ದುಬೈಯಲ್ಲಿ ಕಟ್ಟಡ ನಿರ್ಮಾಣ ಮಾಲಕ ನಾಪತ್ತೆ: ಸಾವಿರಾರು ಭಾರತೀಯ ಕಾರ್ಮಿಕರು ಅತಂತ್ರ

0
889

ಸನ್ಮಾರ್ಗ ವಾರ್ತೆ

ದುಬೈ: ಕಟ್ಟಡ ನಿರ್ಮಾಣ ಕಂಪೆನಿಯ ಮಾಲಕ ನಾಪತ್ತೆಯಾಗುವುದರೊಂದಿಗೆ ಭಾರತೀಯರ ಸಹಿತ 10 ಸಾವಿರಕ್ಕಿಂತಲೂ ಅಧಿಕ ಕಾರ್ಮಿಕರು ಅತಂತ್ರರಾಗಿದ್ದಾರೆ. ದುಬೈ ಕೇಂದ್ರವಾಗಿ ಚಟುವಟಿಕೆಯಲ್ಲಿದ್ದ ಕಂಪೆನಿಯ ತಮಿಳುನಾಡು ಮೂಲದ ಮಾಲಕ ಹತ್ತು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಕಾರ್ಮಿಕರು ಹೇಳಿದ್ದಾರೆ.

ಆರ್ಥಿಕ ನಷ್ಟದಿಂದಾಗಿ ನಿರ್ಮಾಣ ಕಾರ್ಯವನ್ನು ಮುಂದುವರಿಸಲು ಸಾಧ್ಯವಾಗದೆ ಈ ಮಾಲಕ ತಲೆತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿರ್ಮಾಣ ಕಾರ್ಯದಲ್ಲಿ 12600 ಉದ್ಯೋಗಿಗಳು ಭಾಗಿಯಾಗಿದ್ದರು.

ಇವರಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಮಲೆಯಾಳಿಗಳಿದ್ದರು. ಹೆಚ್ಚಿನವರಿಗೆ ಸಂಬಳ ಇತ್ಯಾದಿಗಳು ಕೂಡ ಲಭಿಸದೆ ತಿಂಗಳುಗಳಾಗಿವೆ. ಇವರಲ್ಲಿ ಲಾಕ್‌ಡೌನ್ ಬಳಿಕ ಇತ್ತೀಚೆಗೆ ದುಬೈಗೆ ಬಂದು ಕೆಲಸಕ್ಕೆ ಸೇರಿಕೊಂಡವರೂ ಇದ್ದಾರೆ. ಕೆಲವರಿಗೆ ಒಂದು ದಿನವೂ ಕೆಲಸಕ್ಕೆ ಸೇರಿಕೊಳ್ಳಲು ಸಾಧ್ಯವಾಗಿಲ್ಲ.

ವಿಸಾ ಕಾಲಾವಧಿ ಮುಗಿದವರು ಮತ್ತು ವಿಸಾವನ್ನು ಮರು ನವೀಕರಣ ಮಾಡಿ ಕೊಡುತ್ತೇವೆ ಎಂದು ಕಂಪೆನಿ ಹೇಳಿದುದನ್ನು ನಂಬಿಕೊಂಡು ಕಾಯುತ್ತಿರುವವರು ಇವರಲ್ಲಿದ್ದು, 10 ವರ್ಷಕ್ಕಿಂತಲೂ ಹೆಚ್ಚು ಸಮಯ ಈ ಕಂಪೆನಿಯಲ್ಲಿ ಕೆಲಸ ಮಾಡಿದವರೂ ಇದ್ದಾರೆ.

ಯುಎಇ ಸರಕಾರದ 100 ಮಿಲಿಯನ್ ಮೀಲ್ಸ್ ಯೋಜನೆಯ ಭಾಗವಾಗಿ ಇವರಿಗೆ ಆಹಾರವನ್ನು ಫುಡ್ ಬ್ಯಾಂಕ್ ನೀಡುತ್ತಿದೆ. ಹಾಗೆಯೇ ಸಮಾಜ ಸೇವೆಯಲ್ಲಿ ತೊಡಗಿರುವ ಅನಿವಾಸಿ ಭಾರತೀಯರ ತಂಡವು ಕೂಡ ಇವರ ನೆರವಿಗೆ ನಿಂತಿದೆ.