ಪ್ರವಾದಿ ಮುಹಮ್ಮದ್(ಸ): ನಮ್ಮ ಅನುಸರಣೆ ಹೇಗಿರಬೇಕು?

0
48

ಸನ್ಮಾರ್ಗ ವಾರ್ತೆ

✍️ ಸಿ.ಟಿ. ಸುಹೈಬ್

ಸುತ್ತಮುತ್ತಲಿನವರೊಂದಿಗೆ ಕರುಣೆ ಪ್ರೀತಿ ತುಂಬಿ ತುಳುಕುವ ಹೃದಯವನ್ನು ಪ್ರವಾದಿವರ್ಯ(ಸ)ರಲ್ಲಿ ನಾವು ಕಾಣಬಹುದು. ತನ್ನ ಅಪ್ತೇಷ್ಟರ ಅಗಲುವಿಕೆಯಿಂದ ದುಃಖಿತರಾದವರಿಗೆ ಪ್ರಾರ್ಥನೆಗಳ ಮೂಲಕ ಸಾಂತ್ವನ ನೀಡುತ್ತಿದ್ದರು. ಪ್ರವಾದಿ ಪ್ರೇಮಕ್ಕೆ ಪ್ರೇರಣೆಯಿದೆ. ಸಹಾಬಿವರ್ಯರು ಪ್ರವಾದಿಯೊಂದಿಗಿನ ಪ್ರೀತಿ ಸ್ನೇಹವನ್ನು ಭಾವನಾತ್ಮಕವಾಗಿ ಪ್ರಕಟಿಸುತ್ತಿದ್ದರು. ಆದ್ದರಿಂದ ನನ್ನ ದೇಹದ ತುಂಬಾ ಮೊಳೆಗಳನ್ನು ಚುಚ್ಚಿದರೂ ನಾನು ಸಹಿಸಬಲ್ಲೆ ಆದರೆ ಪ್ರವಾದಿವರ್ಯರ(ಸ) ಕಾಲಿಗೆ ಒಂದು ಮುಳ್ಳು ಕೂಡಾ ತರಚುವುದನ್ನು ನಾನು ಸಹಿಸಲಾರೆ ಎಂದವರು ಹೇಳಿದ್ದರು. ಇಂತಹ ಪ್ರೀತಿ ಸ್ನೇಹವನ್ನು ಪ್ರಕಟಿಸಲು ಇಂದು ನಮ್ಮಿಂದ ಸಾಧ್ಯವಿಲ್ಲ. ಕಾರಣ ಪ್ರವಾದಿವರ್ಯರು(ಸ) ನಮ್ಮೊಂದಿಗಿಲ್ಲ. ಆದರೆ ಅವರೊಂದಿಗೆ ಸ್ವರ್ಗದಲ್ಲಿ ಸೇರಲು ನಾವು ಹಾತೊರೆಯುತ್ತಿದ್ದೇವೆ. ಆ ಕನಸು ನಮ್ಮನ್ನು ಭಾವನಾತ್ಮಕಾಗಿ ಅವರೊಂದಿಗೆ ಸೇರಿಸುತ್ತದೆ.

ನಾವು ಪ್ರವಾದಿವರ್ಯ(ಸ)ರನ್ನು ಪ್ರೀತಿಸುವುದಕ್ಕಿಂತ ಹೆಚ್ಚು ಪ್ರವಾದಿವರ್ಯರು(ಸ) ನಮ್ಮನ್ನು ಪ್ರೀತಿಸಿದ್ದಾರೆ. ಅವರು ನಮಗಾಗಿ ತಮ್ಮ ಆಪ್ತರಿಗಾಗಿ ಅತ್ತಿದ್ದಾರೆ. ಆ ಕಣ್ಣೀರನ್ನು ರಹ್ಮತ್ ಎಂದು ವರ್ಣಿಸಲಾಗಿದೆ. ಪ್ರವಾದಿವರ್ಯರು(ಸ) ಅತ್ತು ಬಿಟ್ಟ ಬಹಳಷ್ಟು ಸಂದರ್ಭಗಳಿವೆ. ಅದರಲ್ಲಿ ಹೆಚ್ಚಿನವು ತಮ್ಮ ಆಪ್ತರಿಗಾಗಿದೆ. ಕೆಲವು ಬಾರಿ ಈ ಸಮುದಾಯಕ್ಕಾಗಿ ಅತ್ತಿದ್ದಾರೆ.

ಪ್ರವಾದಿವರ್ಯರು(ಸ) ಮದೀನದಿಂದ ಮಕ್ಕಾ ನಗರಕ್ಕೆ ಸಾವಿರಾರು ಸಹಾಬಿಗಳೊಂದಿಗೆ ಪ್ರಯಾಣದಲ್ಲಿದ್ದರು. ಈ ನಡುವೆ ಒಂದೆಡೆ ಬೇರೊಂದು ದಾರಿಯಲ್ಲಿ ನಡೆಯುತ್ತಾರೆ. ಜೊತೆಗೆ ಸಹಾಬಿಗಳು ಹೋಗುತ್ತಾರೆ. ಒಂದು ಗೋರಿಯ ಪಕ್ಕ ಕುಳಿತು ಅಳತೊಡಗುತ್ತಾರೆ. ಪ್ರವಾದಿವರ್ಯರೇ(ಸ) ತಾವು ಯಾಕೆ ಅಳುತ್ತಿದ್ದೀರಿ? ಇದು ಯಾರ ಗೋರಿಯಾಗಿದೆ ಎಂದು ಸಹಾಬಿಗಳು ಕೇಳುತ್ತಾರೆ. ಆಗ ಪ್ರವಾದಿವರ್ಯರು(ಸ) “ಇದು ನನ್ನ ತಾಯಿಯ ಗೋರಿಯಾಗಿದೆ. ನಾನು ನನ್ನ ತಾಯಿಯ ಗೋರಿ ಸಂದರ್ಶನಕ್ಕೆ ಅಲ್ಲಾಹನಲ್ಲಿ ಅನುಮತಿ ಯಾಚಿಸಿದ್ದೆ. ನನಗೆ ಅನುಮತಿಸಿದನು. ಆದರೆ ಪಾಪ ವಿಮೋಚನೆಯ ಪ್ರಾರ್ಥನೆಗೆ ಅನುಮತಿ ನೀಡಲಿಲ್ಲ ಎಂದರು.

ಪ್ರವಾದಿವರ್ಯರ(ಸ) ಕಣ್ಣೀರು ಕಂಡು ಸಹಾಬಿಗಳು ಕೂಡಾ ಅತ್ತು ಬಿಟ್ಟರು. ಬಾಲ್ಯ ಕಾಲದ ಸ್ಮರಣೆಗೆ ಜಾರಿದ ಅವರು ಭಾವನಾತ್ಮಕವಾಗಿ ನಲುಗಿದ್ದರು. ಬಾಲ್ಯ ಕಾಲದ ಆ ನೆನಪು ಮಾತ್ರ ಅವರಲ್ಲಿತ್ತು. ತಾಯಿಯ ಮೇಲಿನ ಪ್ರೀತಿ ಮಾತ್ರ ಅಚ್ಚಳಿಯದೆ ಇತ್ತು.

ಪುತ್ರ ಇಬ್ರಾಹೀಮ್ ಮರಣ ಹೊಂದಿದಾಗ ಮೌನವಾಗಿ ದುಖಿಸಿದ್ದರು. ನಂತರ “ಕಣ್ಣುಗಳು ನೀರಿಂದ ತುಂಬಿದೆ. ಹೃದಯ ಮಿಡಿಯುತ್ತಿದೆ. ಅಲ್ಲಾಹನಿಗೆ ತೃಪ್ತಿಯಾಗದ ಮಾತನ್ನು ಹೇಳಲಾರೆ. ಇಬ್ರಾಹೀಮ್ ನಿನ್ನ ಅಗಲಿಕೆಯಿಂದ ನಾವೆಲ್ಲಾ ದುಃಖಿತರಾಗಿದ್ದೇವೆ. ಮಗನ ದಫನದ ಸಂದರ್ಭದಲ್ಲಿ ಮತ್ತೆ ಪ್ರವಾದಿವರ್ಯ(ಸ)ರನ್ನು ಇದೇ ರೀತಿಯಲ್ಲಿ ನಮಗೆ ಕಾಣಬಹುದು.

ಸಹನೆ ಎಂಬುದು ಭಾವನಾತ್ಮಕವಾದ ಎಲ್ಲಾ ಭಾವನೆಗಳನ್ನು ಅದುಮಿಟ್ಟುಕೊಳ್ಳುವುದಲ್ಲ. ಬದಲಾಗಿ ಅದು ಮಿತಿ ಮೀರದಂತೆ ನಿಯಂತ್ರಿಸುವುದಾಗಿದೆ. ದುಃಖಿತರಾದಾಗ ಅಳುವುದು ಸಾಮಾನ್ಯ. ಆದರೆ ಆ ಅಳುವು ಮಿತಿಮೀರಿದರೆ ಅದು ನಿರಾಶೆಯ ಕೂಪಕ್ಕೆ ತಳ್ಳುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸದಿರುವುದು ಸಹನೆಗೆ ವಿರುದ್ಧವಾಗುವುದು. ಇಸ್ಲಾಮಿನ ಹಿದಾಯತ್‌ನ ಬೆಳಕನ್ನು ನಮಗೆ ಹರಿಸಿದ ಪ್ರವಾದಿವರ್ಯರಲ್ಲಿ(ಸ) ನಮಗೆ ಬಹಳಷ್ಟು ಬಾಧ್ಯತೆಯಿದೆ. ಸಮಾಜದಲ್ಲಿ ವ್ಯಂಗ್ಯ, ತಮಾಶೆ, ಕಿರುಕುಳ, ಬಹಿಷ್ಕಾರ ದೌರ್ಜನ್ಯಗಳಿಗೆ ಈಡಾಗಿ ಎಲ್ಲವನ್ನೂ ಸಹಿಸಿಕೊಂಡದ್ದು ಅಲ್ಲಾಹನ ಧರ್ಮದ ಪ್ರಚಾರದ ದೌತ್ಯದ ಈಡೇರಿಕೆಗಾಗಿತ್ತು. ಅಲ್ಲಾಹನ ಪ್ರವಾದಿಗಳು ನಡೆದ ಹಾದಿ ಮಳೆ ಬಿಸಿಲುಗಳಿಂದ ಕೂಡಿತ್ತು. ಅಲ್ ಅಮೀನ್ ಎಂದು ಕರೆದವರು ಸಮಾಜದಲ್ಲಿ ಕ್ಷೋಭೆ ಹರಡುವವನೆಂದು ಆರೋಪಿಸಿದಾಗ ನೊಂದ ಹೃದಯ ಮಿಡಿಯಿತು. ಭುಜದ ಮೇಲೆ ಸತ್ತ ಒಂಟೆಯ ಕರುಳುಗಳನ್ನು ಶತ್ರುಗಳು ನೇತು ಹಾಕಿದ ಭಾರವನ್ನು ಹೊತ್ತರು. ತಾಯಿಫ್‌ನ ಬೀದಿಯಲ್ಲಿ ಗಾಯಗೊಂಡು ರಕ್ತ ಸುರಿಯಿತು. ಮಕ್ಕಾ ತೊರೆದು ಹೋಗುವಾಗ ನೊಂದು ಅತ್ತು ಹರಿದ ಕಣ್ಣೀರು ಇವೆಲ್ಲವನ್ನೂ ಸಹಿಸಿದ್ದು ನಮಗಾಗಿತ್ತು.

ಉರಿಯುತ್ತಿದ್ದ ದೀಪದ ಮುಂದೆ ಕೀಟಗಳು ಹಾರಿ ಬೀಳುವುದನ್ನು ತಡೆದಂತೆ ನರಕದೆಡೆಗೆ ಸಾಗುವ ಮನುಷ್ಯರನ್ನು ಕಾಪಾಡುವ ದೌತ್ಯವನ್ನು ನಾನು ರ್ನಿಹಿಸುತ್ತಿದ್ದೇನೆಂದು ಹೇಳಿ ಮತ್ತೆ ಮತ್ತೆ ಅವರ ಹಿಂದೆ ಸಂದೇಶ ಪ್ರಚಾರದೊಂದಿಗೆ ಹೋದಾಗ ಅವರು ಅದನ್ನು ತಿರಸ್ಕರಿಸಿದಾಗ ಅವರ ಹೃದಯವು ಕನಲಿತು. ಕೊನೆಗೆ ಅಲ್ಲಾಹನೇ ಹೀಗೆ ಹೇಳಬೇಕಾಯಿತು. “ಇದರಲ್ಲಿ ವಿಶ್ವಾಸವಿಡದೆ ಇದ್ದವರ ಹಿಂದೆ ನಡೆದು ತಮ್ಮ ದೇಹವನ್ನು ನಾಶ ಪಡಿಸಬೇಡಿರಿ. ಅವರಿಗೆ ತಲುಪಿಸುವ ಹೊಣೆಗಾರಿಕೆ ಮಾತ್ರ ನಿಮ್ಮದು. ಅದನ್ನು ನೀವು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿದ್ದೀರಿ.”

ಪ್ರವಾದಿವರ್ಯರು(ಸ) ತನ್ನ ಸಮುದಾಯಕ್ಕಾಗಿ ನಿರಂತರ ಪ್ರಾರ್ಥಿಸುತ್ತಿದ್ದರು. ಒಮ್ಮೆ ಅವರು ಪ್ರವಾದಿ ಇಬ್ರಾಹೀಮ್(ಅ)ರ ಪ್ರಾರ್ಥನೆಯನ್ನು ಪ್ರಾರ್ಥಿಸಿದರು. ನನ್ನ ರಕ್ಷಕನೇ ಖಂಡಿತವಾಗಿಯೂ ಅವುಗಳು(ವಿಗ್ರಹಗಳು) ಬಹಳಷ್ಟು ಜನರನ್ನು ದಾರಿ ತಪ್ಪಿಸಿದೆ. ಅದಕ್ಕಾಗಿ ಯಾರು ನನ್ನನ್ನು ಅನುಸರಿಸುತ್ತಾರೆಯೋ ಅವರು ನನ್ನ ಸಮುದಾಯದವರಾಗಿದ್ದಾರೆ. ಯಾರಾದರೂ ಅನುಸರಣೆಯಿಂದ ಹೊರತಾದರೆ ಖಂಡಿತವಾಗಿಯೂ ನೀನು ಹೆಚ್ಚು ಕ್ಷಮಿಸುವವನೂ ಕರುಣಾನಿಧಿಯೂ ಆಗಿರುತ್ತಿ” ನಂತರ ಸೂರಾ ಅಲ್ ಮಾಇದಾದಲ್ಲಿರುವ ಪ್ರವಾದಿ ಈಸಾ(ಅ)ರ ಪ್ರಾರ್ಥನೆಯನ್ನು ಪಾರಾಯಣ ಮಾಡಿದರು. ನೀನು ಅವರನ್ನು ಶಿಕ್ಷಿಸುವುದಾದರೆ ಅವರು ನಿನ್ನ ದಾಸರಲ್ಲವೇ? ನೀನು ಅವರನ್ನು ಕ್ಷಮಿಸುವುದಾದರೆ ನೀನು ಮಹಾ ಯುಕ್ತವಂತನೂ ಮಹಾ ಪ್ರತಾಪಿಯೂ ಆಗಿರುತ್ತೀ” ಈ ಎರಡೂ ಸೂಕ್ತಗಳನ್ನು ಪಠಿಸಿ ಎರಡೂ ಕೈಗಳನ್ನು ಮೇಲಕ್ಕೆತ್ತಿ “ಅಲ್ಲಾಹನೇ, ನನ್ನ ಸಮುದಾಯ… ನನ್ನ ಸಮುದಾಯ… ಎನ್ನುತ್ತಾ ಅಳತೊಡಗಿದರು. ಆಗ ಅಲ್ಲಾಹನು ಜಿಬ್ರೀಲ್ ಜೊತೆ, “ನೀವು ಪ್ರವಾದಿವರ್ಯರ(ಸ) ಬಳಿ ತೆರಳಿ ನೀವು ಅಳುತ್ತಿರುವುದರ ಕಾರಣವೇನೆಂದು ಕೇಳಿರಿ. (ಅಲ್ಲಾಹನು ಆ ಬಗ್ಗೆ ಹೆಚ್ಚು ಅರಿತವನಾಗಿರುತ್ತಾನೆ) ಜಿಬ್ರೀಲ್(ಅ)ರು ಪ್ರವಾದಿವರ್ಯರ(ಸ) ಬಳಿ ಬಂದು ಅಳುತ್ತಿರುವುದರ ಕಾರಣವೇನೆಂದು ಕೇಳಿದರು. ಆಗ ಪ್ರವಾದಿವರ್ಯರು(ಸ) ತನ್ನ ಸಮುದಾಯದ ಬಗ್ಗೆ ಇರುವ ಆತಂಕವನ್ನು ವ್ಯಕ್ತಪಡಿಸಿದರು. ಜಿಬ್ರೀಲ್ ಹಿಂದಿರುಗಿ ಮರಳಿದಾಗ ಅಲ್ಲಾಹನು ಹೇಳಿದನು.

“ಇನ್ನೊಮ್ಮೆ ನೀವು ಅವರ ಬಳಿಗೆ ಹೋಗಿ ಅವರಲ್ಲಿ ಹೀಗೆ ಹೇಳಬೇಕು. “ನಾನು ನಿಮ್ಮ ಸಮುದಾಯದ ಬಗ್ಗೆ ಸಂತೃಪ್ತಗೊಂಡಿರುವೆನು. ನೀವು ಆ ಬಗ್ಗೆ ಇನ್ನು ದುಃಖಿಸಬೇಕಾಗಿಲ್ಲ.”

ಒಮ್ಮೆ ಪ್ರವಾದಿವರ್ಯರು(ಸ) ಹೀಗೆ ಹೇಳಿದರು. “ಎಲ್ಲ ಪ್ರವಾದಿಗಳಿಗೆ ಉತ್ತರ ನೀಡುವಂತಹ ಪ್ರಾರ್ಥನೆಗೆ ಅವಕಾಶ ನೀಡಿರುತ್ತದೆ. ಎಲ್ಲರೂ ಅದನ್ನು ಈ ಜಗತ್ತಿನಲ್ಲಿಯೇ ಬಳಸಿಕೊಂಡರು. ಆದರೆ ನಾನು ನನ್ನ ಪ್ರಾರ್ಥನೆಯನ್ನು ಪರಲೋಕದಲ್ಲಿ ನನ್ನ ಸಮುದಾಯದ ಪರವಾಗಿ ಮೀಸಲಿಟ್ಟಿರುವೆನು. ಶಿರ್ಕ್ ಮಾಡದೆ ಬರುವ ಎಲ್ಲರಿಗೂ ಆ ಪ್ರಾರ್ಥನೆಯ ಪ್ರಯೋಜನ ಲಭಿಸುವುದು.”

ಒಮ್ಮೆ ಆಯಿಶಾ(ರ) ಕೇಳಿದರು, “ಪ್ರವಾದಿಯವರೇ(ಸ), ತಾವು ನನಗಾಗಿ ಪ್ರಾರ್ಥಿಸುವಿರಾ? “ಅಲ್ಲಾಹನೇ ಆಯಿಶಾ(ಸ) ಮಾಡಿದ ರಹಸ್ಯ ಮತ್ತು ಪರೋಕ್ಷವಾದ ಎಲ್ಲ ಪಾಪಗಳನ್ನು ನೀನು ಕ್ಷಮಿಸು.” ಪ್ರವಾದಿವರ್ಯರ(ಸ) ಈ ಪ್ರಾರ್ಥನೆಯನ್ನು ಕೇಳಿ ಹ. ಆಯಿಶಾ(ರ) ಸಂತೋಷಾತಿರೇಕದಿಂದ ನಕ್ಕು ಬಿಟ್ಟರು. ಅದನ್ನು ನೋಡಿದ ಪ್ರವಾದಿವರ್ಯರು(ಸ) “ನನ್ನ ಪ್ರಾರ್ಥನೆಯು ನಿನ್ನನ್ನು ಇಷ್ಟು ಸಂತೋಷಪಡಿಸಿತೇ? ಎಂದು ಕೇಳಿದರು. ಪ್ರವಾದಿವರ್ಯರೇ(ಸ) “ತಾವು ನನಗಾಗಿ ಪ್ರಾರ್ಥಿಸುವಾಗ ನಾನು ಹೇಗೆ ಸಂತೋಷಪಡದಿರಲಿ?” ಆಗ ಪ್ರವಾದಿವರ್ಯರು(ಸ) ಹೇಳಿದರು, “ಆಯಿಶಾ, ಪ್ರತಿ ನಮಾಝ್‌ನ ಸಂದರ್ಭದಲ್ಲಿಯೂ ನನ್ನ ಸಮುದಾಯಕ್ಕಾಗಿ ನಾನು ಪ್ರಾರ್ಥಿಸುವೆನು.”

ಪ್ರವಾದಿವರ್ಯರು(ಸ) ಪ್ರೀತಿಸಿದ ಸಮುದಾಯದವರಲ್ಲಿ ಸಹಾಬಿಗಳು ಮಾತ್ರವಲ್ಲ ನಾವೆಲ್ಲರೂ ಸೇರಿದ್ದೇವೆ. ನಮ್ಮನ್ನು ಬಹಳಷ್ಟು ಪ್ರೀತಿಸಿದ ನಮಗಾಗಿ ಸಾಕಷ್ಟು ಪ್ರಾರ್ಥಿಸಿದ ನಮಗಾಗಿ ಶಫಾಅತ್‌ನ ಮಹತ್ತರವಾದ ಒಂದು ಪ್ರಾರ್ಥನೆಯನ್ನು ಮೀಸಲಿಟ್ಟ ಪ್ರವಾದಿವರ್ಯರು(ಸ) ನಮ್ಮನ್ನು ನೋಡಲು ಕಾಯುತ್ತಿದ್ದಾರೆ. ಒಮ್ಮೆ ಅವರು ಹೀಗೆ ಹೇಳಿದರು. “ನಾನು ನನ್ನ ಸಹೋದರರ ನಿರೀಕ್ಷೆಯಲ್ಲಿದ್ದೇನೆ. ಸಹಾಬಿಗಳು ಕೇಳಿದರು. ನಿಮ್ಮ ಸಹೋದರರು ನಾವಲ್ಲವೇ? ಆಗ ಪ್ರವಾದಿ ವರ್ಯರು(ಸ) ಹೇಳಿದರು. “ನೀವೆಲ್ಲರೂ ನನ್ನ ಅನುಚರರಾಗಿದ್ದೀರಿ. ನನ್ನ ಸಹೋದರರು ಮುಂದೆ ಬರಲಿರುವ ಸಮುದಾಯದವರು. ಅವರು ನನ್ನನ್ನು ನೋಡದೆ ನನ್ನ ಮೇಲೆ ವಿಶ್ವಾಸವಿಟ್ಟವರು.”

ಇದು ಪ್ರವಾದಿವರ್ಯರು(ಸ) ನಮ್ಮ ಕುರಿತು ಆಡಿದ ಮಾತಾಗಿದೆ. ನಮ್ಮೆಲ್ಲರನ್ನೂ ನೋಡಲು ಪ್ರವಾದಿವರ್ಯರು(ಸ) ಕಾಯುತ್ತಿದ್ದಾರೆ. ಆದರೆ ಅಲ್ಲಿ ಅವರನ್ನು ನೋಡಲು, ಸಲಾಮ್ ಹೇಳಲು, ಅವರೊಂದಿಗೆ ಜನ್ನತುಲ್ ಫಿರ್ದೌಸ್‌ಗೆ ಹೋಗಲು ನಮಗೆ ಅರ್ಹತೆ ಇದೆಯೇ ಎಂದು ನಾವು ಆತ್ಮಾವಲೋಕನ ಮಾಡಬೇಕು.

ಪ್ರವಾದಿವರ್ಯರು(ಸ) ನಮ್ಮನ್ನು ಪ್ರೀತಿಸಿದಂತೆ ನಮಗೂ ಅವರನ್ನು ಪ್ರೀತಿಸಲು ಸಾಧ್ಯವಾಗಬೇಕು. ಅದರಲ್ಲಿ ನಾವು ಬಾಧ್ಯಸ್ತರಾಗಿದ್ದೇವೆ. ಅದರ ಜೊತೆ ನಾವು ಸ್ವರ್ಗ ಪ್ರವೇಶಿಸಬೇಕಾದರೆ ರಬೀಅ(ರ)ರ ಜೊತೆ ಪ್ರವಾದಿವರ್ಯರು(ಸ) ಹೇಳಿದಂತೆ, “ನಿನ್ನನ್ನು ನನ್ನ ಜೊತೆ ಸ್ವರ್ಗಕ್ಕೆ ಕೊಂಡೊಯ್ಯಬೇಕಾದರೆ ಸುಜೂದುಗಳನ್ನು ಹೆಚ್ಚಿಸಿ ನನಗೆ ನೆರವಾಗಬೇಕು.” ಅಲ್ಲಾಹನ ಪ್ರವಾದಿಯವರು(ಸ) ಮಾಡಿದ ಸತ್ಕರ್ಮಗಳು ಪುಣ್ಯ ಕರ್ಮಗಳು ಎಲ್ಲವೂ ಅವರು ಸ್ವರ್ಗ ಪ್ರವೇಶಿಸಲು ಮಾಡಿದ್ದಲ್ಲ. ಅವರಿಗೆ ಆ ಅನುಗ್ರಹವಿದೆ. ಅವರು ಹೋಗುವ ಸ್ವರ್ಗಕ್ಕೆ ನಾವೂ ಪ್ರವೇಶಿಸಬೇಕೆಂದಾಗಿದೆ. ಅವರು ಕಲಿಸಿದ ಒಳಿತುಗಳು ಸ್ವರ್ಗಕ್ಕೆ ಹೋಗುವ ದಾರಿಗಳಾಗಿವೆ. ಅವೆಲ್ಲವನ್ನೂ ನಾವು ಬದುಕಲ್ಲಿ ಅಳವಡಿಸಬೇಕು. ನಮ್ಮ ಮುಂದೆ ಪ್ರವಾದಿವರ್ಯರು(ಸ) ತೋರಿದ ಸುಗಂಧಭರಿತ ಹಾದಿಯೊಂದಿದೆ. ಅದರಲ್ಲಿ ಸಾಗಿದರೆ ಕೊನೆಗೆ ನಮ್ಮ ಪ್ರೀತಿ ಪಾತ್ರರನ್ನು ಕಾಣಬಹುದು. ಸಲ್ಲಲ್ಲಾಹು ಅಲಾ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಮ್.