ಸನ್ಮಾರ್ಗ ವಾರ್ತೆ
ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ವಕಾಡೆ ಸಾವಿನ ಕುರಿತು ಹೊಣೆಗಾರಿಕೆಯನ್ನು ಕೋರಿ ‘ಚಲೋ ಐಐಟಿ ಬಾಂಬೆ’ ಕರೆಗೆ ಓಗೊಟ್ಟು ಐಐಟಿ ಬಾಂಬೆ ಹೊರಗೆ ಜಮಾಯಿಸಿದ್ದ ಅಂಬೇಡ್ಕರವಾದಿ ನಾಯಕರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಮುಂಬೈ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ಜಾತಿ ತಾರತಮ್ಯದ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆಯೂ ನಾಗರಿಕ ಸಮಾಜದ ಸದಸ್ಯರು ಒತ್ತಾಯಿಸಿದ್ದಾರೆ.
ವಶಕ್ಕೆ ಪಡೆದವರಲ್ಲಿ ಆಲ್ ಇಂಡಿಯಾ ಇಂಡಿಪೆಂಡೆಂಟ್ ಶೆಡ್ಯೂಲ್ಡ್ ಕ್ಯಾಸ್ಟ್ಸ್ ಅಸೋಸಿಯೇಷನ್ (ಎಐಐಎಸ್ಸಿಎ) ಸದಸ್ಯರಾದ ರಾಹುಲ್ ಸೋನ್ಪಿಂಪುಲೆ, ದೀಪಾಲಿ ಸಾಲ್ವೆ ಮತ್ತು ಸಂಭಾಜಿ ಭಗತ್ ಸೇರಿದ್ದಾರೆ.
ತಮ್ಮ ಮಗನ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಸುಮಾರು ಎರಡು ವಾರಗಳಿಂದ ನಿರಾಹಾರ ಸತ್ಯಾಗ್ರಹ ನಡೆಸುತ್ತಿರುವ ವಕಾಡೆ ಅವರ ಪೋಷಕರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.
ವರದಿಗಳ ಪ್ರಕಾರ, ಸಾಹಿಲ್ ಅವರ ತಂದೆ ರವೀಂದ್ರ ವಕಾಡೆ ಅವರ ಕರೆಯ ಮೇರೆಗೆ ಐಐಟಿ ಬಾಂಬೆ ಹೊರಗೆ ಪ್ರದರ್ಶನ ನೀಡುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರವೀಂದ್ರ ವಕಾಡೆ ಅವರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ವರದಿಗಳು ಸೂಚಿಸುತ್ತವೆ; ಆದಾಗ್ಯೂ, ಮುಂಬೈ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಈ ಮಧ್ಯೆ, ಪೊಲೀಸರು ಇಡೀ ಕ್ಯಾಂಪಸ್ನಲ್ಲಿ ಭಾರಿ ಬಂದೋಬಸ್ತ್ ನಿಯೋಜಿಸಿ, ಪ್ರವೇಶದ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಆಡಳಿತ ಮಂಡಳಿಗೆ ಸಲ್ಲಿಸಲು ಬಯಸಿದ್ದ ಜನರನ್ನು ವಶಕ್ಕೆ ಪಡೆಯುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಪ್ರತಿಭಟನೆಯು ಮುಂದುವರಿಯಲು ಸಹ ಅನುಮತಿ ನಿರಾಕರಸಿದ್ದಾರೆ ಎಂದು ವರದಿಯಾಗಿದೆ.
ಮತ್ತೊಂದೆಡೆ, ವಕಾಡೆ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಮುಂಬೈ ಅಪರಾಧ ವಿಭಾಗವು (ಕ್ರೈಂ ಬ್ರಾಂಚ್) 40ಕ್ಕೂ ಹೆಚ್ಚು ಜನರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
22 ವರ್ಷ ವಯಸ್ಸಿನ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸೆಪ್ಟೆಂಬರ್ 18ರ ಸಂಜೆ ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದ ನಂತರ ವಕಾಡೆ ಅವರು ಸಂಸ್ಥೆಗೆ ಲಿಖಿತ ಹೇಳಿಕೆಯನ್ನು ಸಲ್ಲಿಸಿದ್ದರು. ಆ ಹೇಳಿಕೆಯಲ್ಲಿ, ತಾನು ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ನಡೆಸಿಲ್ಲ ಎಂದು ಹೇಳಿ, ತನ್ನ ತಪ್ಪನ್ನು ಒಪ್ಪಿಕೊಂಡು ಮತ್ತೊಂದು ಅವಕಾಶವನ್ನು ಕೋರಿದ್ದರು.
ವಕಾಡೆ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಪವಾಯಿ ಪೊಲೀಸರು ಪ್ರೊಫೆಸರ್ ದೂಲ್ಲಾ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟಿರುವ ಪ್ರಾಧ್ಯಾಪಕರು, ವಿದ್ಯಾರ್ಥಿಯ ಪೋಷಕರು ತಮ್ಮ ಮೇಲೆ ಹೊರಿಸಿರುವ ಕಿರುಕುಳದ ಆರೋಪಗಳನ್ನು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ನಿರಾಕರಿಸಿದ್ದಾರೆ.
ಸಂಸ್ಥೆಯಲ್ಲಿ ಜಾತಿ ತಾರತಮ್ಯ ನಡೆದಿದೆ ಎಂದು ಆರೋಪಿಸಿ ಮತ್ತು ತಮ್ಮ ಮಗನಿಗೆ ನ್ಯಾಯ ಕೋರಿ ವಕಾಡೆ ಅವರ ಪೋಷಕರಾದ ರವೀಂದ್ರ ಮತ್ತು ಸೋನಾಲಿ ವಕಾಡೆ ಅವರು ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಸೆಪ್ಟೆಂಬರ್ 24 ರಂದು ತಮ್ಮ ನಿರಾಹಾರ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.












