ತ್ಯಾಗಮಯಿ ರಾಮನ ಹೆಸರು ಬಳಸಿ ಅಧಿಕಾರಕ್ಕಾಗಿ ದೊಂಬಿ ನಡೆಸುವವರು ನೈಜ ರಾಮ ಭಕ್ತರೇ? : ಮಾಜಿ ಸ್ಪೀಕರ್ ರಮೇಶ್ ಕುಮಾರ್‌

0
169

ಸನ್ಮಾರ್ಗ ವಾರ್ತೆ

ಮಂಗಳೂರು: ಸಮಾಜದಲ್ಲಿ ಇಂದು ಧರ್ಮದ ತಿರುಳನ್ನು ಅರ್ಥ ಮಾಡಿಕೊಳ್ಳದವರು ಅದರ ಬಗ್ಗೆ ಮಾತನಾಡತೊಡಗಿದ್ದಾರೆ. ಸಮುದಾಯಗಳ ನಾಯಕರಂತೆ ಬಿಂಬಿಸಿ ಮೆರೆಯುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಅಯೋಧ್ಯೆಯ ದೊರೆ ಯಾಗಿ ಅಧಿಕಾರ ನಡೆಸುವ ಎಲ್ಲಾ ಅವಕಾಶಗಳನ್ನು ಬಿಟ್ಟು ತ್ಯಾಗಮಯಿ ಶ್ರೀರಾಮನನ್ನು ಇಂದು ಕೆಲವು ರಾಜಕಾರಣಿಗಳು ಅಧಿಕಾರಕ್ಕಾಗಿ ರಾಮನ ಹೆಸರು ಬಳಸಿ ದೊಂಬಿ ನಡೆಸುತ್ತಿರುವುದು ವಿಪರ್ಯಾಸ ಎಂದರು. ನಗರದ ಪುರಭವನದಲ್ಲಿ ನಡೆದ ‘ಯುನಿವೆಫ್ ಕರ್ನಾಟಕ’ದ ಪ್ರವಾದಿ ಮುಹಮ್ಮದ್ (ಸ) ರ ಸಂದೇಶ ಪ್ರಚಾರ ಅಭಿಯಾನ (ಅರಿಯಿರಿ ಮನುಕುಲದ ಪ್ರವಾದಿಯನ್ನು) ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು

ಪ್ರವಾದಿ ಎಂದೂ ಕೂಡ ಸರ್ವಾಧಿಕಾರವನ್ನು ಬಯಸಿರಲಿಲ್ಲ. ಅವರು ಸದಾ ಪ್ರಜೆಗಳ ಪ್ರಭುತ್ವಕ್ಕೆ ಆದ್ಯತೆ ನೀಡುತ್ತಿದ್ದರು. ನುಡಿದಂತೆ ನಡೆದ ವ್ಯಕ್ತಿತ್ವದ ಅವರು ಅದಕ್ಕಾಗಿ ತನ್ನ ಬದುಕನ್ನೇ ಮಾದರಿಯಾಗಿಸಿದವರು. ಅಂತಹ ಪ್ರವಾದಿಯ ಬಗ್ಗೆ, ಇಸ್ಲಾಮ್ ಧರ್ಮದ ಬಗ್ಗೆ ಏನನ್ನೂ ತಿಳಿಯದವರು ಮಾತನಾಡುವುದು ರಾಕ್ಷಸತನದ ಪರಮಾವಧಿ ಎಂದರು. ರಮೇಶ್ ಕುಮಾರ್ ಹೇಳಿದರು.

ಚುನಾವಣೆ ಹತ್ತಿರ ಬರುತ್ತಿದೆ. ಓಟಿನ ಡಬ್ಬ ತುಂಬುವ ರಾಜಕಾರಣಿಗಳು ಅಧಿಕಾರಕ್ಕಾಗಿ ಏನನ್ನೂ ಮಾಡಲು ಹಿಂಜರಿಯುವುದಿಲ್ಲ. ಮಂಗಳೂರಿನಲ್ಲಿ ಈ ರಾಜಕಾರಣಿಗಳಿಂದ ಇನ್ನೇನು ಕಾದಿದೆಯೋ ಗೊತ್ತಿಲ್ಲ. ಅವರೇನೋ ಒಳಗಿಂದೊಳಗೆ ವ್ಯಾಪಾರ ಆರಂಭಿಸತೊಡಗಿದ್ದಾರೆ. ಆದರೆ ಅದರ ಮರ್ಮಗಳನ್ನು ಅರಿಯದ ಜನಸಾಮಾನ್ಯರು ಹೊಡೆದಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ರಮೇಶ್ ಕುಮಾರ್ ಕರೆ ನೀಡಿದರು.

ಇಸ್ಲಾಮ್‌ನಲ್ಲಿ ಮೇಲು ಕೀಳು ಬೇಧವಿಲ್ಲದೆ ಎಲ್ಲರೂ ಸರಿಸಮಾನರು ಎಂದು ಪ್ರತಿಪಾದಿಸುತ್ತದೆ. ಮುಸ್ಲಿಮರು ಸಹೋದರತೆಗೆ ಆದ್ಯತೆ ನೀಡುತ್ತಾರೆ. ಕಷ್ಟದಲ್ಲಿ ಸಿಲುಕಿರುವವರಿಗೆ ನೊಂದವರಿಗೆ ಬಡ‌ ಅಶಕ್ತರಿಗೆ ಸದಾ ಸಹಾಯಹಸ್ತ ಚಾಚುತ್ತಾರೆ. ಅಪಘಾತ, ತುರ್ತು ಸಂದರ್ಭ ಸಹಾಯ ಮಾಡಲು ಧಾವಿಸುವ ಗುಣಸ್ವಭಾವ ಮುಸ್ಲಿಮರದ್ದಾಗಿದೆ. ಕೊರೋನ ಸಂದರ್ಭ ಮುಸ್ಲಿಂ ಸಮುದಾಯ ನೀಡಿದ ನೆರವನ್ನು ಮರೆಯಲು ಸಾಧ್ಯವಿಲ್ಲ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಫಾ ಪೀಟರ್ ಪೌಲ್ ಸಲ್ದಾನ ಸಂದರ್ಭೋಚಿತವಾಗಿ ಮಾತನಾಡಿದರು. ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪ್ರವಾದಿ ಮುಹಮ್ಮದ್(ಸ) ರವರ ಸಂದೇಶ ಪ್ರಚಾರ ಅಭಿಯಾನದ ಸಹ ಸಂಚಾಲಕರಾದ ಉಬೈದುಲ್ಲಾ ಬಂಟ್ವಾಳ, ಆಸಿಫ್ ಕುದ್ರೋಳಿ, ತ್ವಾಹಿಫ್ ಅಹ್ಮದ್ ಉಪಸ್ಥಿತರಿದ್ದರು. ಸೀರತ್ ಅಭಿಯಾನದ ಸಂಚಾಲಕ ಯು.ಕೆ. ಖಾಲಿದ್ ಸ್ವಾಗತಿಸಿದರು. ಅಝೀಝ್ ಕಿರಾಅತ್ ಪಠಿಸಿದರು. ಹುದೈಫ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.