ಕೇರಳದ ಪ್ರವಾಹದಲ್ಲಿ ತೇಲಿಬಂದ ವರ್ಷದ ಫೋಟೋ: ಇವರಾರೆಂದು ತಿಳಿದರೆ ನೀವು ಅಚ್ಚರಿಗೆ ಒಳಗಾಗುವಿರಿ

0
6345

ಸನ್ಮಾರ್ಗ ವಾರ್ತೆ

ಪ್ರವಾಹದ ಸಂದರ್ಭದಲ್ಲಿ ಕೇವಲ ಮನುಷ್ಯರಾಗಿ ಮಾತ್ರ ಮಾರ್ಪಡುವ ಜನರು, ಪ್ರವಾಹ ಇಳಿದ ಬಳಿಕ ಮತ್ತೆ ಪರಸ್ಪರ ಗಡಿಗೋಡೆಗಳನ್ನು ಎಬ್ಬಿಸಿ ವೈರಿಗಳಂತೆ ಯಾಕೆ ಬದುಕುತ್ತಾರೆ ಅನ್ನುವ ಪ್ರಶ್ನೆಗೆ ಸರ್ವಸಮ್ಮತ ಉತ್ತರ ಇಲ್ಲವೇ ಇಲ್ಲ. ಹುಡುಕಹೊರಟರೆ ತಲೆಗೊಂದರಂತೆ ಉತ್ತರ ಸಿಕ್ಕೀತು. ಇವು ಏನೇ ಇದ್ದರೂ, ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಇತ್ಯಾದಿ ಗುರುತುಗಳಿರುವ ನೀವೆಲ್ಲ ಮನುಷ್ಯರು ಮತ್ತು ಮನುಷ್ಯರಾಗಿಯೇ ಬದುಕಬೇಕಾದವರು ಎಂಬುದಾಗಿ ಪ್ರಕೃತಿ ವಿಕೋಪಗಳು ಮತ್ತೆ ಮತ್ತೆ ಸಾರುತ್ತಲೇ ಇವೆ. ಅದರ ಒಂದು ಸ್ಯಾ೦ಪಲ್ ಈ ಫೋಟೋ. ಸಬ್ರೀನಾ ಲೈ ಎಂಬ ಇಟಲಿಯ ವೈದ್ಯೆ ತನ್ನ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡ ಫೋಟೋ ಇದು. ಮಧ್ಯೆಶ್ಯ ಮತ್ತು ದಕ್ಷಿಣೇಶ್ಯಗಳಲ್ಲಿರುವ ಭಿನ್ನ ಸಂಸ್ಕೃತಿಗಳ ಬಗ್ಗೆ ವಿಶೇಷ ಆಸಕ್ತಿಯಿಂದ ಅಧ್ಯಯನ ನಡೆಸುತ್ತಿರುವ ಸಬ್ರೀನಾರಿಗೆ ಕೇರಳದ ಈ ಫೋಟೋ ಇಷ್ಟವಾಗಿದೆ. ಸಂಸ್ಕೃತಿಗಳ ಕೂಡಾವಳಿ ಅನ್ನುವಂತೆ ಅವರು ಇದನ್ನು ತನ್ನ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಏನೆಂದರೆ, ಈ ಫೋಟೋವನ್ನು ಹಂಚಿಕೊಳ್ಳುವಾಗ ಸಬ್ರೀನಾರಿಗೆ ಈ ಪೋಟೋದಲ್ಲಿರುವವರು ಯಾರು ಎಂದು ಗೊತ್ತಿರಲಿಲ್ಲ. ಅವರಿಗದು ಇಷ್ಟವಾಗಿತ್ತು.

ಪ್ರಕೃತಿ ಮುನಿದಾಗ ಮನುಷ್ಯರು ಹೇಗೆ ಒಂದಾಗುತ್ತಾರೆ ಅನ್ನುವುದನ್ನು ಅದ್ಭುತವಾಗಿ ಸಾರುವ ಈ ಫೋಟೋ ಇಂಥ ಅನೇಕ ಫೋಟೋಗಳಲ್ಲಿ ಒಂದು ಮಾತ್ರ. ಪ್ರವಾಹ, ನೆರೆ ಬಂದಾಗ ಮನುಷ್ಯ ಹೀಗೆ ಒಟ್ಟಾಗುತ್ತಾನೆ. ಪರಸ್ಪರ ಸಂತೈಸುತ್ತಾ ನೆರವಾಗುತ್ತಾ ಬದುಕುತ್ತಾನೆ. ಬಳಿಕ ನಿಧಾನವಾಗಿ ನಾನು- ನೀನು ಆಗಿ ಬದಲಾಗುತ್ತಾನೆ. ಮತ್ತೆ ಪ್ರಕೃತಿ ಮುನಿಯುತ್ತದೆ. ಆತ ಮತ್ತೆ ಪೂರ್ವಸ್ಥಿತಿಗೆ ಮರಳುತ್ತಾನೆ. ಬಹುಶಃ ಇದೊಂದು ಚಕ್ರವೇನೋ.

ಅಂದಹಾಗೆ, ಸಬ್ರೀನಾ ಹಂಚಿಕೊಂಡ ಈ ಫೋಟೋವನ್ನು ನೋಡಿದ ಅವರ ಫೇಸ್ ಬುಕ್ ಗೆಳೆಯರು ಆ ಮಹಿಳೆ ಮತ್ತು ಪುರುಷನ ಗುರುತು ಪತ್ತೆ ಹಚ್ಚಿ ಹಂಚಿಕೊಂಡಿದ್ದಾರೆ. ಮೈಪೂರಾ ಕೆಸರು ಮೆತ್ತಿಕೊಂಡ ಸ್ಥಿತಿಯಲ್ಲಿರುವ ವ್ಯಕ್ತಿಯ ಹೆಸರು ಸಾಜಿ ಫಝಿಲ್. ಇವರು ಕೇರಳದ ಅಲಪ್ಪುಯ ಜಿಲ್ಲೆಯ ಕಾಯಮಕುಲಮ್ ಎಂಬಲ್ಲಿರುವ ಮಸ್ಜಿದ್ದುರ್ರಹ್ಮ ಎಂಬ ಹೆಸರಿನ ಮಸೀದಿಯ ಇಮಾಮ್ (ಧರ್ಮಗುರು) ಆಗಿದ್ದರೆ, ಮಿನಿ ವೇಣುಗೋಪಾಲನ್ ನಾಯರ್ ಎಂಬ ಆ ಮಹಿಳೆಯು ವಿಮೆನ್ ಜಸ್ಟೀಸ್ ಮೂವ್ ಮೆಂಟ್ ನ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಮತ್ತು ವೆಲ್ಫೇರ್ ಪಾರ್ಟಿಯ ಆಲಪ್ಪುಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ನಿಜವಾಗಿ ಈ ಗುರುತುಗಳು ನಗಣ್ಯ. ಅವರು ಸಾರುತ್ತಿರುವ ಸಂದೇಶವೇ ಗಣ್ಯ.

https://m.facebook.com/story.php?story_fbid=2519722681404691&id=100001009511980