ರೈತರ ಸಾವಿನ ಬಗ್ಗೆ ಮಾಹಿತಿ ಇಲ್ಲ ಹಾಗಾಗಿ ಪರಿಹಾರ ನೀಡಲಾಗದು ಎಂದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ; ಮೃತ ರೈತರ ಪಟ್ಟಿ ಹಂಚಿಕೊಂಡ ರಾಹುಲ್ ಗಾಂಧಿ

0
236

ಸನ್ಮಾರ್ಗ ವಾರ್ತೆ

ದೆಹಲಿ: ಕೃಷಿ ಕಾನೂನು ವಿರುದ್ಧ ಒಂದು ವರ್ಷದಿಂದ ನಡೆದ ಪ್ರತಿಭಟನೆಯಲ್ಲಿ ರೈತರು ಸಾವನ್ನಪ್ಪಿರುವ ಕುರಿತು ಯಾವುದೇ ಮಾಹಿತಿ ಇಲ್ಲ ಹಾಗಾಗಿ ಪರಿಹಾರ ಧನ ನೀಡಲು ಸಾಧ್ಯವಿಲ್ಲ ಎಂದ ಕೇಂದ್ರ ಸರ್ಕಾರ ಹೇಳಿದ ಬೆನ್ನಿಗೆ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 400 ಕ್ಕೂ ಹೆಚ್ಚು ಮೃತ ರೈತರ ಪಟ್ಟಿಯನ್ನು ಹಂಚಿಕೊಳ್ಳುವ ಮೂಲಕ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.‌

ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ರಾಹುಲ್, ಕೃಷಿ ಕಾನೂನು ವಿರುದ್ಧ ಹೋರಾಟದ ವೇಳೆ ಮೃತಪಟ್ಟ ರೈತರಿವರು. ಈ ರೈತರ ಕುಟುಂಬಗಳಿಗೆ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವ ಪಂಜಾಬ್‌ ಸರಕಾರ ಪರಿಹಾರ ನೀಡಿದೆ ಎಂದು ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ “ಮಾನವೀಯತೆಯ ಕೊರತೆ” ಇದೆ, ಸರಕಾರ “ದುರಹಂಕಾರ”ದ್ದು ಎಂದು ಹೇಳಿದ ರಾಹುಲ್,  ಕೊವಿಡ್ -19  ಸಾವುಗಳಿಗೆ ಪರಿಹಾರ ನೀಡಲು ಸರ್ಕಾರ ಸಿದ್ಧವಾಗಿಲ್ಲ ಮತ್ತು ಈಗ ಮೃತರ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಸಿದ್ಧವಿಲ್ಲ ಎಂದು ಹೇಳಿದರು.

ಭಾರತದ ಪ್ರಧಾನಿ ನಡೆದುಕೊಳ್ಳಬೇಕಾದ ರೀತಿ ಇದಲ್ಲ. ಇದು ಅತ್ಯಂತ ಅಹಿತಕರ, ಅನೈತಿಕ ಮತ್ತು ಹೇಡಿತನದ ವರ್ತನೆಯಾಗಿದೆ ಎಂದು ರಾಹುಲ್ ಕುಟುಕಿದರು. ಆಂದೋಲನದ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಪ್ರಸ್ತಾಪಿಸಿದ್ದಾರೆಯೇ ಎಂದು ಕೆಲವು ದಿನಗಳ ಹಿಂದೆ ಕೃಷಿ ಕಾನೂನುಗಳು ಮತ್ತು ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಬಗ್ಗೆ ಸರ್ಕಾರದ ಬಳಿ ಯಾವುದೇ ದಾಖಲೆ ಇಲ್ಲ ಎಂದು ಹೇಳಿದ್ದರು.

ಒಂದು ವರ್ಷದ ರೈತರ ಪ್ರತಿಭಟನೆಯಲ್ಲಿ ಸುಮಾರು 700 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ ರಾಹುಲ್, “ನಾವು ಸ್ವಲ್ಪ ಹೋಂವರ್ಕ್ ಮಾಡಿದ್ದೇವೆ. ಪಂಜಾಬ್ ಸರಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಿದ 403 ಜನರ ಹೆಸರು ನಮ್ಮ ಬಳಿ ಇದೆ. 152 ಮಂದಿಗೆ ಉದ್ಯೋಗವನ್ನೂ ಒದಗಿಸಿದೆ. ನಮ್ಮಲ್ಲಿ ಮತ್ತೊಂದು ಪಟ್ಟಿ ಇದೆ. ಅಲ್ಲಿ ನಾವು ಇತರ ರಾಜ್ಯಗಳ 100 ಜನರ ಹೆಸರನ್ನು ಹೊಂದಿದ್ದೇವೆ. ನಂತರ ಮೂರನೇ ಪಟ್ಟಿಯು ಹೆಸರುಗಳು, ವಿಳಾಸಗಳು ಮತ್ತು ಫೋನ್ ಸಂಖ್ಯೆಗಳ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ಸರ್ಕಾರವು ಬಯಸಿದರೆ ಅದನ್ನು ಸುಲಭವಾಗಿ ಪರಿಶೀಲಿಸಬಹುದು ಎಂದು ಅವರು ಹೇಳಿದರು.