ಫೆಡರೇಷನ್ ಆಫ್‌ ಇಂಡಿಯನ್ ಟ್ರೇಡ್ ಯೂನಿಯನ್‌ನಿಂದ‌(FITU) “ಕ್ವಿಟ್ ಮೋದಿ” ರಾಷ್ಟ್ರೀಯ ಅಭಿಯಾನಕ್ಕೆ ಭರ್ಜರಿ ಚಾಲನೆ

0
240

ಸನ್ಮಾರ್ಗ ವಾರ್ತೆ

ಮುದುಗಲ್,(ರಾಯಚೂರು): ಫೆಡರೇಷನ್ ಆಫ್‌ ಇಂಡಿಯನ್ ಟ್ರೇಡ್ ಯೂನಿಯನ್(FITU) ವತಿಯಿಂದ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಆಯೋಜಿಸಿದ “ಕ್ವಿಟ್ ಮೋದಿ” ರಾಷ್ಟೀಯ ಅಭಿಯಾನದ ಉದ್ಘಾಟನಾ ಸಮಾರಂಭವನ್ನು ಇಲ್ಲಿನ, ಮುದುಗಲ್ ಪುರಸಭೆ ಕಚೇರಿಯ ಮುಂಭಾಗದಲ್ಲಿರುವ ರಂಗ ಮಂದಿರದ ಅಂಗಣದಲ್ಲಿ ಜರುಗಿತು. FITU ಕರ್ನಾಟಕ ರಾಜ್ಯಾಧ್ಯಕ್ಷ ಸುಲೈಮಾನ್ ಕಲ್ಲರ್ಪೆಯವರ ಅಧ್ಯಕ್ಷತೆಯಲ್ಲಿ, ಕಿಕ್ಕಿರಿದು ಸೇರಿದ ಕಾರ್ಮಿಕ ಜನರನ್ನೊಳಗೊಂಡ ಸಾರ್ವಜನಿಕ ಸಭೆಯಲ್ಲಿ F.I.T.U. ಇದರ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ರಝಾಕ್ ಪಾಲೇರಿಯವರು ಉದ್ಘಾಟಿಸಿದರು.

ಈ ಸಮಾರಂಭದಲ್ಲಿ, ಎಫ್.ಐ.ಟಿ.ಯು. ರಾಜ್ಯ ಉಪಾಧ್ಯಕ್ಷರಾಗಿರುವ ಎಂ.ದಿವಾಕರ್ ರಾವ್ ಬೋಳೂರು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ(TUCI) ಇದರ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕೆ, FITU ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಅಬ್ದುಲ್ ರಹಿಮಾನ್, ರಾಷ್ಟೀಯ ಕೋಶಾಧಿಕಾರಿ ಅಡ್ವೋಕೇಟ್ ಅಬ್ದುಲ್ ಸಲಾಂ,  ಯೆಫ್ ಐ ಟಿ ಯು ರಾಷ್ಟ್ರೀಯ ಸಮಿತಿ ಸದಸ್ಯೆಯರಾದ ಫರ್ವಿನ್ ಶೇಕ್ ಹಾಗೂ ಫಾತಿಮಾ FITU ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಾ ನಾಯಕ್ ಹಾಗೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಯಚೂರು ಜಿಲ್ಲಾ ಅಧ್ಯಕ್ಷರಾದ ಶೇಕ್ ಫರೀದ್ ಉಮರಿ ಮುಂತಾದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಫ್.ಐ.ಟಿ.ಯು. ರಾಜ್ಯಾಧ್ಯಕ್ಷ ಸುಲೈಮಾನ್ ಕಲ್ಲರ್ಪೆಯವರು, ಕಾರ್ಮಿಕರಿಗೆ ನ್ಯಾಯ ನೀಡದ ಕೇಂದ್ರ ಸರಕಾರ, ಇನ್ನೂ ಬಯಲು ಶೌಚಾಲಯವನ್ನೇ ಆಶ್ರಯಿಸಿರುವ ನಮ್ಮ ದೇಶದಲ್ಲಿ ಮೂರು ಸಾವಿರ ಕೋಟಯಷ್ಟು ವೆಚ್ಚದ ಪ್ರತಿಮೆಯನ್ನು ನಿರ್ಮಾಣ ಮಾಡಲು ಸರಕಾರದಲ್ಲಿ ಹಣವಿದೆಯೆಂಬುವುದಾಗಿ ಕೇಂದ್ರ ಸರ್ಕಾರದ ವಿರೋಧಾಭಾಸ ನೀತಿಯನ್ನು ಕುಟುಕಿದರು. ವೆಲ್ಫೇರ್ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಅಡ್ವೋಕೇಟ್ ತಾಹಿರ್ ಹುಸೇನ್‌ರವರು ಮಾತನಾಡಿ ನಮ್ಮ ಪಕ್ಷವು ಯಾವುದೇ ಒಂದು ನಿರ್ದಿಷ್ಟ ವ್ಯಕ್ತಿಯ ಅಥವಾ ರಾಜಕೀಯ ಪಕ್ಷದ ವಿರೋಧಿಯಲ್ಲ ಬದಲಾಗಿ ಅವುಗಳ ಸೈದ್ಧಾಂತಿಕ ತಳಹದಿಯಲ್ಲಿ ಮತ್ತು ಅದರ ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳನ್ನು ಮಾತ್ರ ವಿರೋಧಿಸುತ್ತೇವೆ. ಪ್ರಸಕ್ತ ಸರಕಾರ ಜನಸಾಮಾನ್ಯರ ಪ್ರಜಾ ಸರಕಾರವಾಗಿ ಉಳಿದಿಲ್ಲ ಬದಲಾಗಿ, ಕೇವಲ ಅಂಬಾನಿ-ಅದಾನಿಗಳನ್ನು ಸಲಹುವ ಬಂಡವಾಳಶಾಹಿ ವ್ಯವಸ್ಥೆಯ ಪರವಾಗಿದೆ. ವೆಲ್ಫೇರ್ ಪಕ್ಷವು ಮೌಲ್ಯಾಧಾರಿತ ರಾಜಕೀಯವನ್ನು ಮಾತ್ರ ಪ್ರತಿನಿಧಿಸುತ್ತಿದ್ದು ನಾವು ಆಡಳಿತಾತ್ಮಕವಾದ ಯಾವುದೇ ತಪ್ಪುಗಳು ಯಾರಲ್ಲಿ ಕಂಡರೂ ಪ್ರತಿಭಟಿಸಿ ಎದುರಿಸಲಿದ್ದೇವೆ ಎಂದರು.

ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ FITU ರಾಷ್ಟ್ರಾಧ್ಯಕ್ಷ ರಝಾಕ್ ಪಾಲೇರಿಯವರು, ಕೇಂದ್ರ ಸರ್ಕಾರದ ನೂತನ ಕಾರ್ಮಿಕ ವಿರೋಧಿ ನೀತಿಯಲ್ಲಿನ ಲೋಪದೋಷಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಲದೆ, ಹೆಚ್ಚಳ ಮಾಡಲಾದ ಇಂಧನ ಬೆಲೆಯನ್ನೂ, ಪೂರ್ವಸ್ಥಿತಿಗೆ ತರುವಂತೆ ಮತ್ತು ರದ್ದುಗೊಳಿಸಲಾದ ಅಡುಗೆ ಅನಿಲ ಸಬ್ಸಿಡಿಯನ್ನು ಮತ್ತೆ ಜಾರಿಗೊಳಿಸುವಂತೆ ಅಭಿಯಾನದ ಮೂಲಕ ಸರಕಾರವನ್ನು ಆಗ್ರಹಿಸುವುದಾಗಿ ತಿಳಿಸಿದರು.

ಕಾರ್ಯಕ್ರಮ ನಿರೂಪಿಸಿದ ವೆಲ್ಫೇರ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ವಕ್ತಾರ ಅಬ್ದುಲ್ ಖಾದರ್ ಕುಕ್ಕಾಜೆಯವರು ಉದ್ಘಾಟನಾ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿ ಹೇಳಿದರು. ಅದಲ್ಲದೆ ಉಪಸ್ಥಿತರಿದ್ದ ಗಣ್ಯ ಅತಿಥಿಗಳೆಲ್ಲರೂ ಸಂದರ್ಭೋಚಿತವಾಗಿ ಮಾತನಾಡಿ ಜನಪರ ಅಭಿಯಾನಕ್ಕೆ ಶುಭ ಹಾರೈಸಿದರು ಕಾರ್ಯಕ್ರಮದ ಕೊನೆಯಲ್ಲಿ F.I.T.U ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ರಾಜಾ ನಾಯಕ್ ರವರು ಧನ್ಯವಾದವಿತ್ತರು.

ಇದೇ ಸಂದರ್ಭದಲ್ಲಿ, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಶ್ರೀ ಶಾನೂರ್ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಹಬೀಬ್‌ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಹಾಗೂ ಕಾರ್ಯಕ್ರಮದ ಮುಂಚಿತವಾಗಿ ವಿವಿಧ ಕ್ಷೇತ್ರಗಳಲ್ಲಿನ ಕಾರ್ಮಿಕರನ್ನೊಳಗೊಂಡ ಸಭಿಕರು ಆಕರ್ಷಕ ರ್ಯಾಲಿಯೊಂದಿಗೆ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಘೋಷಣೆ ಕೂಗುತ್ತಾ ಸಭಾಂಗಣಕ್ಕೆ ಆಗಮಿಸಿದರು. ಕಲಾವಿದರಾದ ಗಂಗಾಧರ್ ತಂಡದವರ ಕ್ರಾಂತಿ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.