ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ

0
3274

ಸನ್ಮಾರ್ಗ ವಾರ್ತೆ

ಬೆಂಗಳೂರು: ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿಯ ವ್ಯಕ್ತಿ ಆರಾಧನೆಯ ಕಾರಣದಿಂದ ಉಂಟಾದ ಕರಾಳ ದಿನಗಳಿಂದ ಭಾರತ ಪಾಠ ಕಲಿಯಲಿಲ್ಲ. ಈಗ ನರೇಂದ್ರ ಮೋದಿ ಆಡಳಿತದಲ್ಲಿ ಅದನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲಾಗಿದೆ. ವ್ಯಕ್ತಿಗಳ ಆರಾಧನೆಯಲ್ಲಿ ರಾಜಕೀಯ ಪಕ್ಷಗಳೂ ಮಂಕಾಗಿವೆ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟಿದ್ದಾರೆ.

ಅವರು ಬೆಂಗಳೂರು ಸಾಹಿತ್ಯೋತ್ಸವದ 12ನೇ ಆವೃತ್ತಿಯ ಮೊದಲ ದಿನವಾದ ಶನಿವಾರ ನಡೆದ ‘ವ್ಯಕ್ತಿ ಆರಾಧನೆ: ಪ್ರಜಾಪ್ರಭುತ್ವದ ಕುಸಿತ’ ಎಂಬ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.

‘ಹಿಟ್ಲರ್ ನಂತರ ಜರ್ಮನಿಯಲ್ಲಿ ಮತ್ತೊಬ್ಬ ಸರ್ವಾಧಿಕಾರಿ ಅಧಿಕಾರಕ್ಕೆ ಬರಲಿಲ್ಲ. ಬ್ರಿಟನ್‌ನಲ್ಲಿ ಬೋರಿಸ್ ಜಾನ್ಸನ್ ವ್ಯಕ್ತಿ ಆರಾಧನೆಯ ಜಾಡಿನಲ್ಲಿ ಸಾಗಿದರೂ ಅಲ್ಲಿನ ಆಡಳಿತ ಪಕ್ಷ, ಸುಪ್ರೀಂ ಕೋರ್ಟ್ ಅಧಿಕಾರದಲ್ಲಿ ಮುಂದುವರಿಯಲು ಅವರಿಗೆ ಅನುಮತಿ ನೀಡಲಿಲ್ಲ. ಆದರೆ ಭಾರತದಲ್ಲಿನ ಪರಿಸ್ಥಿತಿಯೇ ಭಿನ್ನ. ಇಲ್ಲಿ ಪಕ್ಷ, ಸಂಸತ್, ಅಧಿಕಾರಿ ವರ್ಗ, ನ್ಯಾಯಾಂಗ ಹಾಗೂ ಮಾಧ್ಯಮ ಎಲ್ಲವೂ ವ್ಯಕ್ತಿ ಆರಾಧನೆಯಲ್ಲಿ ಮುಳುಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸದ್ಯ ಆರಾಧನೆಗೆ ಒಳಪಡುತ್ತಿರುವ ಮೋದಿ ಅವರು ಶ್ರಮಜೀವಿ, ಉತ್ತಮ ವಾಗ್ಮಿ, ಚುನಾವಣೆಯನ್ನು ಗೆಲ್ಲಿಸ ಬಲ್ಲ ಸಾಮರ್ಥ್ಯ ಇರುವವರು, ರಾಜಕೀಯ ಹಾಗೂ ಆಡಳಿತದ ಅನುಭವವುಳ್ಳವರು. ಜತೆಗೆ ಯಾವುದೇ ಅಧಿಕಾರದ ಅನುಭವವನ್ನು ಹೊಂದಿರದ ರಾಹುಲ್ ಗಾಂಧಿಯನ್ನು ತಮ್ಮ ಪ್ರತಿಸ್ಪರ್ಧಿ ಎಂದು ಬಿಂಬಿಸಿದ್ದರ ಫಲವಾಗಿ ಅವರ ಪ್ರಭಾವದ ಪ್ರಖರತೆ ಇನ್ನಷ್ಟು ಹೆಚ್ಚಾಗಿದೆ’ ಎಂದರು.

‘ಮತ್ತೊಂದೆಡೆ ವ್ಯಕ್ತಿ ಆರಾಧನೆಯ ಮನೋಧರ್ಮ ಈಗ ದೆಹಲಿಯಿಂದ ರಾಜ್ಯಗಳಿಗೂ ವಿಸ್ತರಣೆಗೊಂಡಿದೆ. ಕೇರಳದಲ್ಲಿ ಪಿಣರಾಯಿ ವಿಜಯನ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ದೆಹಲಿಯಲ್ಲಿ ಅರವಿಂದ ಕೇಜ್ರವಾಲ್, ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ – ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕಳೆದ ಕೆಲವು ಚುನಾವಣೆಗಳನ್ನು ಗಮನಿಸಿದರೆ ವ್ಯಕ್ತಿ ಆರಾಧನೆಯಲ್ಲಿ ಪಕ್ಷಗಳೇ ಮಂಕಾದ ಉದಾಹರಣೆಗಳಿವೆ. ಮೋದಿ ಪ್ರಭಾವದಲ್ಲಿ ಬಿಜೆಪಿ ಮಂಕಾಗಿದೆ. ನಮ್ಮ ರಾಜ್ಯದಲ್ಲೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹೆಚ್ಚಾಗಿ ಪ್ರಚಾರಕ್ಕೊಳಗಾದರು. ಇದು ಕಳವಳಕಾರಿ ಬೆಳವಣಿಗೆ’ ಎಂದು ಗುಹಾ ಹೇಳಿದರು.

‘ವ್ಯಕ್ತಿಯ ಆರಾಧನೆಯ ಜತೆಗೆ ಬಂಡವಾಳಶಾಹಿಗಳ ಮೆರವಣಿಗೆಯೂ ಇಲ್ಲಿ ನಡೆಯುತ್ತಿದೆ. ನರೇಂದ್ರ ಮೋದಿ ಕ್ರೀಡಾಂಗಣದ ಎರಡೂ ತುದಿಗಳಿಗೆ ಅಂಬಾನಿ ಹಾಗೂ ಅದಾನಿ ಹೆಸರಗಳನ್ನು ಇಟ್ಟಿರುವುದು ಇದಕ್ಕೆ ಪುಷ್ಟಿ ನೀಡಿವೆ.

ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್‌ನ ಅಂತಿಮ ಹಣಾಹಣಿ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಅಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಹೋಗಿದ್ದರು. ಅವರು ಅಲ್ಲಿನ ಆಡಳಿತ ಮಂಡಳಿಯಿಂದ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ನೆನಪಿನ ಕಾಣಿಕೆಯನ್ನು ಪಡೆದರು. ಇದಕ್ಕಿಂತ ದೊಡ್ಡ ವ್ಯಂಗ್ಯ ಇತಿಹಾಸದಲ್ಲಿ ಮತ್ತೊಂದು ಸಿಗಲಾರದು. ಆದರೆ ಯಾವ ಮಾಧ್ಯಮವೂ ಇದನ್ನು ವರದಿ ಮಾಡದಿರುವುದು ಈ ವ್ಯಕ್ತಿ ಆರಾಧನೆಯ ಪ್ರಭಾವಕ್ಕೆ ಹಿಡಿದ ಕನ್ನಡಿ’ ಎಂದು ಕುಟುಕಿದರು.

‘ಪ್ರಜಾಪ್ರಭುತ್ವದಲ್ಲಿ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತವೆ. ಆದರೆ ಆ ಪಕ್ಷದೊಳಗೇ ಆಡಳಿತ ಪ್ರಜಾಪ್ರಭುತ್ವ ಮರೆಯಾಗಿದೆ. ಕುಟುಂಬ ರಾಜಕಾರಣ ಮುನ್ನೆಲೆಗೆ ಬಂದಿದೆ. ಸಂಜಯ್ ಅವರನ್ನು ರಾಜಕೀಯಕ್ಕೆ ತರುವ ಇಂದಿರಾರ ಪ್ರಯತ್ನದಿಂದ ಡಿಎಂಕೆ, ಶಿವಸೇನಾ ಪಕ್ಷಗಳೂ ಉತ್ತೇಜನಗೊಂಡವು. ಇಂಥ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಈ ಎರಡೂ ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, ‘ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ’ ಎಂದು ಅಂದಿನ ಕಾಂಗ್ರೆಸ್ ಅಧ್ಯಕ್ಷ ಬರುವಾ, ಇಂದಿರಾರನ್ನು ಹೊಗಳಿ ಪದ್ಯವನ್ನೇ ಬರೆದಿದ್ದರು. ಈಗ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಅದೇ ಹೊಗಳಿಕೆಯನ್ನು ಮೋದಿಯ ಬಗ್ಗೆ ಮುಂದುವರಿಸಿದ್ದಾರೆ’ ಎಂದ ಗುಹಾ ಹೇಳಿದರು.

.