ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ, ಫೋಟೋ ನಿರ್ಬಂಧ: ವ್ಯಾಪಕ ವಿರೋಧದ ಬಳಿಕ ಆದೇಶ ಹಿಂಪಡೆದ‌ ಸರ್ಕಾರ..!

0
281

ಸನ್ಮಾರ್ಗ ವಾರ್ತೆ

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ, ಫೋಟೋ ನಿರ್ಬಂಧ ಹೇರಿರುವ ಆದೇಶಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾದ್ದರಿಂದ ಶುಕ್ರವಾರ ತಡರಾತ್ರಿಯೇ ರಾಜ್ಯ ಸರ್ಕಾರ ಆದೇಶ ಹಿಂಪಡೆದಿರುವುದಾಗಿ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಬ್ಯಾನ್ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಭ್ರಷ್ಟಾಚಾರಿ ವಿರೋಧಿ ಹೋರಾಟಗಾರರಿಂದ ಭಾರೀ ಆಕ್ಷೇಪ ವ್ಯಕ್ತವಾಗಿತ್ತು.

ಸರ್ಕಾರದ ಈ ನಡೆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಆರ್ ಎಸ್ ಪಕ್ಷ, ಆಮ್ ಆದ್ಮ ಪಕ್ಷ ಸೇರಿದಂತೆ ಸಾಮಾಜಿಕ ಹೋರಾಟಗಾರರಿಂದಲೂ ಭಾರೀ ವಿರೋಧ ವ್ಯಕ್ತವಾಗಿತ್ತಲ್ಲದೇ, ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಲು ಸರ್ಕಾರ ಕಂಡುಕೊಂಡ ಹೊಸ ಮಾರ್ಗ ಇದು ಎಂದು ತಿಳಿಸಿತ್ತು.

ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ, ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಸಾರ್ವಜನಿಕರು ಅವರ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುವ ಸಂದರ್ಭದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಒಂದು ಕಚೇರಿಯ ಫೋಟೋ/ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಹಾಗೂ ಇಂತಹ ಪೋಟೋ/ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಇಲಾಖೆ, ಸರ್ಕಾರದ ಘನತೆಗೆ ಕುಂದುಂಟಾಗುತ್ತಿದೆ. ಅದರಲ್ಲೂ, ವಿಶೇಷವಾಗಿ ಮಹಿಳಾ ನೌಕರರಿಗೆ ತೊಂದರೆ ಉಂಟಾಗುತ್ತಿರುವುದರಿಂದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ, ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ / ವಿಡಿಯೋ ಮಾಡದಂತೆ ನಿಷೇಧ ಹೇರಲಾಗಿತ್ತು.

ಸರ್ಕಾರಿ ನೌಕರರ ಸಂಘದ ಮನವಿಯಂತೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಅಧೀನ ಕಾರ್ಯದರ್ಶಿ ಈ ಆದೇಶ ಹೊರಡಿಸಿತ್ತು. ಇದೀಗ ಆದೇಶ ಬಂದ ವೇಗದಲ್ಲಿಯೇ ಹಿಂಪಡೆಯಲಾಗಿದೆ.