ಪ್ರೀತಿಯ ಪ್ರಧಾನಿಯವರೇ, ಅರ್ಥ ವ್ಯವಸ್ಥೆ ತಾಳತಪ್ಪಿದೆ, ನಿರ್ಮಲಾ ಅಸಮರ್ಥರಾಗಿದ್ದಾರೆ- ರಾಹುಲ್ ಗಾಂಧಿ

0
793

ಹೊಸದಿಲ್ಲಿ, ಆ. 2: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‍ರನ್ನು ಅಸಮರ್ಥ ವಿತ್ತ ಸಚಿವೆಯೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದಾರೆ. ಅವರ ಕ್ರಮಗಳಿಂದಾಗಿ ದೇಶ ಆರ್ಥಿಕತೆ ಪತನದೆಡೆಗೆ ಸರಿಯತೊಡಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಅರ್ಥವ್ಯವಸ್ಥೆ ಮುಗ್ಗರಿಸುತ್ತಿದೆ. ಪ್ರಗತಿಯೆಡೆಗೆ ಸಾಗಿಸಲು ವಿತ್ತ ಸಚಿವಾಲಯ ಯಾವುದೇ ಕ್ರಮವನ್ನು ಅನುಸರಿಸುತ್ತಿಲ್ಲ. ಇದೇ ವೇಳೆ ಸೀತಾರಾಮನ್ ದೇಶ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಅಂದರೆ ಆರ್ಥಿಕ ಮಾಂದ್ಯ ಸ್ಥಿತಿ ಸನ್ನಿಹಿತವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ಪ್ರೀತಿಯ ಪ್ರಧಾನಿಯವರೇ, ಅರ್ಥ ವ್ಯವಸ್ಥೆ ತಾಳತಪ್ಪಿದೆ. ಇಲ್ಲಿ ಎಲ್ಲಿಯೂ ಬೆಳಕು ಗೋಚರಿಸುತ್ತಿಲ್ಲ. ನಿಮ್ಮ ಅಸಮರ್ಥ ವಿತ್ತ ಸಚಿವರು ಮಾಂದ್ಯ ರೈಲು ಬಂಡಿ ಓಡಿಸುತ್ತಿದ್ದಾರೆ” ಎಂದು ರಾಹುಲ್ ಟ್ವೀಟಿಸಿದ್ದಾರೆ. ಭಾರತ ಅರ್ಥ ವ್ಯವಸ್ಥೆಯಲ್ಲಿ ಒಟ್ಟಾರೆ ಪ್ರಗತಿಯಾಗಿಲ್ಲ ಎಂದು ವರದಿಯಾಗಿದ್ದನ್ನು ಸೂಚಿಸಿ ಅವರು ಟ್ವೀಟ್ ಮಾಡಿದ್ದಾರೆ.

ನೋಟು ನಿಷೇಧ, ಜಿಎಸ್‍ಟಿ ಅರ್ಥ ವ್ಯವಸ್ಥೆಯಲ್ಲಿ ಸೃಷ್ಟಿಸಿದ ಹಾನಿ ಮತ್ತು ಬಿಜೆಪಿ ಸರಕಾರದ ದೌರ್ಬಲ್ಯ, ಅಸಾಮರ್ಥ್ಯಗಳನ್ನು ಎತ್ತಿ ತೋರಿಸುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.