ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆಗೆ ಸಿಕ್ಕ ಪರೋಕ್ಷ ಬೆಂಬಲವೇ ಪಾಲ್ ಘರ್ ಲಿಂಚಿಂಗ್ ಗೆ ಕಾರಣ; ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ- ಪ್ರೊ. ಸಲೀಂ ಇಂಜಿನಿಯರ್

0
1561

ಸನ್ಮಾರ್ಗ ವಾರ್ತೆ

ನವದೆಹಲಿ, ಎಪ್ರಿಲ್ 22- ಮಹಾರಾಷ್ಟ್ರದ ಪಾಲಘರ್ ನಲ್ಲಿ ಇಬ್ಬರು ಸಾಧುಗಳ ಸಹಿತ ಮೂವರನ್ನು ಗುಂಪೊಂದು ಥಳಿಸಿ ಕೊಂದಿರುವುದಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ಮತ್ತು ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.

ದೆಹಲಿಯ ಶಹಾದಾರದಲ್ಲಿರುವ ಬೌದ್ಧ ಸನ್ಯಾಸಿ ಅಶ್ವಘೋಷ್ ಅವರು ಈ ಘಟನೆಯನ್ನು ಖಂಡಿಸುತ್ತಾ, ಸಮಾಜದ ಎಲ್ಲ ಜನರು ಪರಸ್ಪರ ಸಾಮರಸ್ಯದಿಂದ ಬದುಕಬೇಕು ಮತ್ತು ದೇಶದಲ್ಲಿನ ದ್ವೇಷದ ವಾತಾವರಣವನ್ನು ಕೊನೆಗೊಳಿಸಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ನ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊಫೆಸರ್ ಸಲೀಂ ಎಂಜಿನಿಯರ್ ಅವರು ಸಾಧುಗಳ ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವರಲ್ಲದೆ, ಇಂತಹ ಘಟನೆಗಳು ಸಮಾಜಕ್ಕೆ ಶಾಪ ಎಂದು ಹೇಳಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ನಾಗರಿಕರ ಹತ್ಯೆ ನಡೆಯುವುದು ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಸ್ಥಿತಿಯಾಗಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸಾ ಪ್ರವೃತಿಯು ಆತಂಕಕಾರಿ. ರಾಜಕೀಯ ಹಿತಾಸಕ್ತಿಗಳಿಗಾಗಿ ಜನರನ್ನು ಕೋಮು ಆಧಾರದಲ್ಲಿ ಧ್ರುವೀಕರಣ ಗೊಳಿಸುವುದು; ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ಯೋಜಿತ ದಾಳಿಗಳಿಗೆ ಮೌನ ಸಮ್ಮತಿಯನ್ನು ಒದಗಿಸುವುದು ಮತ್ತು ಇಂತಹ ಹತ್ಯೆಗಳನ್ನು ವೈಭವೀಕರಿಸಿ ಹಿಂಸಾಚಾರಕ್ಕೆ ಉತ್ತೇಜನ ನೀಡುವುದು ಈ ದೇಶದಲ್ಲಿ ಕೆಲವು ಸಮಯದಿಂದ ನಡೆಯುತ್ತ ಬಂದಿದೆ. ಆ ಸಂದಭದಲ್ಲಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಿರುತ್ತಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲವೇನೋ ಎಂದವರು ಇಂಡಿಯಾ ಟುಮಾರೋದೊಂದಿಗೆ ಅಭಿಪ್ರಾಯ ಹಂಚಿಕೊಳ್ಳುತ್ತಾ ಹೇಳಿದ್ದಾರೆ.

ಜನರು ಕಾನೂನಿಗೆ ಭಯ ಪಡುತ್ತಿಲ್ಲ. ಅದೇ ವೇಳೆ ಮಾಧ್ಯಮಗಳ ಒಂದು ವಿಭಾಗವು ಆರ್ಥಿಕ ಹಿತಾಸಕ್ತಿಗಾಗಿ ಮತ್ತು ರಾಜಕೀಯ ಓಲೈಕೆಗಾಗಿ ದ್ವೇಷವನ್ನು ಉತ್ತೇಜಿಸುತ್ತಿದೆ ಮತ್ತು ಸಮಾಜದ ವಿವಿಧ ವರ್ಗಗಳ ನಡುವೆ ಅಪನಂಬಿಕೆಯ ಮತ್ತು ಅಸಮಾನತೆಯ ಭಾವನೆಯನ್ನು ಹೆಚ್ಚಿಸಲು ಶ್ರಮಿಸುತ್ತಿದೆ. ಇವುಗಳ ಒಟ್ಟು ಮೊತ್ತವಾಗಿ ಇಂಥ ಕೃತ್ಯಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಸರಕಾರ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಹಾಗೆಯೇ, ಶಂಕರಾಚಾರ್ಯ ಸ್ವಾಮಿ ಓಂಕರಾನಂದ ಸರಸ್ವತಿಯವರು ಕೂಡ ಘಟನೆಯನ್ನು ಖಂಡಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಆಗ್ರಹಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.