ನಮಾಝ್ ಗಾಗಿ ಬಳಸುತ್ತಿದ್ದ ಮನೆಯನ್ನು ತೆರವುಗೊಳಿಸುವಂತೆ ಸಂಘ ಪರಿವಾರದಿಂದ ಪ್ರತಿಭಟನೆ: ತನಿಖೆಗೆ ಆದೇಶ

0
100

ಸನ್ಮಾರ್ಗ ವಾರ್ತೆ

ಅನಧಿಕೃತ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸಂಘ ಪರಿವಾರದ ಗುಂಪು ಉತ್ತರಾಖಂಡದ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಯ ಬೆನ್ನಿಗೆ ತನಿಖೆಗೆ ಆದೇಶಿಸಲಾಗಿದೆ.

ಬೆರಿನಾಗ್ ಎಂಬಲ್ಲಿ ಪಾಳು ಬಿದ್ದ ಮನೆಯನ್ನು ನಮಾಝಿನ ಸ್ಥಳವಾಗಿ ಪರಿವರ್ತಿಸಲಾಗಿದೆ ಎಂಬುದು ದೂರು. ಈ ಮಸೀದಿಯನ್ನು ತಕ್ಷಣ ತೆರವುಗೊಳಿಸಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ರಾಷ್ಟ್ರೀಯ ಸೇವಾ ಸಂಘಟನೆ ಬೆದರಿಕೆ ಹಾಕಿದೆ.

ಹಲ್ದ್ವಾನಿಯಲ್ಲಿ ವಾಸಿಸುತ್ತಿರುವ ಆಸಿಮ್ ಎಂಬವರ ಮಾಲಿಕತ್ವದ ಮನೆ ಇದು. ಕಳೆದ 25 ವರ್ಷಗಳಿಂದ ನೂರಕ್ಕಿಂತಲೂ ಅಧಿಕ ಮುಸ್ಲಿಂ ಕುಟುಂಬಗಳು ಇದನ್ನು ನಮಾಝ್ ಮಾಡಲು ಉಪಯೋಗಿಸುತ್ತಿದೆ. ಮನೆಯ ಒಂದು ಭಾಗವನ್ನು ಮದರಸವಾಗಿಯೂ ಇಲ್ಲಿನ ಊರವರು ಬಳಸುತ್ತಿದ್ದಾರೆ.

ಇದೇ ವೇಳೆ ಮಸೀದಿಯ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜನರ ನಡುವೆ ದ್ವೇಷವನ್ನು ಹುಟ್ಟು ಹಾಕಿದ ಆರೋಪದಲ್ಲಿ ರಾಷ್ಟ್ರೀಯ ಸೇವಾ ಸಂಘಟನೆಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.