ಹೊಸದಿಲ್ಲಿ, ಜು. 4: ಪತಿ ತಲಾಕ್ ನೀಡಿದ್ದನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟು ವಿಚಾರಣೆಗೆತ್ತಿಕೊಳ್ಳಲು ನಿರಾಕರಿಸಿದೆ. ಇದಕ್ಕೆ ಸೂಕ್ತವಾದ ಬೇರೆ ವೇದಿಕೆಗಳಲ್ಲಿ ಅರ್ಜಿ ಸಲ್ಲಿಸುವಂತೆ ಮಹಿಳೆಗೆ ಸುಪ್ರೀಂಕೋರ್ಟು ಸೂಚಿಸಿದೆ. ಅರ್ಜಿಯನ್ನು ಜಸ್ಟಿಸ್ ಆರ್. ಭಾನುಮತಿ, ಎ ಎಸ್ ಬೊಪಣ್ಣರ ಪೀಠ ತಳ್ಳಿಹಾಕಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ತಲಾಕ್ ನೀಡಲಾಗಿಲ್ಲ ಎಂದು ದಿಲ್ಲಿಯ ನಿವಾಸಿಯಾದ ಮಹಿಳೆ ಪರ ಹಾಜರಾದ ಅಡ್ವೊಕೇಟ್ ಎಂ.ಕೆ. ಕಶ್ಯಪ್ ಸುಪ್ರೀಂಕೋರ್ಟಿಗೆ ತಿಳಿಸಿದರು. ತ್ರಿವಳಿ ತಲಾಕ್ ಸಂವಿಧಾನ ವಿರೋಧಿಯೆನ್ನುವ ಸುಪ್ರೀಂಕೋರ್ಟಿನ ತೀರ್ಪನ್ನು ಬೆಟ್ಟು ಮಾಡಿ, ಇದನ್ನು ಪತಿ ಉಲ್ಲಂಘಿಸಿದ್ದಾರೆಂದು ಅರ್ಜಿದಾರರು ಕೋರ್ಟಿನ ಗಮನಕ್ಕೆ ತಂದಿದ್ದರು. ಆದರೆ ಸುಪ್ರೀಂಕೋರ್ಟು ಅರ್ಜಿದಾರರ ವಾದವನ್ನು ಪುರಸ್ಕರಿಸಲು ನಿರಾಕರಿಸಿತು.












