ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಟ್ಟ ದಲಿತ ಬಾಲಕಿಯ ಪೋಷಕರನ್ನು ಭೇಟಿಯಾದ ರಾಹುಲ್ ಗಾಂಧಿ

0
121

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿಯಲ್ಲಿ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲ್ಲಲ್ಪಟ್ಟಿರುವ ದಲಿತ ಬಾಲಕಿಯ ಹೆತ್ತವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾದರು. ದಲಿತ ಬಾಲಕಿ ದೇಶದ ಮಗಳು ಎಂದು ನಿನ್ನೆ ರಾಹುಲ್ ಟ್ವೀಟ್ ಮಾಡಿದ್ದರು. ಅತ್ಯಾಚಾರಕ್ಕೆ ಸಂಬಂಧಿಸಿದ ವಾರ್ತೆಯ ಸ್ಕ್ರೀನ್ ಶಾಟ್ ಶೇರ್ ಮಾಡಿ ತನ್ನ ಮಾತನ್ನು ಅವರು ಹೇಳಿದ್ದರು.

ಆದಿತ್ಯವಾರ ಸಂಜೆ 5:30ಕ್ಕೆ ದಿಲ್ಲಿಯ ಪುರಾಣಾ ನಂಗಲ್ ಗ್ರಾಮದಲ್ಲಿ ನಾಡನ್ನೇ ಕಂಪಿಸುವಂತೆ ಮಾಡಿದ ಅತ್ಯಾಚಾರ ಹತ್ಯೆ ಘಟನೆ ನಡೆದಿತ್ತು. ದಿಲ್ಲಿ ಕಂಟೋನ್ಮೆಂಟ್ ಪ್ರದೇಶದ ಸ್ಮಶಾನಕ್ಕೆ ಸೇರಿಕೊಂಡಿದ್ದ ಬಾಡಿಗೆ ಮನೆಯಲ್ಲಿ ದಲಿತ ಜಾತಿಯವರಾದ ಬಾಲಕಿಯ ಬಡ ಕುಟುಂಬ ವಾಸಿಸುತ್ತಿದೆ. ನೀರು ಕುಡಿಯಲು ಹೋದ ಮಗಳು ನಂತರ ಮರಳಿ ಬರಲಿಲ್ಲ. ಮಗಳನ್ನು ಕಾಣದೆ ದಿಕ್ಕೆಟ್ಟ ತಾಯಿ ಹಲವು ಕಡೆ ಹುಡುಕಿದರು. ಕೊನೆಗೆ ಸ್ಮಶಾನದ ಪುರೋಹಿತನ ಸಂಗಡಿಗರು ಜೀವ ಕಳಕೊಂಡ ಮಗಳ ಮೃತದೇಹವನ್ನು ಆ ಅಮ್ಮನಿಗೆ ತೋರಿಸಿಕೊಟ್ಟರು. ಕೂಲರ್‌ನಿಂದ ನೀರು ಕುಡಿಯುವ ವೇಳೆ ಮಗು ಶಾಕ್ ಹೊಡೆದು ಮೃತಪಟ್ಟಿತು ಎಂದು ಇವರು ಸುಳ್ಳು ಹೇಳಿದ್ದರು.

ಪೊಲೀಸರಿಗೆ ಸುದ್ದಿ ತಿಳಿಸಿದಾಗ ಅವರು ಮೃತದೇಹದ ಪೋಸ್ಟ್‍ಮಾರ್ಟಂಗೆ ಕಳುಹಿಸುತ್ತಾರೆ ಮತ್ತು ಅವಯವಗಳನ್ನು ಕದಿಯುತ್ತಾರೆ ಎಂದು ಪುರೋಹಿತನೇ ಅಮ್ಮನಿಗೆ ಹೇಳಿದರು. ಕುಟುಂಬದ ಮೇಲೆ ಒತ್ತಡಹಾಕಿ ಮೃತದೇಹವನ್ನು ಕೂಡಲೇ ದಹಿಸುವಂತೆ ನೋಡಿಕೊಂಡಿದ್ದ.

ಆದರೆ, ಬಾಲಕಿಯ ಕೈ ಮತ್ತು ಮೊಣಕಾಲಿನಲ್ಲಿ ಸುಟ್ಟ ಗಾಯ ಮತ್ತು ತುಟಿ ನೀಲಿ ಬಣ್ಣಕ್ಕೆ ತಿರುಗಿದ್ದನ್ನು ತಂದೆ-ತಾಯಿ ಗಮನಿಸಿದ್ದರು. ಆಗಬಾರದ್ದು ಏನೋ ನಡೆದಿದೆ ಎಂದು ಸಂದೇಹ ಇವರ ಮನಸ್ಸಿನಲ್ಲಿತ್ತು. ಕೊನೆಗೆ ತಮ್ಮ ಸಮ್ಮತಿಯಿಲ್ಲದೆ ಮೃತದೇಹ ದಹಿಸಿದ ವಿಷಯ ನೆರೆಯವರಿಗೆ ಹೇಳಿದರು. ಇದಾದನಂತರ ಹೊರಜಗತ್ತಿಗೆ ಈ ಕ್ರೂರಕೃತ್ಯ ಬಯಲುಗೊಂಡಿತು. ನಂತರ ಸ್ಮಶಾನದ ಬಳಿ ಊರಿನವರು ಒಟ್ಟು ಸೇರಿದರು. ಪೊಲೀಸರಿಗೆ ತಿಳಿಸಿದರು.

ಬಾಲಕಿಯನ್ನು ಸ್ಮಶಾನದಲ್ಲಿ ಅತ್ಯಾಚಾರ ಮಾಡಿದ ಬಳಿಕ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿ ರಾಧೆಶ್ಯಾಮ್ ಮತ್ತು ಸ್ಮಶಾನದ ಸಿಬ್ಬಂದಿ ಸಾಲಿಂ , ಲಕ್ಷ್ಮಿನಾರಾಯಣ, ಕುಲ್‍ದೀಪ್‍ರನ್ನು ಬಂಧಿಸಲಾಗಿದೆ. ಪೊಕ್ಸೊ, ಎಸ್‍ಸಿಎಸ್‍ಟಿ ಕಾನೂನು ಅನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.