ಸನ್ಮಾರ್ಗ ವಾರ್ತೆ
ಬೆಂಗಳೂರು; “ಹಿಜಾಬ್ ವಿಚಾರವಿಟ್ಟು ರಾಜಕೀಯ ಮಾಡಬೇಡಿ. ಅದು ಒಂದು ಧಾರ್ಮಿಕ ಸ್ವಾತಂತ್ರ್ಯದ ಭಾಗವಾಗಿದೆ. ರಾಜಕೀಯ ಲಾಭದ ಉದ್ದೇಶಕ್ಕಾಗಿ ಯಾವುದೇ ರಾಜಕೀಯ ಪಕ್ಷ ಹಿಜಾಬ್ ಪ್ರಕರಣವನ್ನು ಬಳಸಬಾರದು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.
ಅವರು ಮುಂದುವರಿಯುತ್ತಾ, ಜನರ ವೈಯುಕ್ತಿಕ ಸ್ವಾತಂತ್ರ್ಯದ ಮೇಲೆ ಸವಾರಿ ಮಾಡುತ್ತಿರುವ ಬಿಜೆಪಿಯ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದರೆ ಇದೇನಾ? ಒಂದು ಧರ್ಮದ ವಿದ್ಯಾರ್ಥಿನಿಯರು ಶಿರೋವಸ್ತ್ರ ಧರಿಸುವುದರಿಂದ ಸಮಾಜಕ್ಕೆ ಯಾವುದೇ ದುಷ್ಪರಿಣಾಮವಾಗದು. ಸಮಾಜದಲ್ಲಿ ಅನೈತಿಕತೆಗೆ ಅದು ಆಸ್ಪದ ನೀಡದು. ರಾಜಕೀಯ ಲಾಭ ಗಳಿಸಲು ನಿರ್ಧಿಷ್ಟ ಧರ್ಮವೊಂದರ ಮೇಲೆ ಹಿಜಾಬ್ ವಿಚಾರ ಪ್ರಸ್ತಾಪಿಸಿ ಬಿಜೆಪಿ ದ್ವೇಷ ಸಾಧಿಸಲು ಹೊರಟಿದೆಯೆಂಬುದು ಇಲ್ಲಿನ ಜನಸಾಮಾನ್ಯರಿಗೂ ತಿಳಿದಿದೆ.
ಆಂತರಿಕ ಕಲಹದಿಂದ ನಲುಗುತ್ತಿರುವ ಬಿಜೆಪಿ ವಿಷಯವಿಲ್ಲದೆ ಸೊರಗಿ ಹೋಗಿತ್ತು. ಈಗ ಹಿಜಾಬ್ ವಿಚಾರ ಅದಕ್ಕೆ ಹೊಳೆಯಲ್ಲಿ ಕೊಚ್ಚಿ ಹೋಗುವವನಿಗೆ ಹುಲ್ಲು ಕಡ್ಡಿ ಆಧಾರವಾಗಿ ಸಿಕ್ಕಂತಾಗಿದೆ. ಹಿಜಾಬ್ ವಿಚಾರವನ್ನು ಹಿಡಿದೆಳೆದು ದೊಡ್ಡದು ಮಾಡುತ್ತಿದೆ. ಕೆಲವು ಅವಿವೇಕಿ ಬಾಷಣಕರ್ತರಿಂದ ಪ್ರಚೋಧನಾತ್ಮಕ ಮಾತುಗಳನ್ನಾಡಿಸಿ ಜನರ ಭಾವನೆಗಳನ್ನು ಕೆರಳಿಸುವ ಪ್ರಕ್ರಿಯೆಯಲ್ಲಿ ಅದು ತೊಡಗಿಸಿಕೊಂಡಿದೆ.
ಇದು ಒಂದು ಧರ್ಮದ ಮೂಲಭೂತ ಹಕ್ಕುಗಳ ಮೇಲೆ ಮಾಡುತ್ತಿರುವ ದಬ್ಬಾಳಿಕೆಯಾಗಿದೆ. ಇದು ಜನರ ನಡುವೆ ದ್ವೇಷ ಹುಟ್ಟಿಸುವ ಹುನ್ನಾರ ಎಂದು ಆರೋಪಿಸುವ ಅಶೋಕ್ ರವರು ತಮ್ಮ ಪಕ್ಷದ ಕಾರ್ಯಸೂಚಿಯ ಬಗ್ಗೆ ಆತ್ಮಾವಲೋಕನ ನಡೆಸಬೇಕು.
ಅಧಿಕಾರರೂಡ ಕಾಂಗ್ರೆಸ್ ಕೂಡಾ ಈ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಮತ ಬಯಸಿ ಓಟು ಬ್ಯಾಂಕ್ ರಾಜಕೀಯ ಮಾಡಬಾರದು. ಅದು ಪ್ರಾಮಾಣಿಕವಾಗಿ ಸಂವಿಧಾನ ಬದ್ದವಾಗಿ ಕಾರ್ಯಪ್ರವೃತ್ತವಾಗಬೇಕು.
ಮುಸ್ಲಿಂ ಸಮುದಾಯದ ಮಹಿಳೆಯರ ವಿರುದ್ದ ಅವಹೇಳನಕಾರಿ ಮಾತುಗಳನ್ನಾಡಿ ಪ್ರಚೋದಿಸಿದ ಪ್ರಭಾಕರ್ ಭಟ್ಟರ ವಿರುದ್ದ ಸರಕಾರ ಕಾನೂನು ಕ್ರಮಕೈಗೊಳ್ಳಬೇಕು. ಭಟ್ಟರ ವಿರುದ್ದ ಸರಕಾರ ಕ್ರಮ ಕೈಗೊಳ್ಳಲು ಸರಕಾರ ಏಕೆ ಹಿಂದೇಟು ಹಾಕುತ್ತಿದೆ.? ಇವರನ್ನು ತಡೆಯುವ ಶಕ್ತಿ ಯಾವುದು? ಈ ವಿಚಾರದಲ್ಲಿ ಗ್ರಹ ಸಚಿವರ ಮೌನ ಸಂಶಯಾಸ್ಪದವಾಗಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸರಕಾರ ಮುಂದಾಗಬೇಕು. ಎಂದೂ ಅವರು ಆಗ್ರಹಿಸಿದರು.












