ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 3: ಜಾಮಿಅ ಮತ್ತು ಶಾಹಿನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಪ್ರತಿಭಟನೆಯ ವಿರುದ್ಧ ಗುಂಡು ಹಾರಾಟ ನಡೆದದ್ದನ್ನು ಬೆಟ್ಟು ಮಾಡಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿರುದ್ಧ ರಾಜ್ಯಸಭೆ, ಲೋಕಸಭೆಯಲ್ಲಿ ಪ್ರತಿಪಕ್ಷ ಪ್ರತಿಭಟನೆ ನಡೆಸಿದೆ. ಪೌರತ್ವ ಕಾನೂನು ವಿರುದ್ಧ ಎರಡೂ ಸದನದಲ್ಲಿ ಅನುರಾಗ್ ಠಾಕೂರ್ ಗೋ ಬ್ಯಾಕ್ ಎಂದು ಘೋಷಣೆಯನ್ನು ಕೂಗಲಾಯಿತು. ಎರಡೂ ಸದನಗಳು ತಾತ್ಕಾಲಿಕವಾಗಿ ಸ್ತಗಿತವಾಗಿವೆ. ದಿಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ದೇಶದ್ರೋಹಿಗಳಿಗೆ ಗುಂಡು ಹಾರಿಸಿ ಎಂದು ಅನುರಾಗ್ ಠಾಕೂರ್ ಕರೆ ನೀಡಿದ ಫಲವಾಗಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಾಟ ನಡೆದಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ. ಲೋಕಸಭೆಯಲ್ಲಿ ಅನುರಾಗ್ ಠಾಕೂರ್ ಪ್ರಶ್ನೆಗಳಿಗೆ ಉತ್ತರ ನೀಡಲು ಎದ್ದು ನಿಂತಾಗ ಪ್ರತಿಪಕ್ಷ ಗುಂಡು ಸಚಿವ ಗೋಬ್ಯಾಕ್ ಎಂದು ಕೂಗು ಕೇಳಿ ಬಂತು.
ಸಂವಿಧಾನ ರಕ್ಷಿಸುವುದಕ್ಕಾಗಿ ಜನಸಾಮಾನ್ಯರು ಸಂವಿಧಾನವನ್ನು ಎತ್ತಿಹಿಡಿದು ರಾಷ್ಟ್ರಗೀತೆ ಹಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ವಿರುದ್ಧ ಗುಂಡು ಹಾರಿಸಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಹೇಳಿದರು. ಭಾರತದ ಜನರನ್ನು ನಿರ್ದಯವಾಗಿ ಕೊಲ್ಲಲಾಗುತ್ತಿದೆ ಎಂದು ಅವರು ಹೇಳಿದರು.












