ಸಂತುಲಿತ ಭಾವದ ಪ್ರತಿರೂಪ ಪ್ರವಾದಿ ಮುಹಮ್ಮದ್(ಸ)

0
27

ಸನ್ಮಾರ್ಗ ವಾರ್ತೆ

✍️ ಸ್ವಾಮಿ ರಂಗನಾಥಾನಂದ
ಭಾಗ- 02

ಇವರು ಪ್ರಮುಖ ವೇದಾಂತ ವಿದ್ವಾಂಸರು, ಉಪನ್ಯಾಸಕರು ಮತ್ತು ಲೇಖಕರಾಗಿದ್ದರು. ಇವರು ಶ್ರೀ ರಾಮಕೃಷ್ಣ ಮಿಷನ್‌ನ ಅಧ್ಯಕ್ಷರಾಗಿರುತ್ತಾ 2005ರಲ್ಲಿ ನಿಧನರಾದರು. 1908ರಲ್ಲಿ ತ್ರಿಶೂರ್ ಜಿಲ್ಲೆಯ ತ್ರಿಕುರಿಯಲ್ಲಿ ಜನಿಸಿದ ಇವರನ್ನು ಆಧುನಿಕ ಕಾಲದ ವಿವೇಕಾನಂದ ಎಂದು ಕರೆಯಲಾಗುತ್ತದೆ. ಐವತ್ತಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿ ಉಪನ್ಯಾಸ ನೀಡಿದ್ದಾರೆ. 1989ರಲ್ಲಿ ರಾಮಕೃಷ್ಣ ಮಿಷನ್‌ನ ಉಪಾಧ್ಯಕ್ಷರು, 1998ರಲ್ಲಿ ಅಧ್ಯಕ್ಷರೂ ಆದರು. 1987ರಲ್ಲಿ ರಾಷ್ಟ್ರೀಯ ಏಕೀಕರಣಕ್ಕಾಗಿ ಮೊದಲ ಇಂದಿರಾಗಾಂಧಿ ಪ್ರಶಸ್ತಿ, 1999ರಲ್ಲಿ ಗಾಂಧಿ ಸಮಾಧಾನ್ ಪ್ರಶಸ್ತಿ ಪಡೆದರು.

ಪದ್ಮ ವಿಭೂಷಣ ದೊರೆತರೂ ಅದನ್ನವರು ತಿರಸ್ಕರಿಸಿದರು. ಮಲಯಾಳ ಮನೋರಮ ದೆಹಲಿ ಬ್ಯೂರೋ ಮುಖ್ಯಸ್ಥ ಡಿ. ವಿಜಯಮೋಹನ್ ಅವರು ಬರೆದ ಸ್ವಾಮಿ ರಂಗನಾಥಾನಂದರ ಜೀವನ ಚರಿತ್ರೆಯನ್ನು 2005ರಲ್ಲಿ ಡಿ.ಸಿ. ಬುಕ್ಸ್ ಪ್ರಕಟಿಸಿದೆ. “ಬದಲಾಗುತ್ತಿರುವ ಸಮಾಜಕ್ಕಾಗಿ ಶಾಶ್ವತ ಮೌಲ್ಯಗಳು” (ಐದು ಸಂಪುಟಗಳು), ಉಪನಿಷತ್‌ಗಳ ಸಂದೇಶ, ವಿಜ್ಞಾನ ಮತ್ತು ಅಧ್ಯಾತ್ಮಿಕತೆ, ಭಾರತೀಯ ಸಂಸ್ಕೃತಿಯ ಸಾರ ಇವು ಮುಖ್ಯ ಕೃತಿಗಳು. “ಬದಲಾಗುತ್ತಿರುವ ಸಮಾಜಕ್ಕಾಗಿ ಶಾಶ್ವತ ಮೌಲ್ಯಗಳು” ಎಂಬ ಪುಸ್ತಕ ಸರಣಿಯ “ದಿ ಗ್ರೇಟ್ ಸ್ಪಿರಿಚುವಲ್ ಲೀಡರ್ಸ್” ಎಂಬ ದ್ವಿತೀಯ ಸಂಪುಟದಿಂದ ಈ ಲೇಖನವನ್ನು ಆಯ್ಕೆ ಮಾಡಲಾಗಿದೆ.

ಕುರ್‌ಆನ್ ಇನ್ನೊಂದೆಡೆ, ಒಬ್ಬನೇ ದೇವನಿದ್ದಾನೆ ಮತ್ತು ಆ ದೇವನು ಇಂದ್ರಿಯಾನುಭವಗಳಿಗೆಲ್ಲಾ ಅತೀತನು ಎಂದು ಹೇಳುತ್ತದೆ:
“ಕಣ್ಣುಗಳು ಅವನನ್ನು ನೋಡುವುದಿಲ್ಲ; ಅವನು ಕಣ್ಣುಗಳನ್ನು ನೋಡುತ್ತಾನೆ. ಅವನು ಸೂಕ್ಷ್ಮತೆಯುಳ್ಳವನೂ ಸೂಕ್ಷ್ಮಜ್ಞಾನಿಯೂ ಆಗಿದ್ದಾನೆ.” (6:103)

ಈ ಸಂದೇಶವು ಕೇನೋಪನಿಷತ್ತಿನಲ್ಲಿರುವ ಸಂದೇಶವನ್ನು ಹೋಲುತ್ತದೆ.
“ಯಚ್ಛಕ್ಷುಕ್ಷಾನ ಪಶ್ಯತಿ ಯೇನ ಚಕ್ಷುಂಶಿ ಪಶ್ಯತಿ
ತದೇವ ಬ್ರಹ್ಮ ತ್ವಂ ವಿದ್ದಿ ನೇದಂ ಯದಿದಮುಪಾಸತೇ” (ಕೇನೋಪನಿಷತ್ :1-7)
(ಬ್ರಹ್ಮನನ್ನು ಕಣ್ಣಿನಿಂದ ನೋಡಲಾಗುವುದಿಲ್ಲ. ಆದರೆ ಯಾರಿಂದ ನೋಡುವ ಸಾಮರ್ಥ್ಯವು ಹುಟ್ಟಿಕೊಂಡಿದೆಯೋ ಮತ್ತು ಯಾರು ಕಣ್ಣಿನ ಎಲ್ಲಾ ನೋಟವನ್ನು ತಿಳಿಯುತ್ತಾರೋ ಅದು ಬ್ರಹ್ಮವಾಗಿದೆ. ಅನ್ಯಥಾ ಜನರು ಆರಾಧಿಸುತ್ತಿರುವುದರಲ್ಲಿ ಅಲ್ಲ).

“ಮನುಷ್ಯನ ಕರ್ಮಗಳನ್ನು ಅವುಗಳ ಉದ್ದೇಶದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ.” “ನೆರೆಯಾತ ಹಸಿದಿರುವಾಗ ಹೊಟ್ಟೆ ತುಂಬ ಉಣ್ಣುವವನು ವಿಶ್ವಾಸಿಯಲ್ಲ.” ಇವುಗಳು ಪ್ರವಾದಿ ವಚನಗಳಾಗಿವೆ (ಹದೀಸ್) ಕುರ್‌ಆನ್‌ನ ಸೂಕ್ತಗಳಲ್ಲ.- ಎಡಿಟರ್

(Sತಿಚಿmi ಖಚಿಟಿgಚಿಟಿಚಿಣhಚಿಟಿಚಿಟಿಜಚಿ: ಇಣeಡಿಟಿಚಿಟ vಚಿಟues ಜಿoಡಿ ಚಿ ಛಿhಚಿಟಿgiಟಿg soಛಿieಣಥಿ, ಗಿoಟ. ಟಟ, ಉಡಿeಚಿಣ Sಠಿiಡಿiಣuಚಿಟ ಖಿeಚಿಛಿheಡಿs, ಃhಚಿಡಿಣiಥಿಚಿ ಗಿiಜಥಿಚಿ ಃhಚಿvಚಿಟಿ, ಃombಚಿಥಿ, 5ಣh eಜ: 1987, ಠಿಠಿ: 81-85)

ಪರಿಪೂರ್ಣ ಮನುಷ್ಯ
“ಪ್ರವಾದಿಯವರೇ! ಜನರೊಡನೆ ಹೇಳಿರಿ; ನೀವು ನಿಜಕ್ಕೂ ಅಲ್ಲಾಹನನ್ನು ಪ್ರೀತಿಸುವವರಾಗಿದ್ದರೆ ನನ್ನನ್ನು ಅನುಸರಿಸಿರಿ! ಆಗ ಅಲ್ಲಾಹನು ನಿಮ್ಮನ್ನು ಪ್ರೀತಿಸುವನು.” (3:31)

ದೇವನನ್ನು ಪ್ರೀತಿಸುವುದು ಮತ್ತು ದೇವನ ಪ್ರೀತಿ, ದಯೆಗೆ ಸ್ವತಃ ಅರ್ಹನಾಗುವುದು ಧರ್ಮಗಳ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ಈ ಮಹಾನ್ ಗುರಿಯನ್ನು ಸಾಧಿಸಲು ತಮ್ಮ ಸಂಸ್ಥಾಪಕರ ಮಾದರಿಯನ್ನು ಅನುಸರಿಸುವಂತೆ ಹೆಚ್ಚಿನ ಧರ್ಮಗಳು ಅನುಯಾಯಿಗಳಿಗೆ ಬೋಧಿಸುತ್ತವೆ. ಆದರೆ ಇಸ್ಲಾಂ ಧರ್ಮವು ದೇವಗ್ರಂಥ ಮತ್ತು ಪ್ರವಾದಿ ಚರ್ಯೆಯನ್ನು ವಿಶ್ವಾಸಿಗಳಿಗೆ ಮಾರ್ಗದರ್ಶಿಯಾಗಿ ನಿರ್ಣಯಿಸುವ ಮೂಲಕ ಧಾರ್ಮಿಕ ಚಿಂತನೆಯ ಘನತೆಯನ್ನು ಎತ್ತರಿಸಿದೆ.

ದೇವಗ್ರಂಥವು ದೇವೇಚ್ಛೆಯ ಅವತೀರ್ಣವೆನಿಸಿದರೆ ಪ್ರವಾದಿ ಚರ್ಯೆಯು ಅದರ ಪ್ರಾಯೋಗಿಕ ಮಾದರಿಯಾಗಿದೆ. ಆಳವಾದ ಮತ್ತು ವಾಸ್ತವಿಕವಾದ ಆಧ್ಯಾತ್ಮಿಕ ಅನುಭವಗಳಿಗೆ ಧರ್ಮ ಮಾರ್ಗದ ಮೂಲಕ ಸತ್ಯವನ್ನು ಹುಡುಕುವವರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಪ್ರವಾದಿ ಚರ್ಯೆಯನ್ನು ಅದರ ಸಂಪೂರ್ಣತೆ ಮತ್ತು ಸಮಗ್ರತೆಯೊಂದಿಗೆ ಹದೀಸ್‌ಗಳಲ್ಲಿ ಸಂರಕ್ಷಿಸಲಾಗಿದೆ. ಒಂದು ಧರ್ಮದ ಅನುಯಾಯಿಗಳು ಎಲ್ಲರೂ ಒಂದೇ ವೃತ್ತಿಯಲ್ಲಿರುವವರೋ ಅಥವಾ ಒಂದೇ ಸ್ಥಾನವನ್ನು ಹೊಂದಿರುವವರೋ ಆಗಿರಲಾರರು. ವರ್ತನೆಗಳು ಮತ್ತು ಅಭಿರುಚಿಗಳಲ್ಲಿನ ವೈವಿಧ್ಯತೆ, ವೃತ್ತಿ ಮತ್ತು ಉದ್ಯೋಗಗಳಲ್ಲಿನ ವೈವಿಧ್ಯತೆ ಮೌಲಿಕ ಜೀವನದ ಅವಿಭಾಜ್ಯ ಅಂಗ. ಜಗತ್ತಿಗೆ ರಾಜರು ಮತ್ತು ಆಡಳಿತಗಾರರು ಬೇಕು; ನಾಗರಿಕರು ಮತ್ತು ಪ್ರಜೆಗಳು ಬೇಕು; ನ್ಯಾಯಾಧೀಶರು ಮತ್ತು ನ್ಯಾಯಶಾಸ್ತ್ರಜ್ಞರು ಇರಬೇಕು; ಸೈನ್ಯ ಮತ್ತು ಸೇನಾ ನಾಯಕರುಗಳ ಅಗತ್ಯವಿದೆ; ಜಗತ್ತಿನಲ್ಲಿ ಶ್ರೀಮಂತರು ಮತ್ತು ಬಡವರು ಇದ್ದಾರೆ. ಯೋಗಿ ಮತ್ತು ಯೋಧರೂ ಇದ್ದಾರೆ. ಪ್ರತಿಯೊಂದು ವಿಭಾಗಕ್ಕೂ ತಮ್ಮದೇ ಆದ ಜೀವನ ಕ್ಷೇತ್ರದಲ್ಲಿ ಮಾರ್ಗದರ್ಶನ ನೀಡುವ ಮಾದರಿ ಪುರುಷರ ಅಗತ್ಯವಿದೆ. ಆದಾಗ್ಯೂ, ಅವರೆಲ್ಲರೂ ಪ್ರವಾದಿಯವರನ್ನು ಮಾದರಿಯಾಗಿಸಬೇಕೆಂದು ಇಸ್ಲಾಂ ಹೇಳುತ್ತದೆ. ಅಂದರೆ ಉದ್ಯೋಗ, ಬಿರುದು ಏನೇ ಇರಲಿ ಅವರೆಲ್ಲರಿಗೂ ಪ್ರವಾದಿಯವರು ಮಾದರಿಯಾಗಿದ್ದಾರೆ ಮತ್ತು ಅವರು ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ಆದರ್ಶ ಜೀವನಕ್ಕೆ ಬೇಕಾದ ಎಲ್ಲಾ ಪ್ರಾಯೋಗಿಕ ಮಾದರಿಯನ್ನು ಪ್ರಸ್ತುತಪಡಿಸಿದ್ದಾರೆ ಎಂದರ್ಥ. ಈ ಹಕ್ಕು ಮಂಡನೆ ಅನುಕರಣೀಯ ಪುರುಷನ ಪರಿಪೂರ್ಣತೆಯನ್ನು ಸೂಚಿಸುತ್ತದೆ. ಏಕೆಂದರೆ ಶ್ರೀಮಂತನು ಬಡವನಿಗೆ ಮಾದರಿಯಲ್ಲ, ಬಡವ ಶ್ರೀಮಂತನಿಗೂ ಮಾದರಿಯಲ್ಲ. ಪ್ರಜೆಗಳು ದೊರೆಗೆ ಅಥವಾ ದೊರೆಗಳು ಪ್ರಜೆಗಳಿಗೂ ಮಾದರಿ ಅಲ್ಲ. ಅವನೊಬ್ಬ ಸಾರ್ವತ್ರಿಕ ಮಾದರಿಯಾಗಿರಬೇಕು; ಒಂದು ಸಮಗ್ರ ಮತ್ತು ಸ್ಥಿರವಾದ ಮಾದರಿ- ಬಹು-ಬಣ್ಣ ಮತ್ತು ಬಹು-ಪರಿಮಳದ ಹೂವುಗಳಿರುವ ‘ಬೊಕ್ಕೆ’ಯಂತೆ!

ಉದ್ಯೋಗಗಳು ಮತ್ತು ಸ್ಥಾನಗಳಲ್ಲಿನ ವೈವಿಧ್ಯತೆಯ ಹೊರತಾಗಿ, ಮಾನವ ಜೀವನವು ವಿವಿಧ ಸಂದರ್ಭ ಮತ್ತು ಸ್ಥಿತಿಗಳನುಸಾರ ಮಾನವನ ಕರ್ಮಗಳ ಮೇಲೆ ಪ್ರಭಾವ ಬೀರುವ ಅನೇಕ ಮನೋಭಾವ ಮತ್ತು ಅಭಿರುಚಿಗಳನ್ನು ಒಳಗೊಂಡಿದೆ. ನಾವು ನಡೆಯುತ್ತೇವೆ ಮತ್ತು ಕುಳಿತುಕೊಳ್ಳುತ್ತೇವೆ; ತಿನ್ನುತ್ತೇವೆ ಮತ್ತು ನಿದ್ರಿಸುತ್ತೇವೆ; ನಗುತ್ತೇವೆ ಮತ್ತು ಅಳುತ್ತೇವೆ; ಪಡೆಯುತ್ತೇವೆ ಮತ್ತು ಕೊಡುತ್ತೇವೆ; ಕೊಲ್ಲುತ್ತೇವೆ ಮತ್ತು ಕೊಲ್ಲಲ್ಪಡುತ್ತೇವೆ; ಒಟ್ಟಿನಲ್ಲಿ, ನಾವು ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ರೀತಿಯಲ್ಲಿ ವರ್ತಿಸುತ್ತೇವೆ ಎಂದರ್ಥ. ಕೆಲವೊಮ್ಮೆ ನಾವು ದೇವನನ್ನು ಸ್ತುತಿಸುತ್ತೇವೆ. ಇನ್ನು ಕೆಲವೊಮ್ಮೆ ವ್ಯಾಪಾರದಲ್ಲಿ ತೊಡಗುತ್ತೇವೆ. ಕೆಲವೊಮ್ಮೆ ನಾವು ಅತಿಥಿಗಳು; ಇನ್ನು ಕೆಲವೊಮ್ಮೆ ನಾವು ಆತಿಥೇಯರು. ನಮಗೆ ಈ ಪ್ರತಿಯೊಂದು ಸಂದರ್ಭಗಳಿಗೂ ಸೂಕ್ತ ನಡವಳಿಕೆಯ ಮಾದರಿ ಅಗತ್ಯವಿದೆ.
ದೈಹಿಕ ಪರಿಶ್ರಮದ ಅಗತ್ಯವಿರುವ ಕರ್ಮಗಳ ಜೊತೆಗೆ ಮಾನವನ ಮನಸ್ಸು ಮತ್ತು ಮೆದುಳಿಗೆ ಸಂಬಂಧಿಸಿದ ಇತರ ವಿಷಯಗಳೂ ಇವೆ. ನಾವದನ್ನು `ಭಾವನೆಗಳು’ ಎಂದು ಕರೆಯುತ್ತೇವೆ. ನಮ್ಮ ಭಾವನೆಗಳು ಅಥವಾ ಕಾಮನೆಗಳು ಸದಾ ಬದಲಾಗುತ್ತಿರುತ್ತವೆ. ಕೆಲವೊಮ್ಮೆ ನಾವು ಸಂತೋಷದಿಂದಿರುತ್ತೇವೆ; ಮತ್ತೆ ಕೆಲವೊಮ್ಮೆ ಕೋಪಗೊಳ್ಳುತ್ತೇವೆ. ಆಸೆ-ನಿರಾಸೆ, ಸಂತೋಷ-ದುಃಖ, ಗೆಲುವು-ಸೋಲು ಮುಂತಾದ ಭಾವನೆಗಳು ಉಂಟು ಮಾಡುವ ಅನುಭೂತಿ ಆಗಾಗ್ಗೆ ನಮ್ಮನ್ನು ಹಿಡಿದಿಟ್ಟುಕೊಳ್ಳುವ ಮತ್ತು ನಮ್ಮ ಕರ್ಮಗಳ ಮೇಲೆ ಪ್ರಭಾವ ಬೀರುವ ಮಾನಸಿಕ ಸ್ಥಿತಿಗಳಾಗಿವೆ. ಈ ಭಾವನೆಗಳ ಸಂತುಲನವು ಉದಾತ್ತ ಮತ್ತು ಶ್ರೇಷ್ಠ ಗುಣಸ್ವಭಾವಗಳ ಕೀಲಿಕೈ ಆಗಿದೆ. ಆದ್ದರಿಂದ, ತೀವ್ರತೆ ಮತ್ತು ಮಿತಿಮೀರುವಿಕೆಯ ಪ್ರಭಾವಕ್ಕೆ ಒಳಗಾಗುವ ಮಾನವ ಪ್ರವೃತ್ತಿಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿ ಕೊಡುವ ನೈತಿಕ ಮಾದರಿಯು ನಮಗೆ ಬೇಕು. ನಮ್ಮ ಭಾವನೆಗಳು ಮತ್ತು ಕಾಮನೆಗಳನ್ನು ಹೇಗೆ ಶಿಸ್ತುಬದ್ಧಗೊಳಿಸಬೇಕು ಎಂದು ತಿಳಿಸುವ ಪ್ರಾಯೋಗಿಕ ಮಾದರಿ. ಒಂದು ಕಾಲದಲ್ಲಿ ಮದೀನಾ ನಗರದಲ್ಲಿ ವಾಸಿಸುತ್ತಿದ್ದ ಒಬ್ಬ ವ್ಯಕ್ತಿ ಅಂತಹ ಸಂತುಲಿತ ಭಾವದ ಪ್ರತಿರೂಪವಾಗಿದ್ದರು!

ನಾವು ವಿವಿಧ ಜೀವನ ಸನ್ನಿವೇಶಗಳಿಗನುಸಾರ ದೃಢತೆ, ಸ್ಥಿರತೆ, ಧೈರ್ಯ, ಸಹಿಷ್ಣುತೆ, ಹೊಂದಾಣಿಕೆ, ತ್ಯಾಗ, ಉದಾರತೆ ಮತ್ತು ದಯೆಯುಳ್ಳವರಾಗಬೇಕಾಗುತ್ತದೆ. ಈ ಪ್ರತಿಯೊಂದು ಸಂದರ್ಭಗಳಲ್ಲಿ ನಮ್ಮ ನಡವಳಿಕೆಯನ್ನು ಕ್ರಮಬದ್ಧವಾಗಿಡಲು ನಮಗೆ ಮಾದರಿಯೊಂದರ ಅಗತ್ಯವಿದೆ. ಮುಹಮ್ಮದ್‌ರ ಹೊರತು ಮತ್ತಿನ್ಯಾರಲ್ಲಿ ಈ ಮಾದರಿಯನ್ನು ಹುಡುಕಬೇಕು

ಮೋಸೆಸ್‌ರಲ್ಲಿ ನಾವು ದೃಢತೆಯಿಂದ ಕೂಡಿದ ಒಬ್ಬ ನಾಯಕನ ಹೊರತು ದಯಾಳುವಾದ ಗುರುವನ್ನು ಕಾಣಲಾರೆವು. ನಜರೇತಿನ ಯೇಸು ಕರುಣೆಯ ಮಾದರಿಯಾಗಿರಬಹುದು. ಆದರೆ ದುರ್ಬಲರು ಮತ್ತು ಬಡವರ ರಕ್ತ ಬಿಸಿಯಾಗಿಸುವ ತೀಕ್ಷ್ಣ ತೆ ಅವರಲ್ಲಿಲ್ಲ. ಮನುಷ್ಯರಿಗೆ ಇವೆರಡೂ ಬೇಕು. ಎರಡರ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಲು ಅವನು ಕಲಿಯಬೇಕು. ಇಸ್ಲಾಮೀ ಪ್ರವಾದಿಯವರ ಜೀವನದಲ್ಲಿ, ಈ ಎಲ್ಲಾ ಗುಣಗಳು ಪೂರ್ಣ ಪ್ರಮಾಣದಲ್ಲಿ ಸೂಕ್ತ ರೀತಿಯಲ್ಲಿ ಅಡಕವಾಗಿವೆ.

ಮಾನವ ಜೀವನದ ವಿಭಿನ್ನ ಸನ್ನಿವೇಶಗಳಲ್ಲೂ ಭಾವನೆಗಳ ಸ್ಥಿತ್ಯಂತರಗಳಲ್ಲೂ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಎಲ್ಲಾ ವರ್ಗದ ಜನರಿಗೆ ಮಾನದಂಡವಾಗಿ ಸ್ವೀಕರಿಸಬಹುದಾದ ಮಾದರಿಯನ್ನು ನಾವು ಮುಹಮ್ಮದ್‌ರ ಜೀವನದಲ್ಲಿ ನೋಡಬಹುದು. ನೀವು ಶ್ರೀಮಂತರಾಗಿದ್ದರೆ, ಮೆಕ್ಕಾದ ವ್ಯಾಪಾರಿ ಮತ್ತು ಬಹ್ರೇನ್‌ನ ಸಂಪತ್ತಿನ ಒಡೆಯನಾಗಿದ್ದ ಮುಹಮ್ಮದ್‌ರಲ್ಲಿ ನಿಮಗೆ ಮಾದರಿ ಇದೆ. ನೀವು ಬಡವರಾಗಿದ್ದರೆ, ಅದು ಶಿಅಬು ಅಬೀ ತಾಲಿಬ್‌ನ ದಿಗ್ಬಂಧನದಲ್ಲೂ ಮದೀನಾದ ನಿರಾಶ್ರಿತರಲ್ಲೂ ಇದೆ. ನೀವು ಚಕ್ರವರ್ತಿಯಾಗಿದ್ದರೆ, ಅರೇಬಿಯಾದ ಆಡಳಿತಗಾರ ಮುಹಮ್ಮದ್‌ರನ್ನು ವೀಕ್ಷಿಸಿ! ನೀವು ಗುಲಾಮರಾಗಿದ್ದರೆ, ಮಕ್ಕಾದ ಕುರೈಶರ ಚಿತ್ರಹಿಂಸೆಗಳನ್ನು ಅನುಭವಿಸಿದ ಆ ವ್ಯಕ್ತಿಯನ್ನು ಗಮನಿಸಿ! ನೀವು ವಿಜಯಶಾಲಿಯಾಗಿದ್ದರೆ, ಬದ್ರ್ ಮತ್ತು ಹುನೈನ್‌ನ ವಿಜಯಶಾಲಿಯನ್ನು ನೋಡಿರಿ! ನಿಮಗೆ ಒಂದೊಮ್ಮೆ ಸೋಲುಂಟಾಗಿದ್ದಲ್ಲಿ, ಉಹುದ್‌ನಲ್ಲಿ ವಿಫಲರಾದ ಆ ವ್ಯಕ್ತಿಯಿಂದ ಕಲಿಯಿರಿ! ನೀವು ಶಿಕ್ಷಕರಾಗಿದ್ದರೆ, ಸಫಾ ಬೆಟ್ಟದ ಆ ಮಾರ್ಗದರ್ಶಕರಿಂದ ಪಾಠ ಗಳಿಸಿರಿ. ನೀವು ಓರ್ವ ವಿದ್ಯಾರ್ಥಿಯಾಗಿದ್ದರೆ, ಜಿಬ್ರೀಲರ ಮುಂದೆ ಕುಳಿತ ಆ ಶಿಷ್ಯರನ್ನು ಅನುಕರಿಸಿ. ನೀವೊಬ್ಬ ಭಾಷಣಗಾರನಾಗಿದ್ದರೆ, ಮದೀನಾದ ಮಸ್ಜಿದ್‌ನಲ್ಲಿ ಧರ್ಮೋಪದೇಶ ಮಾಡುತ್ತಿರುವ ಆ ಭಾಷಣಗಾರನತ್ತ ನಿಮ್ಮ ದೃಷ್ಟಿ ಹರಿಸಿ. ನಿಮ್ಮ ಮೇಲೆ ದಬ್ಬಾಳಿಕೆ ನಡೆಸುವವರ ಜೊತೆ ಕರುಣೆ ಮತ್ತು ಸತ್ಯದ ಸುವಾರ್ತೆಯನ್ನು ಬೋಧಿಸಲು ನೀವು ಉದ್ದೇಶಿಸಿದ್ದರೆ, ಮಕ್ಕಾದ ಬಹುದೇವಾರಾಧಕರಿಗೆ ದೈವಿಕ ಸಂದೇಶವನ್ನು ವಿವರಿಸುವ ಆ ಏಕೈಕ ಬೋಧಕನನ್ನು ನೋಡಿರಿ! ಶತ್ರುವನ್ನು ಸದೆಬಡಿದವರು ನೀವಾಗಿದ್ದರೆ, ಆ ಮಕ್ಕಾ ವಿಜಯಶಾಲಿಯಿಂದ ಪಾಠ ಕಲಿಯಿರಿ! ನಿಮಗೆ ಸ್ವಂತ ಭೂಮಿ ಮತ್ತು ತೋಟಗಳ ಪರಿಪಾಲನೆ ಮಾಡಬೇಕೆಂದಿದ್ದರೆ ಖೈಬರ್, ಫದಕ್ ಮತ್ತು ಬನೂನದೀರ್‌ನ ತೋಪುಗಳನ್ನು ಹೇಗೆ ಬೆಳೆಸಲಾಯಿತು ಎಂಬುದನ್ನು ಕಂಡುಕೊಳ್ಳಿ! (ಮುಂದುವರಿಯುವುದು)