಮ್ಮ ಸಂಕಷ್ಟದ ಕಾಲಗಳು ಮುಗಿದು ಹೋಗಲಿದೆ ಎಂದು ಪತ್ನಿ ಫಾತಿಮಾ ಆಗಾಗ ಸಾಂತ್ವನಿಸುತ್ತಿದ್ದ ಮಾತುಗಳು ಕೇಳುವಾಗ ದಾಹ ತಣಿಯುವಷ್ಟು ಝಂ ಝಂ ನೀರನ್ನು ಸಾಮಾನ್ಯವಾಗಿ ಕುಡಿಯುತ್ತಿದ್ದರು. ಅಬೂತಾಲಿಬ್ರ ಯೋಚನಾ ಲಹರಿ ಮುಹಮ್ಮದ್ರ ಜೊತೆಗಿನ ತನ್ನ ಶಾಮ್ ಪ್ರಯಾಣದ ಕಡೆಗೆ ಹರಿಯಿತು. ಅಂದು ಉತ್ತರ ಭಾಗದತ್ತ ಸಂಚರಿಸುತ್ತಾ ಶಾಮ್ ಹತ್ತಿರವಾಗುವಷ್ಟರಲ್ಲಿ `ಬುಸ್ರಾ’ ಎಂಬಲ್ಲಿ ಬಹೀರಾ ಎಂಬ ಪಾದ್ರಿಯನ್ನು ಭೇಟಿಯಾದರು. ತನ್ನ ಆರಾಧನಾ ಸ್ಥಳದ ಹೊರಭಾಗದಲ್ಲಿ ಅವರು ಏನೋ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮುಹಮ್ಮದ್ ರನ್ನು ಕಂಡೊಡನೆ ಅವರು ತುಂಬಾ ಹೊತ್ತು ಬಹಳ ಗಮನವಿಟ್ಟು ನೋಡುತ್ತಾ ನಿಂತರು. ತನ್ನೊಡನೆ ಕೆಲವಾರು ವಿಚಾರಗಳನ್ನು ಕೇಳಿ ತಿಳಿದು ಕೊಂಡರು. ಬಳಿಕ ಒಳಗೆ ಹೋಗಿ ಹಲವಾರು ಹಣ್ಣು- ಹಂಪಲುಗಳನ್ನು ತಂದು ನಮ್ಮಿಬ್ಬರನ್ನು ಸತ್ಕರಿಸಿದರು. ನಂತರ ಹೇಳಿದರು, “ಈ ಹುಡುಗನಲ್ಲಿ ನಮ್ಮ ಗ್ರಂಥಗಳಲ್ಲಿ ಪರಾಮರ್ಶಿಸಲಾದ ಹಲವಾರು ಗುಣಲಕ್ಷಣಗಳು ಗೋಚರಿಸುತ್ತಿವೆ. ಭಾರೀ ಭವಿಷ್ಯವನ್ನು ಪ್ರಸ್ತುತ ಪಡಿಸಿದೆ. ಹುಡುಗನನ್ನು ಸಿರಿಯಾದ ಒಳ ಭಾಗದತ್ತ ಕರೆದುಕೊಂಡು ಹೋಗದಿರುವುದು ಹೆಚ್ಚು ಸುರಕ್ಷಿತ. ಯಹೂದಿಗಳ ಕಣ್ಣಿಗೆ ಬೀಳದಿರುವುದು ಉತ್ತಮ…
ಇದನ್ನು ಕೇಳಿದ ನನಗೆ ಭಯವಾಯಿತು. ಎಲ್ಲರ ಕಣ್ಣುಗಳೂ ಮುಹಮ್ಮದರತ್ತ ಬೀಳುವುದೇ ಎಂಬ ಆತಂಕ ಮೂಡಿತ್ತು. ಅಂದು ವ್ಯಾಪಾರವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹಿಂದಿರುಗಿದ್ದೆ.
ಅಬೂತಾಲಿಬ್ ಯೋಚನಾ ಲಹರಿಯಿಂದ ಹೊರಬಂದು ಶುಭ ವಿಚಾರಗಳತ್ತ ಹೊರಳಿದರು. ಆಕಸ್ಮಿಕವಾಗಿ ಕೇಳಲಾಗುವ ಕೆಲವು ಮಾತುಗಳು…
ಕೆಲವೊಮ್ಮೆ ಮಾನವ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯುಂಟಾಗುತ್ತಾ? ಮುಹಮ್ಮದ್ ಖದೀಜಾರ ವ್ಯಾಪಾರದ ಮುಖ್ಯ ಹೊಣೆಗಾರಿಕೆಯನ್ನು ವಹಿಸಿದ ಘಟನೆಯನ್ನು ಸೇರಿಸಿ ಅವರು ಸ್ಮರಿಸಿದರು.
ಬಹುಶಃ ಎರಡು ತಿಂಗಳ ಹಿಂದಿನ ಘಟನೆಯಾಗಿತ್ತದು. ಸಹೋದರಿ ಆತಿಕಾ, ಪುತ್ರರಾದ ಅಬ್ದುಲ್ಲಾ ಮತ್ತು ಝುಬೈರ್ರೊಂದಿಗೆ ಮನೆಗೆ ಬಂದರು. ಅದೊಂದು ಸಾಮಾನ್ಯವಾದ ಭೇಟಿಯಾಗಿತ್ತು. ಅತ್ತೆ ಹಾಗೂ ಬಾವಂದಿರ ಆಗಮನ ಕಂಡು ಎಲ್ಲಿಯೋ ಇದ್ದ ಮುಹಮ್ಮದ್ ಸ್ವಾಗತಿಸುತ್ತಾ ಅಲ್ಲಿಗೆ ಆಗಮಿಸಿದರು. ಎಲ್ಲರೂ ಒಟ್ಟುಗೂಡಿದಾಗ ಕುಟುಂಬದ ವಿಶೇಷತೆಗಳ ಕುರಿತ ಕುಶಲೋಪರಿಯ ಮಾತುಕತೆ ಆರಂಭವಾಯಿತು. “ಮುಹಮ್ಮದ್ನ ಹೊಸ ವಿಶೇಷತೆಗಳೇನು?” ಎಂದು ಆತಿಕಾ ಕೇಳಿದರು. ಆಗ ನಾನೇ ಉತ್ತರಿಸಿದೆ, “ಮುಹಮ್ಮದ್ನ ಕುರಿತು ಒಳ್ಳೆಯದನ್ನಲ್ಲದೆ ಹೇಳಲು ಇನ್ನೇನಿದೆ? ಉಕ್ಕಾಲಿ, ಮಜನ್ನಾ, ನಖ್ಲಾ ಮುಂತಾದೆಡೆಗೆ ಈ ವರ್ಷವೂ ವ್ಯಾಪಾರಕ್ಕೆ ಸಂತೆಗಳಿಗೆ ಹೋಗಿದ್ದೆ. ವ್ಯಾಪಾರದ ಮರ್ಮವನ್ನು ಚೆನ್ನಾಗಿ ಕಲಿತ. ದೈನಂದಿನ ಖರ್ಚುಗಳಿಗೆ ಸಂಪಾದಿಸುತ್ತಾನೆ. ಆದರೆ ಹೆಚ್ಚು ಹಣ ಗಳಿಸಲು ದೊಡ್ಡ ಆಸಕ್ತಿಯಿಲ್ಲ. ಸಿಗುವುದರಲ್ಲಿ ದೊಡ್ಡ ಅಂಶವನ್ನು ಬಡಬಗ್ಗರಿಗೆ ಹಂಚುತ್ತಾನೆ. ಈ ಊರಲ್ಲೆಲ್ಲಾ ಬಡತನವಲ್ಲವೇ? ಇನ್ನು ಯಾವ ದಿಕ್ಕಿನಲ್ಲಿ ಹೋದರೂ ಮೋಸ ವಂಚನೆ ಹೆಚ್ಚಾಗಿರುತ್ತದೆ ಎಂಬುದು ಅವನ ವಾದ. ಅದೂ ಕೂಡಾ ಸರಿ ತಾನೇ.”
ಮುಹಮ್ಮದ್ ಮುಗುಳ್ನಗುತ್ತಾ ಎಲ್ಲವನ್ನೂ ಆಲಿಸುತ್ತಿದ್ದರು. ಆಗ ಕೆಲ ದಿನಗಳಿಂದ ತನ್ನ ಮನದಲ್ಲಿ ಜೋಪಾನವಾಗಿಟ್ಟಿದ್ದ ಕೆಲವು ವಿಚಾರಗಳನ್ನು ಮನಬಿಚ್ಚಿ ಹೇಳಿದರು, “ಮಗನೇ ಮುಹಮ್ಮದ್, ಎರಡು ಮೂರು ದಿನಗಳಿಂದ ಒಂದು ವಿಚಾರದ ಬಗ್ಗೆ ನಿನ್ನ ಜೊತೆ ಮಾತಾಡಬೇಕೆಂದು ಬಯಸಿದ್ದೆ. ನಮ್ಮ ಬಗ್ಗೆ ನಿನಗೆ ತಿಳಿದಿದೆಯಲ್ಲವೇ? ಕೆಲ ಕಾಲದಿಂದ ನಾವು ಸ್ವಲ್ಪ ಸಂಕಷ್ಟದಲ್ಲಿದ್ದೇವೆ. ನನಗೆ ಸಂಬಂಧಿಸಿ ಹೇಳುವುದಾದರೆ ಮುಂದಿನ ದಿನಗಳೂ ತುಂಬಾ ತ್ರಾಸದಾಯಕವಾಗಿರುವುದು ಎಂದು ತೋರುತ್ತದೆ. ಕುರೈಶರ ಪ್ರಮುಖ ವ್ಯಾಪಾರ ತಂಡಗಳು ಶಾಮ್ನತ್ತ ಹೊರಡುವ ತಯಾರಿಯಲ್ಲಿ ತೊಡಗಿ ಕೆಲ ದಿನಗಳಾದವು. ನಮ್ಮ ಖದೀಜ ಒಂದು ದೊಡ್ಡ ಸಂಘವನ್ನು ಸಿದ್ಧಗೊಳಿಸುತ್ತಿದ್ದಾರೆ. ಉತ್ತಮ ವೇತನ ನೀಡಿ ಈ ಬಾರಿಯೂ ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಖದೀಜರನ್ನು ನಿನಗೆ ಭೇಟಿಯಾಗಬಹುದಲ್ಲವೇ? ನಿನ್ನ ಬಗ್ಗೆ ಖದೀಜರಿಗೆ ಚೆನ್ನಾಗಿ ತಿಳಿದಿರುವ ಕಾರಣ ಅವರೂ ಸಂತೋಷಭರಿತರಾಗಬಹುದು. ಅಬೂತಾಲಿಬರ ಸೇವಕಿ ನಗ್ಬಾ ಸಹಿತ ಎಲ್ಲರೂ ಈ ಮಾತು ಗಳನ್ನು ಆಲಿಸುತ್ತಿದ್ದರು. ಮುಹಮ್ಮದ್ ಚೆನ್ನಾಗಿ ಯೋಚಿಸಿದ ನಂತರ ಮೆಲ್ಲನೆ ಹೀಗೆ ಹೇಳಿದರು. ಖದೀಜಾರ ಕಡೆಯಿಂದ ಇಂತಹದ್ದೊಂದು ಆಹ್ವಾನ ಬಂದಿದೆ ಎಂದಾದರೆ!
ಅದು ಇದು ಎಂದು ಹೇಳಿ ಚರ್ಚಿಸುತ್ತಾ ಕುಳಿತರೆ ಸಿಗುವ ಅವಕಾಶ ನಷ್ಟವಾಗಬಹುದು ಎಂದು ನಾನು ನೆನಪಿಸಿದೆ. ಖದೀಜಾರನ್ನು ನೇರವಾಗಿ ಭೇಟಿಯಾಗಲು ಸಂಕೋಚವಿದೆ ಎಂಬುದನ್ನು ನಾನು ಅರ್ಥೈಸಿದೆ.












