ಹಸನ್ ನಸ್ರುಲ್ಲಾ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ: ಉತ್ತರಪ್ರದೇಶದ ಪೊಲೀಸರಿಂದ ಕೇಸು ದಾಖಲು

0
169

ಸನ್ಮಾರ್ಗ ವಾರ್ತೆ

ಹಿಝ್ಬುಲ್ಲ ಮುಖಂಡ ಹಸನ್ ನಸ್ರುಲ್ಲಾ ಅವರ ಹತ್ಯೆಯನ್ನು ಖಂಡಿಸಿ ಉತ್ತರ ಪ್ರದೇಶದ ಅಮೇತಿಯಲ್ಲಿ ಮುಸ್ಲಿಮರು ಕ್ಯಾಂಡಲ್ ಲೈಟ್ ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಿಗೆ ಉತ್ತರ ಪ್ರದೇಶದ ಪೊಲೀಸರು ಒಟ್ಟು 51 ಮಂದಿ ಮೇಲೆ ಕೇಸು ದಾಖಲಿಸಿದ್ದಾರೆ. ಅಕ್ಟೋಬರ್ ಒಂದರಂದು ಈ ಪ್ರತಿಭಟನೆ ನಡೆದಿತ್ತು

ಪ್ರತಿಭಟನಾಕಾರರು ನಸ್ರುಲ್ಲಾ ಅವರ ಭಾವಚಿತ್ರವನ್ನು ಪ್ರದರ್ಶಿಸಿದರು ಮತ್ತು ಇಸ್ರೇಲ್ ವಿರುದ್ಧ ಘೋಷಣೆಯನ್ನು ಕೂಗಿದರು. ಹಾಗೆಯೇ ಹಿಝ್ಬುಲ್ಲ ಮತ್ತು ಫೆಲಸ್ತೀನ್ ಪರ ಬೆಂಬಲವನ್ನ ಸೂಚಿಸಿದರು. ಈ ನಡುವೆ ಪೊಲೀಸರು ಮಧ್ಯಪ್ರವೇಶಿಸಿದರಲ್ಲದೆ 8 ಮಂದಿಯನ್ನು ವಶಕ್ಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು. ಈ ಪ್ರತಿಭಟನೆಗೆ ಅನುಮತಿಯನ್ನು ಕೋರಲಾಗಿಲ್ಲ, ಆದ್ದರಿಂದ ಇದು ಕಾನೂನುಬಾಹಿರ ಎಂದು ಪೊಲೀಸರು ಹೇಳಿದ್ದಾರೆ.

ಆ ಬಳಿಕ ಪೊಲೀಸರು 11 ಮಂದಿ ಹೆಸರನ್ನು ಸೂಚಿಸಿ ಕೇಸು ದಾಖಲಿಸಿದ್ದಾರೆ ಮತ್ತು ಇತರ 40 ಮಂದಿ ಅಪರಿಚಿತರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

ಇದೇ ವೇಳೆ ಆಲ್ ಇಂಡಿಯಾ ಶಿಯಾ ಪರ್ಸನಲ್ ಲಾ ಬೋರ್ಡ್ ಈ ಬಂಧನವನ್ನು ಬಲವಾಗಿ ಖಂಡಿಸಿದೆ. ಪ್ರಧಾನ ಕಾರ್ಯದರ್ಶಿ ಮೌಲಾನ ಯೂಸುಫ್ ಅಬ್ಬಾಸ್ ಅವರು ಪೊಲೀಸರ ಕ್ರಮವನ್ನು ಟೀಕಿಸಿದ್ದಾರೆ ಮತ್ತು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ನಸ್ರುಲ್ಲಾ ಹತ್ಯೆಯನ್ನು ಖಂಡಿಸಿ ಲಕ್ನೋದಲ್ಲಿ ಶಿಯಾ ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹಾಗೆಯೇ ಇವರ ಹತ್ಯೆಯನ್ನು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.