ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದೇಶದೊಳಗೆ ವಲಸೆಯಲ್ಲಿರುವ ಮತದಾರರಿಗೆ ವೋಟು ಹಾಕುವ ವೋಟಿಂಗ್ ವ್ಯವಸ್ಥೆಯನ್ನು ವಿರೋಧಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ. ಚುನಾವಣಾ ಆಯೋಗ ದೂರದಲ್ಲಿ ನಿಯಂತ್ರಿಸುವ ವೋಟಿಂಗ್ ಮಿಷನ್ ಜಾರಿಗೆ ತರಲು ಹೊರಟಿತ್ತು. ಈಗ ಪ್ರತಿಪಕ್ಷಗಳು ತಮ್ಮ ಆಕ್ಷೇಪ ಸಲ್ಲಿಸಲು ತೀರ್ಮಾನಿಸಿವೆ. ಈ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ರಾಜಕೀಯ ಅಸಹಜತೆ ಇದೆ ಎಂದು ಆರೋಪಿಸಿವೆ.
ಆರ್ವಿಎಂ(ದೂರ ನಿಯಂತ್ರಿತ ಮತದಾನ ಯಂತ್ರ)ಅನ್ನು ಚುನಾವಣಾ ಆಯೋಗ ಪ್ರದರ್ಶಿಸುವ ಮೊದಲೇ ರಾಷ್ಟ್ರೀಯ ಹಾಗೂ ರಾಜ್ಯದ ಅಂಗೀಕಾರ ಪಡೆದಿರುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ದಿಲ್ಲಿಯ ಕನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ರವಿವಾರ ಸಭೆ ನಡೆಸಿ ಇದನ್ನು ವಿರೋಧಿಸುವ ತೀರ್ಮಾನಕ್ಕೆ ಬಂದಿವೆ.
ವಲಸಿಗ ಮತದಾರರ ವ್ಯಾಖ್ಯಾನ, ವಲಸೆ ಕಾರ್ಮಿಕರ ಸಂಖ್ಯೆಯಲ್ಲಿ ಅಸ್ಪಷ್ಟತೆ ಇದೆ ಎಂದು ಆರೋಪಿಸಿದ್ದು, ಸಭೆಯಲ್ಲಿ ಭಾಗವಹಿಸಿದ ಎಲ್ಲ ಪ್ರತಿಪಕ್ಷಗಳು ಚುನಾವಣಾ ಆಯೋಗದ ಈ ಪ್ರಯತ್ನಕ್ಕೆ ತಣ್ಣೀರೆರಚಲು ಸಿದ್ಧವಾಗಿವೆ. ಜನವರಿ 31ರೊಳಗೆ ರಾಜಕೀಯ ಪಾರ್ಟಿಗಳು ಆಯೋಗಕ್ಕೆ ಅಭಿಪ್ರಾಯ ತಿಳಿಸಬೇಕಿತ್ತು. ಆದರೆ ಪ್ರತಿಪಕ್ಷಗಳು ಚುನಾವಣಾ ಆಯೋಗ ಈ ಯಂತ್ರವನ್ನು ಪ್ರದರ್ಶಿಸುವ ಮೊದಲೇ ಸಭೆ ಸೇರಿ ಒಗ್ಗಟ್ಟಿನಿಂದ ವಿರೋಧಿಸಿರವುದು ವಿಶೇಷ.
ಸಿಪಿಐ ಪ್ರಧಾನ ಕಾರ್ಯದರ್ಶಿ ಡಾ.ರಾಜ, ಸಿಪಿಎಂ ನಾಯಕ ನಿಲೋಲ್ಪಲ್ ಬಸು, ರಾಜ್ಯಸಭೆಯ ಪಕ್ಷೇತರ ಸದಸ್ಯ ಕಪಿಲ್ ಸಿಬಲ್, ಆರ್ಜೆಡಿಯ ರಾಜ್ಯಸಭಾ ಸದಸ್ಯ ಪ್ರೊ.ಮನೋಜ್ ಕುಮಾರ್ ಝಾ. ಮುಸ್ಲಿಂ ಲೀಗ್ನ ರಾಷ್ಟ್ರೀಯ ಕಾರ್ಯದರ್ಶಿ ಖುರ್ರಂ ಉಮರ್, ಅನಿಲ್ ಪ್ರಸಾದ್ ಹೆಗ್ಗಡೆ, ಅಫಾಕ್ ಅಹ್ಮದ್ ಖಾನ್(ಜೆಡಿಯು) ಪ್ರವೀಣ್ ಮೆಹತೊ, ಸಚಿನ್ ಪರಾಸನ್(ಶಿವಸೇನೆ), ಪ್ರವೀಣ್ ಚಕ್ರವರ್ತಿ(ಕಾಂಗ್ರೆಸ್), ಶತ್ರುಜಿತ್ ಸಿಂಗ್(ಆರ್ಎಸ್ಪಿ) ಸಭೆಯಲ್ಲಿ ಭಾಗವಹಿಸಿದ್ದರು. ಶಮ್ಮಿ ಒಬೆರಾಯ್(ಜಮ್ಮು ಕಾಶ್ಮೀರ ನ್ಯಾಶನಲ್ ಕಾನ್ಪರೆನ್ಸ್), ಸುಹೈಲ್ ಬುಖಾರಿ(ಪಿಡಿಪಿ), ಡಾ. ಡಿ.ರವಿ ಕುಮಾರ್ (ವಿಸಿಕೆ), ವಿಜಯ್ ಹರಿಸ್ಡಕ್, ಸುಪ್ರಿಯೋ ಭಟ್ಟಾಚಾರ್ಯ(ಝಾರ್ಕಂಡ್ ಮುಕ್ತಿ ಮೋರ್ಚಾ) ಸಭೆಯಲ್ಲಿ ಉಪಸ್ಥಿತರಿದ್ದರು.












