ಹಿಂದೂ ಧಾರ್ಮಿಕ ಮುಖಂಡರಿಂದ ವಿರೋಧ: ‘ರಾಮಾಯಣ ಎಕ್ಸ್‌ಪ್ರೆಸ್’ ಸಿಬ್ಬಂದಿಯ ಕೇಸರಿ ಸಮವಸ್ತ್ರವನ್ನು ಬದಲಾಯಿಸಿದ ರೈಲ್ವೆ ಇಲಾಖೆ

0
361

ಸನ್ಮಾರ್ಗ ವಾರ್ತೆ

ನವದೆಹಲಿ:ಹಿಂದೂ ಧಾರ್ಮಿಕ ಮುಖಂಡರಿಂದ ರಾಮಾಯಣ ಎಕ್ಸ್​​ಪ್ರೆಸ್ ಸಿಬ್ಬಂದಿಗಳ ಕೇಸರಿ ಸಮವಸ್ತ್ರಕ್ಕೆ ವಿರೋಧ ವ್ಯಕ್ತಪಡಿಸಿದ ನಂತರ ಭಾರತೀಯ ರೈಲ್ವೆ ಸೋಮವಾರ ಸಮವಸ್ತ್ರವನ್ನು ಬದಲಾಯಿಸಿದೆ.

ಉಜ್ಜಯಿನಿಯ ಹಿಂದೂ ಧಾರ್ಮಿಕ ಮುಖಂಡರು ಕೇಸರಿ ಸಮವಸ್ತ್ರವನ್ನು ವಿರೋಧಿಸಿದ್ದರು. ಜೊತೆಗೆ ಅದು ಹಿಂದೂ ಧರ್ಮಕ್ಕೆ ಅವಮಾನ ಎಂದು ಹೇಳಿದ್ದರು.

ಒಂದು ವೇಳೆ ರೈಲ್ವೆ ಇಲಾಖೆ ಸಮವಸ್ತ್ರವನ್ನು ಬದಲಾಯಿಸದಿದ್ದರೆ ಡಿಸೆಂಬರ್ 12 ರಂದು ದೆಹಲಿಯಲ್ಲಿ ರೈಲು ತಡೆಯುವುದಾಗಿ ಎಚ್ಚರಿಸಿದ್ದರು. ತೀವ್ರ ವಿರೋಧಕ್ಕೆ ಮಣಿದಿರುವ ರೈಲ್ವೆ ಇಲಾಖೆ, ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸಮವಸ್ತ್ರ ಬದಲಾಯಿಸುವುದಾಗಿ ತಿಳಿಸಿ ಕ್ಷಮೆ ಕೋರಿದೆ.

ರೈಲನ್ನು ನಿರ್ವಹಿಸುತ್ತಿರುವ ಐಆರ್​ಸಿಟಿಸಿ ತನ್ನ ಹೇಳಿಕೆಯಲ್ಲಿ, “ಸೇವಾ ಸಿಬ್ಬಂದಿಯ ಸಮವಸ್ತ್ರವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದುವರೆಗೆ ಆದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ತಿಳಿಸಿದೆ. ಇದೀಗ ಸಮವಸ್ತ್ರವನ್ನು ಸಾಮಾನ್ಯ ಸೇವಾ ಸಿಬ್ಬಂದಿಗಿರುವಂತೆಯೇ ರೂಪಿಸಲಾಗಿದೆ ಆದರೂ ಕೈಗವಚ ಮತ್ತು ಮಾಸ್ಕ್‌ಗಳಲ್ಲಿ ಮಾತ್ರ ಕೇಸರಿ ಬಣ್ಣವನ್ನೇ ಉಳಿಸಿಕೊಂಡಿದೆ.