ಸನ್ಮಾರ್ಗ ವಾರ್ತೆ
ಮುಂಬೈ: ದಾವೂದಿ ಬೋಹ್ರಾ ಪಂಥದ ಶಿಕ್ಷಣ ಸಂಸ್ಥೆಯಾದ ಅಲ್ ಜಾಮಿಯಾ-ತು-ಸೈಫಿಯಾ ಅರೇಬಿಕ್ ಅಕಾಡೆಮಿಯ ಮುಂಬೈ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಉಪನಗರ ಅಂಧೇರಿಯ ಮರೋಲ್ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿಗೆ ಆತ್ಮೀಯ ಸ್ವಾಗತ ದೊರೆಯಿತು. ಸಮಾರಂಭದ ನಂತರ ಆಧ್ಯಾತ್ಮಿಕ ನಾಯಕ ಮುಫದ್ದಲ್ ಸೈಫುದ್ದೀನ್ ಅವರೊಂದಿಗೆ ಪ್ರಧಾನಿ ಮೋದಿ ಮಾತನಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ‘ನಾನು ನಿಮ್ಮ ಕುಟುಂಬದ ಸದಸ್ಯನಾಗಿ ಇಲ್ಲಿಗೆ ಬಂದಿದ್ದೇನೆಯೇ ಹೊರತು ಪ್ರಧಾನಿಯಾಗಿ ಅಲ್ಲ’ ಎಂದು ಪ್ರಧಾನಿ ಮೋದಿ ಹೇಳಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದಾವೂದಿ ಬೋರಾ ಸಮುದಾಯದೊಂದಿಗಿನ ಸಂಬಂಧದ ಬಗ್ಗೆ ಮಾತನಾಡುತ್ತಾ, ದಾವೂದಿ ಬೋಹ್ರಾ ಸಮುದಾಯ ಕಾಲಕ್ಕೆ ತಕ್ಕಂತೆ ಮುನ್ನಡೆಯುತ್ತಿದೆ ಎಂದರು.
ವೈದ್ಯಕೀಯ ಶಿಕ್ಷಣಕ್ಕೆ ತಮ್ಮ ಸರ್ಕಾರ ನೀಡುವ ಮಹತ್ವದ ಕುರಿತು ಮಾತನಾಡಿದ ಪ್ರಧಾನಿಯವರು, ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ತೆರೆಯುವುದಾಗಿ ಹೇಳಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2004 ರಿಂದ 2014ರ ನಡುವೆ ದೇಶದಲ್ಲಿ 145 ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲಾಗಿತ್ತು. ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ತಮ್ಮ ಸರ್ಕಾರ 260ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದೆ ಎಂದು ಮೋದಿ ಹೇಳಿದರು.












