ಸನ್ಮಾರ್ಗ ವಾರ್ತೆ
ಬೆಂಗಳೂರು, ಆಗಸ್ಟ್ 25, 2026: ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ವತಿಯಿಂದ ಆಯೋಜಿಸಲಾಗಿರುವ ರಾಜ್ಯವ್ಯಾಪಿ **“ಸೀರತ್ ಅಭಿಯಾನ 2026”**ಕ್ಕೆ ಇಂದು ಬೆಂಗಳೂರಿನಲ್ಲಿ ಅಧಿಕೃತ ಚಾಲನೆ ನೀಡಲಾಯಿತು. “ಪ್ರವಾದಿ ಮುಹಮ್ಮದ್(ಸ) – ಕ್ರಾಂತಿಯ ಜ್ಯೋತಿ” ಎಂಬ ಘೋಷವಾಕ್ಯದೊಂದಿಗೆ ಆಗಸ್ಟ್ 26ರಿಂದ ಸೆಪ್ಟೆಂಬರ್ 6ರವರೆಗೆ ರಾಜ್ಯಾದ್ಯಂತ ಈ ಅಭಿಯಾನ ನಡೆಯಲಿದೆ.
ಅಭಿಯಾನದ ಅಂಗವಾಗಿ ಇಂದು ಆಗಸ್ಟ್ 25ರಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ದಾರುಸ್ಸಲಾಂ ಕಟ್ಟಡದಲ್ಲಿರುವ BIFT ಹಾಲ್ನಲ್ಲಿ ಪತ್ರಿಕಾಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಪ್ರವಾದಿ ಮುಹಮ್ಮದ್(ಸ) ಅವರ ಜೀವನ, ಸಂದೇಶ, ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯ, ಸಮಾನತೆ, ಸಹೋದರತ್ವ ಹಾಗೂ ಶಾಂತಿಯ ಸಂದೇಶವನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದರು.
ಪ್ರವಾದಿ ಮುಹಮ್ಮದ್ (ಸ) ರವರ ಬದುಕಿನ ಸತ್ಯ ಸಂದೇಶ ಮತ್ತು ಕ್ರಾಂತಿಕಾರಿ ಮೌಲ್ಯಗಳನ್ನು ನಾಡಿನ ಸಮಸ್ತ ಜನತೆಗೆ ಪರಿಚಯಿಸುವುದು ಹಾಗೂ ವಿವಿಧ ಧರ್ಮ ಮತ್ತು ಸಮುದಾಯಗಳ ನಡುವೆ ಪರಸ್ಪರ ವಿಶ್ವಾಸ, ಸೌಹಾರ್ದತೆ ಹಾಗೂ ಭ್ರಾತೃತ್ವವನ್ನು ಬೆಳೆಸುವ ಮೂಲಕ ಸಮಾಜದಲ್ಲಿ ದಯೆ, ಕಾರುಣ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಬಿತ್ತಲು ಪ್ರೇರೇಪಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಸುಮಾರು 1400 ವರ್ಷಗಳ ಹಿಂದೆ ಅರೇಬಿಯಾದ ಮರುಭೂಮಿಯಲ್ಲಿ ಪ್ರವಾದಿ ಮುಹಮ್ಮದ್ (ಸ) ರು ಕ್ರಾಂತಿಯ ಜ್ಯೋತಿಯನ್ನು ಬೆಳಗಿದರು.
ಅವರು ಸೃಷ್ಟಿಕರ್ತನಾದ ದೇವನ ಅಂತಿಮ ಪ್ರವಾದಿ. ಅವರ ಕ್ರಾಂತಿಯು ಸರ್ಕಾರವನ್ನು ಸ್ಥಾಪಿಸುವುದಕ್ಕಿಂತ ಮುಂಚೆ ಹೃದಯಗಳನ್ನು, ಸಂಸ್ಥೆಗಳನ್ನು ಸ್ಥಾಪಿಸುವುದಕ್ಕಿಂತ ಮುಂಚೆ ವ್ಯಕ್ತಿತ್ವವನ್ನು, ಅಧಿಕಾರವನ್ನು ನಡೆಸುವುದಕ್ಕಿಂತ ಮುಂಚೆ ವಿಶ್ವಾಸವನ್ನು ಪರಿವರ್ತಿಸಿತು. ಈ ಕ್ರಾಂತಿಯು ಮಾನವ ಕುಲವನ್ನು ಅಜ್ಞಾನ, ಮೌಢ್ಯ, ಅನ್ಯಾಯ, ಶೋಷಣೆ, ಭಯ ಮತ್ತು ಹಸಿವಿನಿಂದ ಮುಕ್ತಗೊಳಿಸಿತು. 23 ವರ್ಷಗಳ ಹೃಸ್ವ ಸಮಯದಲ್ಲಿಯೇ ಅದು ಇಡೀ ಅರೇಬಿಯಾವನ್ನು ಬದಲಾಯಿಸಿತು. ಮಾತ್ರವಲ್ಲ, ಕೆಲವೇ ದಶಕಗಳಲ್ಲಿ ಅದು ಜಗತ್ತಿನಾದ್ಯಂತ ನಾಗರಿಕತೆಗಳ ಮೇಲೆ ಪ್ರಭಾವ ಬೀರಿತು.
ಮಾನವ ಕುಲವು ಅಸಮಾನತೆ, ಹಿಂಸೆ, ಅನೈತಿಕತೆ, ಶೋಷಣೆ, ದಬ್ಬಾಳಿಕೆ, ಸಂಘರ್ಷಗಳನ್ನು ಎದುರಿಸುತ್ತಿರುವಾಗ, ಪ್ರವಾದಿಯವರ(ಸ) ಜೀವನ ಮತ್ತು ಸಂದೇಶವು ಇಂದೂ ಪ್ರಸ್ತುತವಾಗಿದೆ. ಪ್ರವಾದಿ ಯವರು ನಡೆಸಿದ ಕ್ರಾಂತಿಯು ದ್ವೇಷ ಅಥವಾ ಸೇಡು ತೀರಿಸಿಕೊಳ್ಳುವುದರ ಮೇಲೆ ಆಧರಿಸಿರಲಿಲ್ಲ. ಅದು ಸತ್ಯ, ನ್ಯಾಯ, ಕರುಣೆ, ಘನತೆ ಹಾಗೂ ಏಕದೇವನ ಆರಾಧನೆಯ ಮೇಲೆ ಸ್ಥಾಪಿತವಾಗಿದೆ. ಅದು ಮಾನವನ ಅಂತರಂಗವನ್ನು ಪರಿವರ್ತಿಸಲು ಪ್ರಯತ್ನಿಸಿತು. ತನ್ಮೂಲಕ ಸಮಾಜವನ್ನು ಪರಿವರ್ತಿಸಲು ಸಾಧ್ಯವೆಂದು ಪ್ರವಾದಿಯವರು(ಸ) ಸಾಧಿಸಿ ತೋರಿಸಿದರು.
ಪ್ರವಾದಿ ಮುಹಮ್ಮದರ ಕ್ರಾಂತಿಯ ಅತಿ ದೊಡ್ಡ ಆಯಾಮವೆಂದರೆ ಮಾನವ ವಿಮೋಚನೆ. ಅವರು ಮಾನವರನ್ನು ಮಾನವರ ದಾಸ್ಯತನದಿಂದ ವಿಮೋಚನೆಗೊಳಿಸಿ, ಏಕೈಕನೂ ಸೃಷ್ಟಿಕರ್ತನೂ ಆದ ನೈಜ ದೇವನ ದಾಸ್ಯವನ್ನು ಸ್ವೀಕರಿಸುವಂತೆ ಮಾಡಿದರು. ಸಂಪತ್ತಿನ ಆಸೆಗಳಿಗೆ ಗುಲಾಮರಾಗಿದ್ದ ಜನರನ್ನು ಅದರಿಂದ ವಿಮೋಚಿಸಿ, ಮಾನವ ಜೀವನದ ಉದ್ದೇಶ, ಸ್ವನಿಯಂತ್ರಣ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸಿದರು.
ಪ್ರವಾದಿ ಮುಹಮ್ಮದರು ಜನಾಂಗೀಯ ದುರಹಂಕಾರವನ್ನು ತೊಡೆದು ಹಾಕಿ, ಸಹೋದರತೆಯ ಅತ್ಯುತ್ತಮ ಮಾದರಿಯನ್ನು ನಿರ್ಮಿಸಿದರು. ಗುಲಾಮರಾಗಿ, ಶೋಷಿತರಾಗಿ ಜೀವ ತಳೆದ ಜನರೂ ಪ್ರವಾದಿಯವರು ನಿರ್ಮಿಸಿದ ಸಮಾಜದಲ್ಲಿ ನಾಯಕರಾಗಿ ಹೊರ ಹೊಮ್ಮಿದರು. ಅವರು ನ್ಯಾಯದ ಆಧಾರದ ಮೇಲೆ ಆರ್ಥಿಕ ನೀತಿ ಸ್ಥಾಪಿಸಿದರು. ಅರ್ಥ ವ್ಯವಸ್ಥೆಗೆ ಕಂಟಕವಾದ ಬಡ್ಡಿಯನ್ನು ನಿಷೇಧಿಸಿದ್ದು ಮಾತ್ರವಲ್ಲ, ವಂಚನೆ, ಆರ್ಥಿಕ ಶೋಷಣೆ, ಅಕ್ರಮ ದಾಸ್ತಾನು, ಭ್ರಷ್ಟಾಚಾರ, ಸಂಪತ್ತು ಕೆಲವೇ ಜನರ ಕೈಯಲ್ಲಿರುವುದನ್ನು ಅವರು ನಿಷೇಧಿಸಿದರು. ಪ್ರಾಮಾಣಿಕ ವ್ಯಾಪಾರ, ದಾನ, ನ್ಯಾಯಯುತ ವೇತನ, ಬಡವರ ಮತ್ತು ಹಿಂದುಳಿದವರಿಗೆ ವಿಶೇಷ ಕಾಳಜಿ ಇವೆಲ್ಲವೂ ಅವರ ಶಿಕ್ಷಣದ ಭಾಗವಾಗಿತ್ತು.
ಅಭಿಯಾನದ ಪ್ರಯುಕ್ತ ನಾಡಿನ ಪ್ರಮುಖ ಲೇಖಕರಾದ ಯೋಗೇಶ್ ಮಾಸ್ಟರ್ ಬರೆದಿರುವ “ಮಾನವ ಮನಸ್ಸಿನ ಕೃಷಿಕ ಮನದೊಡೆಯ ಮುಹಮ್ಮದ್ (ಸ)” ಹಾಗೂ ಎ. ಎಸ್. ಪುತ್ತಿಗೆಯವರು ಬರೆದಿರುವ “ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ)” ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು.
ಈ 11 ದಿನಗಳ ಅಭಿಯಾನದ ಭಾಗವಾಗಿ ಕರ್ನಾಟಕದಾದ್ಯಂತ ಸಂವಾದಗಳು, ಉಪನ್ಯಾಸಗಳು, ವಿಚಾರಗೋಷ್ಠಿಗಳು ಮತ್ತು ಸಾರ್ವಜನಿಕ ಸಭೆಗಳು ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಅಭಿಯಾನವನ್ನು ಯಶಸ್ವಿಗೊಳಿಸುವ ಸಲುವಾಗಿ ತಾವೆಲ್ಲರೂ ಸಹಕರಿಸಬೇಕೆಂದು ತಮ್ಮಲ್ಲಿ ಪ್ರೀತಿಪೂರ್ವಕವಾಗಿ ವಿನಂತಿಸುತ್ತೇವೆ.
ಡಾ. ಮಹಮ್ಮದ್ ಸಾದ್ ಬೆಳ್ಗಾಮಿ (ರಾಜ್ಯಾಧ್ಯಕ್ಷರು, ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ)
ಯೋಗೇಶ್ ಮಾಸ್ಟರ್ (ಖ್ಯಾತ ಲೇಖಕರು, ಬೆಂಗಳೂರು)
ಜನಾಬ್ ಮಹಮ್ಮದ್ ಕುಂಞಿ (ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ)
ಜನಾಬ್ ಲಬೀದ್ ಶಾಫಿ (ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ)
ಜನಾಬ್ ಯೂಸುಫ್ ಕನ್ನಿ (ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ) ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












