ಮಾನವೀಯ ಕಳಕಳಿಯ ಜನರು ಸಮಾಜದಲ್ಲಿ ಕಡಿಮೆಯಾಗುತ್ತಿದ್ದಾರೆ: ಎ.ಕೆ.ಕುಕ್ಕಿಲ

0
50

ಸನ್ಮಾರ್ಗ ವಾರ್ತೆ

ಹೂಡೆ: ಜಮಾಅತೆ ಇಸ್ಲಾಮಿ ಹಿಂದ್, ಹೂಡೆ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ ಸೀರತ್ ಅಭಿಯಾನದ ಪ್ರಯುಕ್ತ ಸಾಲಿಹಾತ್ ಸಭಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸನ್ಮಾರ್ಗ ವಾರ ಪತ್ರಿಕೆಯ ಪ್ರಧಾನ ಸಂಪಾದಕರಾದ ಎ.ಕೆ ಕುಕ್ಕಿಲ,”ಪ್ರಸ್ತುತ ಯಾರ ಕುರಿತು ವಿಶ್ವಾಸ ಇಲ್ಲದ ಸಮಾಜದಲ್ಲಿ ಬದುಕುತ್ತಿದ್ದೇವೆ. ಮಾನವೀಯ ಕಳಕಳಿ ಇರುವ ಜನರು ಸಮಾಜದಲ್ಲಿ ಕಡಿಮೆಯಾಗುತ್ತಿದ್ದಾರೆ. ಭಿನ್ನಾಭಿಪ್ರಾಯಗಳು ಇದ್ದ ಹೊರತಾಗಿಯೂ ವಿರೋಧಿಗಳು ಕೂಡ ಪ್ರವಾದಿ (ಸ) ಅವರ ಮೇಲೆ ವಿಶ್ವಾಸ ಹೊಂದಿದ್ದರು” ಎಂದು ಹೇಳಿದರು.

ಪ್ರವಾದಿ (ಸ) 40 ವರ್ಷದ ಪ್ರಾಯದವರೆಗೂ ಸಾಮಾನ್ಯ ಮನುಷ್ಯರಾಗಿ ಬದುಕುತ್ತಿದ್ದರು. 43 ವರ್ಷ ವಯಸ್ಸಿನಲ್ಲಿ ಅವರಿಗೆ ಪ್ರವಾದಿತ್ವ ಪ್ರಾಪ್ತವಾಯಿತು. ಪ್ರವಾದಿ(ಸ) ಪ್ರವಾದಿತ್ವ ಪ್ರಾಪ್ತವಾದ ಕೂಡಲೇ ಕುಲ-ಗೋತ್ರಗಳಲ್ಲಿ ಹಂಚಿ ಹೋಗಿದ್ದ ಮಕ್ಕಾದ ಜನರಿಗೆ ನೀವೆಲ್ಲರೂ ಸಮಾನರು ಎಂದು ಹೇಳಿದರು. ಪ್ರವಾದಿತ್ವ ಪ್ರಾಪ್ತವಾಗುವ ಮುನ್ನ ಕೂಡ ಅವರು ಸಮಾನತೆಯನ್ನು ಪ್ರದಿಪಾದಿಸುತ್ತಿದ್ದ ಕಾರಣ ಅವರಿಗೆ ಸಮಾನತೆಯ ಕರೆ ನೀಡಲು ಸಾಧ್ಯವಾಯಿತು. ಪ್ರವಾದಿತ್ವ ಲಭಿಸುವ ಮುನ್ನ ಕೂಡ ಅವರು ಅತ್ಯುತ್ತಮ ಚಾರಿತ್ರ್ಯದೊಂದಿಗೆ ಮಾದರಿ ಜೀವನ ನಡೆಸುತ್ತಿದ್ದರು.

ನಮಾಝಿನಲ್ಲಿ ಸಮಾನತೆಯನ್ನು ಪ್ರವಾದಿ(ಸ) ಪ್ರತಿಪಾದಿಸಿದರು. ವೈಯಕ್ತಿಕ ಜೀವನದಲ್ಲಿ ಸಮಾನತೆಯನ್ನು ಪಾಲಿಸಿ ತೋರಿಸಿದರು.

ಪ್ರವಾದಿ(ಸ) ಮದ್ಯಪಾನ ಮಾಡಬೇಡಿ ಎಂದು ಆದೇಶಿಸಿದರು. ಪ್ರವಾದಿತ್ವದ ಮೊದಲು ಅವರು ಮದ್ಯಪಾನ ಹತ್ತಿರವೂ ಸುಳಿಯದೇ ಇದ್ದ ಕಾರಣ ನಂತರ ಜನರಿಗೂ ಕರೆ ನೀಡಲು ಸುಲಭವಾಯಿತು ಎಂದು ಹೇಳಿದರು.

ಬೆವರು ಆರುವ ಮುನ್ನ ಕಾರ್ಮಿಕರ ವೇತನ ಕೊಟ್ಟು ಬಿಡಿ ಎಂದು ಪ್ರವಾದಿ (ಸ) ಹೇಳಿದ್ದರು. ಈ ಮೂಲಕ ಬೆವರಿನ ಶ್ರಮವನ್ನು ಅತ್ಯುತ್ತಮ ರೀತಿಯಲ್ಲಿ ಕಟ್ಟಿಕೊಟ್ಟರು. ಪ್ರವಾದಿ(ಸ) ಸುಳ್ಳು ಹೇಳಬೇಡಿ ಎಂದರು. ಸುಳ್ಳು ಹೇಳಿದವನು ನನ್ನ ಅನುಯಾಯಿ ಅಲ್ಲವೆಂದು ಬೋಧಿಸಿದರು. ಪ್ರವಾದಿ(ಸ) ದೇವರಲ್ಲ. ಅದರಿಂದಲೇ ಅವರ ಹೆಸರು ಹೇಳಿದ ಕೂಡಲೇ ಸಲ್ಲಲಾಹು ಅಲೈಯುವ ಸಲ್ಲಮ್ ಹೇಳುತ್ತೇವೆ. ಅವರ ಮೇಲೆ ದೇವನ‌ ಅನುಗ್ರಹ ಇರಲಿ ಎಂದು ಹೇಳುವುದಾಗಿದೆ ಎಂದು ಹೇಳಿದರು.

ಪ್ರವಾದಿ(ಸ) ಮುಸ್ಲಿಮೇತರೊಂದಿಗಿನ ಸಂಬಂಧ ಕೂಡ ಬಹಳಷ್ಟು ಉತ್ತಮವಾಗಿತ್ತು. ಮುಸ್ಲಿಮೇತರರ ನಂಬಿಕೆಗಳನ್ನು ನಿಂದಿಸಬಾರದು ಎಂದು ಇಸ್ಲಾಮ್ ಕಲಿಸುತ್ತದೆ. ವಿರೋಧಿಗಳು ಪ್ರವಾದಿ(ಸ) ರ ಮೇಲೆ ದಾಳಿ ಮಾಡಿ ಕಾಳಗ ನಡೆಸಿದಂತಹ ಸಂದರ್ಭಗಳಲ್ಲೇ ವಿಜಯ ಪ್ರಾಪ್ತಿಗೊಂಡರೂ ಅವರೆಂದು ಸೋತವರ ವಿರುದ್ಧ ಪ್ರತೀಕಾರ ಕೈಗೊಳ್ಳಲಿಲ್ಲ. ಬದಲಾಗಿ ಎಲ್ಲರನ್ನು ಸಾಮೂಹಿಕವಾಗಿ ಕ್ಷಮಿಸಿ ಬಿಟ್ಟರು ಎಂದು ಹೇಳಿದರು.

ನಿವೃತ್ತ ಅಧ್ಯಾಪಕರಾದ ಸುಧಾಕರ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್, ಹೂಡೆಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ಪ್ರಸ್ತಾವಿಕವಾಗಿ ಮಾತನಾಡಿದರು. ಯಾಸೀನ್ ಕೋಡಿಬೆಂಗ್ರೆ ನಿರೂಪಿಸಿ, ಧನ್ಯವಾದವಿತ್ತರು.