ಸಲ್ಮಾನ್ ಖಾನ್ ಕ್ಷಮೆ ಯಾಚಿಸಲಿ: ಬಿಷ್ನೋಯ್ ಗ್ಯಾಂಗ್ ನ ಜೀವ ಬೆದರಿಕೆಯ ನಡುವೆ ಬಿಜೆಪಿ ನಾಯಕನ ಹೇಳಿಕೆ

0
346

ಸನ್ಮಾರ್ಗ ವಾರ್ತೆ

ಕೃಷ್ಣ ಮೃಗವನ್ನು ಬೇಟೆಯಾಡಿರುವುದಕ್ಕಾಗಿ ಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ ಎಲ್ಲಾ ಸಮಸ್ಯೆಯೂ ಮುಗಿಯುತ್ತದೆ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಹರನಾಥ ಸಿಂಗ್ ಯಾದವ್ ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವುದಾಗಿ ಕುಖ್ಯಾತ ಬಿಷ್ನೋಯ್ ಗ್ಯಾಂಗ್ ಘೋಷಿಸಿದ್ದು ಈ ಹಿನ್ನೆಲೆಯಲ್ಲಿ ಈ ಸಲಹೆ ಬಂದಿದೆ.

ಮಹಾರಾಷ್ಟ್ರದ ಮಾಜಿ ಶಾಸಕ ಬಾಬಾ ಸಿದ್ದೀಕಿಯನ್ನು ಈ ಬಿಷ್ನೋಯ್ ಗ್ಯಾಂಗ್ ಹತ್ಯೆ ನಡೆಸಿದ ಬಳಿಕ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಗ್ಯಾಂಗ್ ಸಲ್ಮಾನ್ ಖಾನ್ ಗೂ ಜೀವ ಬೆದರಿಕೆಯನ್ನು ಹಾಕಿದೆ. ಲಾರೆನ್ಸ್ ಬಿಷ್ನೋಯ್ ಪ್ರತಿನಿಧಿಸುತ್ತಿರುವ ಸಮುದಾಯವು ಕೃಷ್ಣ ಮೃಗವನ್ನು ಆರಾಧಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕೃಷ್ಣ ಮೃಗವನ್ನು ಕೊಂದ ಆರೋಪ ಸಲ್ಮಾನ್ ಖಾನ್ ಮೇಲಿದ್ದು ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ.

ಈ ಪ್ರಕರಣವನ್ನು ಬಗೆಹರಿಸುವ ಸುಲಭ ಉಪಾಯ ಏನೆಂದರೆ ಸಲ್ಮಾನ್ ಖಾನ್ ಕ್ಷಮೆ ಯಾಚಿಸುವುದಾಗಿದೆ. ಕ್ಷಮೆ ಯಾಚಿಸುವುದರಿಂದ ಯಾರೂ ಚಿಕ್ಕವರಾಗುವುದಿಲ್ಲ ಮತ್ತು ಹೀಗೆ ಮಾಡುವುದರಿಂದ ಕ್ಷಮೆ ಯಾಚಿಸಿದವ ದೊಡ್ಡವರಾಗುತ್ತಾರೆ ಎಂದು ಹರನಾಥ ಸಿಂಗ್ ಯಾದವ್ ಹೇಳಿದ್ದಾರೆ.

1998 ಅಕ್ಟೋಬರ್ 2ರಂದು ರಾಜಸ್ಥಾನದ ಜೋಧ್ಪುರ್ ಗ್ರಾಮ ಒಂದರಲ್ಲಿ ಈ ವಿವಾದಿತ ಘಟನೆ ನಡೆದಿದೆ. ಹಮ್ ಸಾಥ್ ಸಾಥ್ ಹೈ ಎಂಬ ಸಿನಿಮಾದ ಶೂಟಿಂಗ್ ನ ಸಂದರ್ಭದಲ್ಲಿ ಈ ಕೃಷ್ಣ ಮೃಗ ಹತ್ಯಾ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಎರಡು ಕೃಷ್ಣ ಮೃಗವನ್ನು ಸಲ್ಮಾನ್ ಖಾನ್ ನೇತೃತ್ವದ ತಂಡ ಹತ್ಯೆ ಮಾಡಿದೆ ಎಂದು ಹೇಳಲಾಗುತ್ತಿದೆ. ಕೃಷ್ಣ ಮೃಗವನ್ನು ಬೇಟೆಯಾಡಿದ ತಂಡದಲ್ಲಿ ನಟಿಯರಾದ ತಬು,, ಸೊನಾಲಿ ಬೇಂದ್ರೆ, ನೀಲಂ ಕೊತ್ತಾರಿ ಇದ್ದರೆಂದು ಹೇಳಲಾಗುತ್ತಿದ್ದು ಅವರ ವಿರುದ್ಧ ಕೇಸು ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಗೆ ಐದು ವರ್ಷಗಳ ಕಠಿಣ ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿದ್ದರೂ ಜಾಮೀನು ಸಿಕ್ಕಿದೆ.

ಒಂದು ವೇಳೆ ಮಂದಿರಕ್ಕೆ ಬಂದು ಸಲ್ಮಾನ್ ಖಾನ್ ಕ್ಷಮೆ ಯಾಚಿಸಿದರೆ ಅವರ ಕ್ಷಮೆಯಾಚನೆಯನ್ನು ನಾವು ಪರಿಗಣಿಸುತ್ತೇವೆ ಎಂದು ಆಲ್ ಇಂಡಿಯಾ ಬಿಷ್ನೋಯ್ ಅಸೋಸಿಯೇಷನ್ ಅಧ್ಯಕ್ಷ ದೇವೇಂದ್ರ ಬುದಿಯ ಈ ಮೊದಲು ಹೇಳಿದ್ದರು.