ರಸ್ತೆಯಲ್ಲಿ ಪಾದಚಾರಿಗಳಿಗೇ ಆದ್ಯತೆ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

0
187

ಸನ್ಮಾರ್ಗ ವಾರ್ತೆ

ನವದೆಹಲಿ: ಕಾಲುದಾರಿಗಳಲ್ಲಿ (ಫುಟ್‌ಪಾತ್) ನಡೆಯುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನವು ಖಾತರಿಪಡಿಸಿರುವ ಮೂಲಭೂತ ಹಕ್ಕಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪಾದಚಾರಿಗಳ ಹಕ್ಕುಗಳನ್ನು ರಕ್ಷಿಸಲು ವಿಶೇಷ ಕಾಯ್ದೆಗಳನ್ನು ತರುವಂತೆ ಕೇಂದ್ರ ಸರ್ಕಾರಕ್ಕೂ ನ್ಯಾಯಾಲಯ ನಿರ್ದೇಶನ ನೀಡಿದೆ. ಐದು ವರ್ಷದ ತನ್ನ ಮಗನೊಂದಿಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ತಂದೆಗೆ ಹಿಂದಿನಿಂದ ಬಂದ ಟ್ಯಾಂಕರ್ ಲಾರಿಯೊಂದು ಡಿಕ್ಕಿ ಹೊಡೆದು ಅವರು ಸಾವನ್ನಪ್ಪಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಈ ನಿರ್ಣಾಯಕ ತೀರ್ಪನ್ನು ಪರಿಗಣಿಸಲಾಗಿದೆ.

ಅಪಘಾತ ಸಂಭವಿಸಿದ ರಸ್ತೆಯಲ್ಲಿ ಕಾಲುದಾರಿ ಅಥವಾ ಪಾದಚಾರಿ ರಸ್ತೆ ದಾಟುವ ವ್ಯವಸ್ಥೆ (ಪೆಡೆಸ್ಟ್ರಿಯನ್ ಕ್ರಾಸಿಂಗ್) ಇಲ್ಲದಿರುವುದೇ ಈ ಅಪಘಾತಕ್ಕೆ ಕಾರಣವಾಗಿತ್ತು. ಈ ಹಕ್ಕು ಸಂವಿಧಾನದ ಭಾಗ III ರ ವಿಧಿ 19 ಮತ್ತು 21 ರ ಅಡಿಯಲ್ಲಿ ಸಂಚರಿಸುವ ಸ್ವಾತಂತ್ರ್ಯದ ಹಕ್ಕು ಮತ್ತು ಜೀವಿಸುವ ಹಕ್ಕಿನಲ್ಲಿ ಸೇರಿದೆ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಬೆಟ್ಟು ಮಾಡಿದೆ. ವಾಹನಗಳಿಗಿಂತ ಪಾದಚಾರಿಗಳಿಗೇ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಗಳು ಕಾಲುದಾರಿಗಳನ್ನು ನಿರ್ಮಿಸುವ ಮೂಲಕ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವತ್ತ ಗಮನ ಹರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಪಾದಚಾರಿಗಳ ಸುರಕ್ಷತೆಯನ್ನು ಖಾತ್ರಿಪಡಿಸದಿದ್ದರೆ ನಾಗರಿಕರು ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಹಾರವನ್ನು ಕೋರಬಹುದು ಮತ್ತು ಇದು ಮೋಟಾರು ವಾಹನಗಳ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ನೆನಪಿಸಿದೆ. ಈ ತೀರ್ಪಿನ ಪ್ರತಿಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಕಾನೂನು ಆಯೋಗಕ್ಕೆ ಕಳುಹಿಸುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.