ಸನ್ಮಾರ್ಗ ವಾರ್ತೆ
ವಾಷಿಂಗ್ಟನ್ ಡಿಸಿ: ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಯುಎಸ್ ಸೀಕ್ರೆಟ್ ಸರ್ವಿಸ್ ವೈಟ್ ಹೌಸ್ ಬಳಿ ವೆನೆಜುವೆಲಾ ಪ್ರಜೆಯೊಬ್ಬನನ್ನು ಬಂಧಿಸಿದೆ. ಆತ ಪ್ರಯಾಣಿಸುತ್ತಿದ್ದ ವಾಹನದಲ್ಲಿ ಮೂರು ಬಂದೂಕುಗಳು ಮತ್ತು ಹಲವು ರೌಂಡ್ ಮದ್ದುಗುಂಡುಗಳು ಪತ್ತೆಯಾಗಿವೆ ಎಂದು ಯುಎಸ್ ಆಂತರಿಕ ಭದ್ರತಾ ಇಲಾಖೆ ತಿಳಿಸಿದೆ. ನವೆಂಬರ್ 5 ರ ರಾತ್ರಿ ಈ ಬಂಧನ ನಡೆದಿದೆ.
ವಾಷಿಂಗ್ಟನ್ ಡಿಸಿಯ ಕಾನ್ಸ್ಟಿಟ್ಯೂಷನ್ ಅವೆನ್ಯೂದಲ್ಲಿ ನಿಲ್ಲಿಸಲಾಗಿದ್ದ ವಾಹನದೊಳಗೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಕಂಡ ನಂತರ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಶೋಧ ನಡೆಸಿದರು. ಅಧಿಕಾರಿಗಳು ವಿಚಾರಿಸಿದಾಗ, ವಾಷಿಂಗ್ಟನ್ಗೆ ಬಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ತಮ್ಮ ಒಳಗಿನಿಂದಲೇ ನಿರ್ದೇಶನ ಸಿಕ್ಕಂತೆ ಅನಿಸಿತು ಎಂದು ಆ ವ್ಯಕ್ತಿ ಹೇಳಿದ್ದಾನೆ ಎನ್ನಲಾಗಿದೆ.
ತದನಂತರ ನಡೆಸಿದ ಶೋಧದಲ್ಲಿ ವಾಹನದೊಳಗೆ ಮೂರು ಬಂದೂಕುಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ. ಆ ವಾಹನವು ಕಳುವಾಗಿದ್ದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಸಮಯೋಚಿತ ಹಸ್ತಕ್ಷೇಪದಿಂದಾಗಿ ದೊಡ್ಡ ಅಪಾಯ ತಪ್ಪಿದೆ ಎಂದು ಯುಎಸ್ ಆಂತರಿಕ ಭದ್ರತಾ ಕಾರ್ಯದರ್ಶಿ ಮಾರ್ಕ್ ವೇನ್ ಮುಲ್ಲೆನ್ ಪ್ರತಿಕ್ರಿಯಿಸಿದ್ದಾರೆ.
ಕ್ರಿನೋಸ್ ಮಾರ್ಚ್ 2024 ರಲ್ಲಿ ಟೆಕ್ಸಾಸ್ ಮೂಲಕ ಯುನೈಟೆಡ್ ಸ್ಟೇಟ್ಸ್ಗೆ ಬಂದಿದ್ದ ಎಂದು ಆಂತರಿಕ ಭದ್ರತಾ ಇಲಾಖೆ ತಿಳಿಸಿದೆ. ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ನಂತರ ಈ ಹಿಂದೆ ಆತನನ್ನು ಯುಎಸ್ ಗಡಿ ಭದ್ರತಾ ಪಡೆ ಬಂಧಿಸಿತ್ತಾದರೂ, ನಂತರ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಆತನ ಮೇಲೆ ವಿವಿಧ ಆರೋಪಗಳನ್ನು ಹೊರಿಸಲಾಗಿದ್ದು, ಆತ ಯುಎಸ್ ಮಾರ್ಷಲ್ಸ್ ಸರ್ವಿಸ್ನ ಕಸ್ಟಡಿಯಲ್ಲಿದ್ದಾನೆ. ಈ ಘಟನೆಯ ಕುರಿತು ವೈಟ್ ಹೌಸ್ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಘಟನೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಆಂತರಿಕ ಭದ್ರತಾ ಇಲಾಖೆ ಮತ್ತು ಯುಎಸ್ ಸೀಕ್ರೆಟ್ ಸರ್ವಿಸ್ ಬಳಿ ಕೇಳುವಂತೆ ನಿರ್ದೇಶಿಸಲಾಗಿದೆ.












