ಪಾಕಿಸ್ತಾನ ಹಿಂದೂಗಳನ್ನು ಕೊಲ್ಲುತ್ತಿದೆ ಎಂಬ ಹೆಸರಲ್ಲಿ ವೈರಲ್ ಆದ ಫೋಟೋ ಹಿಂದಿನ ಸತ್ಯಾಂಶಗಳೇನು?- ಇಲ್ಲಿದೆ ಫ್ಯಾಕ್ಟ್‌ ಚೆಕ್ ವರದಿ

0
1791

ಸನ್ಮಾರ್ಗ ವಾರ್ತೆ

ತನ್ನ ಬಯೋದಲ್ಲಿ “ಬಿಜೆಪಿ ಕೆಲಸಗಾರ” ಎಂದು ಹೇಳಿಕೊಂಡಿರುವ ಟ್ವಿಟರ್ ಬಳಕೆದಾರ ಅಕಿಬ್ ಮಿರ್, ಸಣ್ಣ ಶೆಡ್ ಒಳಗೆ ಪೈಪ್‌‌ಗೆ ನೇಣು ಹಾಕಿಕೊಂಡ ಕುಟುಂಬವೊಂದರ ಫೋಟೋವೊಂದನ್ನು ಹಂಚಿಕೊಂಡಿದ್ದು, “ಪಾಕಿಸ್ತಾನದಲ್ಲಿ ಹಿಂದೂಗಳನ್ನು ಕೊಲ್ಲತ್ತಿದ್ದಾರೆ. ಪಾಕಿಸ್ತಾನವು ಶೂ ಮೇಕರ್ ಹಿಂದೂ ಕುಟುಂಬವನ್ನು ಕೊಂದ ಈ ಚಿತ್ರವನ್ನು ನೋಡಿ, ”ಎಂದು ಬರೆದುಕೊಂಡಿದ್ದನು.

ಅಲ್ಲದೇ, ಇದೇ ಚಿತ್ರವನ್ನು ಬಳಸಿ,
“ನೀರಿನ ಪೈಪ್‌ನ್ನು ಸ್ಪರ್ಶಿಸಿದ್ದಕ್ಕಾಗಿ ಪಾಕಿಸ್ತಾನದ ಮೌಲ್ವಿ ಗಜಿ ಸಫ್ದಾರ್ ಅವರು ಪಾಕಿಸ್ತಾನದ ಶೂ ತಯಾರಕ ಹಿಂದೂವನ್ನು ಹೊಡೆದರು, ಅಸ್ಪೃಶ್ಯ ಕೀಳ್ಜಾತಿಯವರೇ ಎಂದು ಮೌಲ್ವಿ ಕೂಗಾಡಿ ಅವರ ಮೇಲೆ ತದನಂತರ ಹಲ್ಲೆ ನಡೆಸಿದ್ದಾನೆ..ಈ ಘಟನೆಯ ನಂತರ ಪಾಕಿಸ್ತಾನಿ ಹಿಂದೂ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ” ಎಂದು ರಿಪಬ್ಲಿಕ್ ಟಿವಿ ಆಂಕರ್ ಅರ್ನಬ್ ಗೋಸ್ವಾಮಿಯ ವಿಡಂಬನಾ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

ಇದೇ ಚಿತ್ರವು ಫೇಸ್‌ಬುಕ್ ನಲ್ಲಿಯೂ ಕೂಡ ಹರಿದಾಡುತ್ತಿದ್ದು, ಲಾಕ್‌ಡೌನ್ ಎಫೆಕ್ಟ್ ಎಂಬ ಶೀರ್ಷಿಕೆಯಲ್ಲಿ ಹರಿದಾಡುತ್ತಿದೆ. ಕೊರೋನ ವೈರಸ್‌ನಿಂದಾಗಿ ಏಕಾಏಕಿ ಲಾಕ್‌ಡೌನ್ ಹೇರಿದ ಹಿನ್ನೆಲೆಯಲ್ಲಿ ಇದೇ ಛಾಯಾಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಅವರಿಗೆ ಪರಿಹಾರ ನೀಡಲು ವಿಫಲವಾದ ನಂತರ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಸಂದೇಶವೊಂದು ಹೇಳಿದೆ.

“ಹೃದಯವಿದ್ರಾವಕ ಘಟನೆ. ಸರ್ಕಾರದ ಪರಿಹಾರವನ್ನು ಬಹಿರಂಗಪಡಿಸುತ್ತದೆ… ಕೇಂದ್ರ ಸರ್ಕಾರದ ಯಾವುದೇ ಸಚಿವರಾಗಲಿ ಅಥವಾ ಅಧಿಕಾರಿಗಳಾಗಲಿ ಇಂತಹ ಮನ ಕದಡುವ ಘಟನೆಯನ್ನು ದೇಶದ ಮುಂದೆ ಪ್ರಸ್ತಾಪಿಸುತ್ತಿರುವುದನ್ನು ನೋಡಿದ್ದೀರಾ…. ಮೋದಿಜಿ – ನೀವು ಯಾವ ರೀತಿಯ ಹೊಸ ಭಾರತವನ್ನು ಕಟ್ಟಲು ಹೊರಟಿದ್ದೀರಿ…!” ಎಂದು ಫೇಸ್‌ಬುಕ್ ಸಂದೇಶವು ಹೇಳುತ್ತದೆ.

ಫ್ಯಾಕ್ಟ್-ಚೆಕ್

ಸರಳವಾದ ರಿವರ್ಸ್-ಇಮೇಜ್ ಹುಡುಕಾಟವು ಫಿಲಿಸೈಡ್-ಆತ್ಮಹತ್ಯೆ, ನರಹತ್ಯೆ-ಆತ್ಮಹತ್ಯೆಯ ವರದಿಯುಳ್ಳ ಹಲವು ಲಿಂಕ್‌ಗಳನ್ನು ತೋರಿಸುತ್ತದೆ, ಆತ್ಮಹತ್ಯೆ ವಿಭಾಗದಲ್ಲಿ ತೋರಿಸುವ ಈ ಚಿತ್ರದಲ್ಲಿ ಮಕ್ಕಳು ಬಲಿಪಶುಗಳು ಮತ್ತು ಪೋಷಕರು ಅಪರಾಧಿಗಳೆಂದು ಸೂಚಿಸುತ್ತದೆ.

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ (ಏಮ್ಸ್) ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗದ ತಂಡವು ಈ ಕೆಳಗಿನ ವರದಿಯನ್ನು ಬರೆದಿದ್ದು. ಇದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಕಟವಾಗಿದ್ದೆಂದಿದೆ. ವರದಿಯ ಪ್ರಕಾರ, ಕುಟುಂಬದ ನಾಲ್ಕು ಸದಸ್ಯರು – ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು – ತಮ್ಮ ಗುಡಿಸಲಿನ ಛಾವಣಿಯ ಮೇಲಿನ ಕಬ್ಬಿಣದ ಪೈಪ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತನಿಖಾ ಅಧಿಕಾರಿಗಳಿಗೆ ಕೊಲೆಯ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಆದರೆ ಘಟನಾ ಸ್ಥಳದಿಂದ ವಿಷಕಾರಿ ವಸ್ತುವನ್ನು ಪಡೆಯಲಾಯಿತು. ಸತ್ತ ಮಕ್ಕಳ ಬಟ್ಟೆಗಳಲ್ಲಿ ವಾಂತಿಯ ಕಲೆಗಳಿದ್ದವು. ಮೃತ ದೇಹಗಳ ವಿಧಿವಿಜ್ಞಾನ ವಿಶ್ಲೇಷಣೆಯು ಆತ್ಮಹತ್ಯೆಯ ಬಗ್ಗೆ ಸುಳಿವು ನೀಡಿತ್ತು. 11 ವರ್ಷ ವಯಸ್ಸಿನ ಮಗು ಮಾತ್ರ ಈ ‌ಕುಟುಂಬದಲ್ಲಿ ಉಳಿದುಕೊಂಡಿತು, ಅವರು ಮೃತ ದೇಹಗಳನ್ನು ಪತ್ತೆಹಚ್ಚಿದ ನಂತರ ಹತ್ತಿರದ ದೇವಸ್ಥಾನಕ್ಕೆ ಧಾವಿಸಿದ್ದರು.

“ದೇವಾಲಯದಲ್ಲಿ ಉಳಿದಿರುವ ಕುಟುಂಬದ ಏಕೈಕ ಮಗು, ಪೂಜಾರಿ ಮತ್ತು ಇತರ ಉಸ್ತುವಾರಿಗಳನ್ನು ಪೊಲೀಸರು ವಿಚಾರಿಸಿದರು ಮತ್ತು ಹಿಂದಿನ ಕೆಲವು ದಿನಗಳಲ್ಲಿ ದಂಪತಿಗಳು ಸಾಲವನ್ನು ಪಾವತಿಸಲು ಅಸಾಧ್ಯವಾದುದರಿಂದ ಮಾನಸಿಕ ಒತ್ತಡದಿಂದ ಬೇಸತ್ತು ಆತ್ಮಹತ್ಯೆಗೈದಿದ್ದಾರೆಂದು ಬಹಿರಂಗಪಡಿಸಿತು. ಸಾಲವು ಬಹುಶಃ ಆತ್ಮಹತ್ಯೆಯಂತಹ ತೀವ್ರ ಹೆಜ್ಜೆ ಇಡಲು ಕಾರಣವಾಯಿತು” ಎಂದು ಹೇಳಿದೆ ಎಂದು ವರದಿ ಹೇಳಿತು.

ಆಗಸ್ಟ್ 2017 ರಲ್ಲಿ ಜೋಧ್‌ಪುರದ ಭಹಕ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಸಹ ಲೇಖಕರಲ್ಲಿ ಒಬ್ಬರಾದ ನವನೀತ್ ಅಟೇರಿಯಾ ಬೂಮ್‌ಲೈವ್‌ಗೆ ತಿಳಿಸಿದ್ದಾರೆ.

ಈ ಪ್ರಕರಣವನ್ನು ದೈನಿಕ್ ಜಾಗರಣ್, ಆಜ್ ತಕ್ ಮತ್ತು ಪತ್ರಿಕಾ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರಕಾರ, ಕುಟುಂಬವು ತನ್ವಾರಾದ ಭಹಕ್ರಿ ಗ್ರಾಮದಲ್ಲಿರುವ ಜಮೀನಿನಲ್ಲಿರುವ ಮನೆಯಲ್ಲಿಯೇ ಇರುತ್ತಿತ್ತು. ಆರ್ಥಿಕ ಬಿಕ್ಕಟ್ಟಿನಿಂದ ಅವರು ನೇಣಿಗೆ ಶರಣಾಗಿದ್ದರು. ತನಿಖೆಯ ವೇಳೆ, ಕುಟುಂಬದ ಮನೆಯಲ್ಲಿ ಆಹಾರವಿರಲಿಲ್ಲ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಮೃತರನ್ನು ಕನ್ಹರಾಮ್ (45), ಅವರ ಪತ್ನಿ ಪುಷ್ಪಾದೇವಿ (40) ಮತ್ತು ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಪುಷ್ಪಾ ದೇವಿ ಮತ್ತು ಅವರ ಮಗಳು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು ಮತ್ತು ಅವರ ಚಿಕಿತ್ಸೆಗೆ ಕುಟುಂಬಕ್ಕೆ ಹಣವಿರಲಿಲ್ಲ. ಈ ಘಟನೆಯಲ್ಲಿ ಏಕೈಕ ಮಗುವು ಬದುಕುಳಿದುಕೊಂಡಿತ್ತು.

ಬದುಕುಳಿದ ಮಗ ಹೇಳಿಕೆ ನೀಡಿದ ಘಟನೆಯ ವೀಡಿಯೊ ವರದಿಯನ್ನು ಪತ್ರಿಕೆ ಒಳಗೊಂಡಿತ್ತು. ರಾತ್ರಿಯಲ್ಲಿ ತನ್ನ ಹೆತ್ತವರಿಗೆ ಹಗ್ಗ ತಂದರು ಮತ್ತು ಈ ಹಗ್ಗದ ಬಗ್ಗೆ ಅವನು ಕೇಳಿದಾಗ, ಅವನ ತಾಯಿ ಅಳಲು ಪ್ರಾರಂಭಿಸಿದಳು ಮತ್ತು ತಂದೆ ಅವನನ್ನು ದೂರವಿರಿಸಿದರು‌. ಮುಂಜಾನೆ 3 ಗಂಟೆಗೆ, ನನ್ನ ಇಡೀ ಕುಟುಂಬದವರು ಸತ್ತಿದ್ದಾರೆ ಎಂಬುದು ನನಗೆ ತಿಳಿದು ಬಂತು. ಎಂದು ಹೇಳಿರುವುದು‌ ವಿಡಿಯೋದಲ್ಲಿದೆ.

ಆದ್ದರಿಂದ, ಪಾಕಿಸ್ತಾನದಲ್ಲಿ ಹಿಂದೂಗಳನ್ನು ಹತ್ಯೆ ಮಾಡಲಾಗಿದೆ ಎಂಬ ವರದಿಯು ಸುಳ್ಳು ಸುದ್ದಿಯಾಗಿದ್ದು, ರಾಜಸ್ಥಾನದ ಜೋಧ್‌ಪುರದಲ್ಲಿ 2017 ರಲ್ಲಿ ಸಂಭವಿಸಿದ ಘಟನೆಯ ಛಾಯಾಚಿತ್ರವನ್ನು ದುರ್ಬಳಕೆ ಮಾಡಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.