ಸನ್ಮಾರ್ಗ ವಾರ್ತೆ
ಭಯೋತ್ಪಾದಕದೊಂದಿಗೆ ಹೋರಾಡಿ ವೀರ ಹುತಾತ್ಮತೆಯನ್ನು ಪಡೆದ ಮುದಸ್ಸೀರ್ ಅಹ್ಮದ್ ಶೇಕ್ ಎಂಬ ಕಾನ್ಸ್ಟೇಬಲ್ ರ ತಾಯಿಯನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ಜಮ್ಮು ಕಾಶ್ಮೀರದ ಪೊಲೀಸರು ಹೇಳಿದ್ದಾರೆ. ಸುಳ್ಳು ಸುದ್ದಿಯನ್ನು ಹಂಚುವುದರಿಂದ ದೂರ ನಿಲ್ಲಬೇಕು ಎಂದು ಬಾರಮುಲ್ಲಾ ಪೋಲೀಸರು ಮಾಧ್ಯಮಗಳಿಗೆ ಸೂಚನೆ ನೀಡಿದ್ದಾರೆ.
ಆದರೆ ಗಡೀಪಾರುಗೊಳ್ಳಬೇಕಾದ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲು ತನ್ನ ತಾಯಿಯ ಹೆಸರು ಇತ್ತು ಮತ್ತು ಈಗ ಆ ಹೆಸರನ್ನು ಅದರಿಂದ ತೆರವುಗೊಳಿಸಲಾಗಿದೆ ಎಂಬುದಾಗಿ ತಿಳಿಸಲಾಗಿದೆ ಎಂದು ಮುದಸ್ಸಿರ್ ಅಹಮದ್ ರ ಸಹೋದರ ನಾಸಿರ್ ಮಕ್ ಸೂದ್ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಈ ದೇಶಕ್ಕಾಗಿ ಪರಮ ತ್ಯಾಗವನ್ನು ನನ್ನ ಸಹೋದರ ಮಾಡಿದ್ದಾನೆ. ಹೀಗಿರುವಾಗ ನನ್ನ ತಾಯಿಯೊಂದಿಗೆ ಇಲ್ಲಿಂದ ಹೊರಟು ಹೋಗು ಎಂದು ಹೇಗೆ ಹೇಳುವಿರಿ? ನಾವಿರುವ ಪ್ರದೇಶದ ಪೊಲೀಸ್ ಠಾಣೆಯ ಆಫೀಸರ್ ನಮ್ಮ ಮನೆಗೆ ಬಂದು ಗಡೀಪಾರುಗೊಳ್ಳಬೇಕಾದ ವ್ಯಕ್ತಿಗಳ ಪಟ್ಟಿಯಲ್ಲಿ ನನ್ನ ತಾಯಿಯ ಹೆಸರಿದೆ ಎಂದು ತಿಳಿಸಿದರು. ಸಮಯಗಳ ಬಳಿಕ ತಾಯಿಯ ಗಡೀಪಾರು ಕ್ರಮವನ್ನು ಸ್ಥಗಿತಗೊಳಿಸಲಾಗಿದೆ ಅನ್ನುವ ಮಾಹಿತಿ ಸಿಕ್ಕಿತು ಎಂದು ನಾಸಿರ್ ಮಕ್ಸೂದ್ ಹೇಳಿದ್ದಾರೆ.
2022 ರಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಮುದಸ್ಸಿರ್ ಅಹಮದ್ ಷಾ ಅವರಿಗೆ ಈ ದೇಶ ಶೌರ್ಯ ಚಕ್ರವನ್ನು ನೀಡಿ ಗೌರವಿಸಿತ್ತು. ಇಂಥ ವ್ಯಕ್ತಿಯ ತಾಯಿಯನ್ನು ಪಾಕಿಸ್ತಾನಕ್ಕೆ ಗಡಿಪಾರು ಗೊಳ್ಳುವ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಪಟ್ಟಿ ಮಾಡಲಾದ ಒಟ್ಟು 60 ಮಂದಿಯಲ್ಲಿ ಈ ತಾಯಿಯ ಹೆಸರು ಇತ್ತು ಎಂದು ಮಕ್ ಸೂದ್ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಿಂದ ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ಈ ಶಮೀಮಾ ಅಕ್ತರ್ ಎಂಬ ತಾಯಿ ಭಾರತಕ್ಕೆ ಬಂದಿದ್ದಾರೆ. ಈಗ ಅವರಿಗೆ 65 ವರ್ಷ. ಕಳೆದ 45 ವರ್ಷಗಳಿಂದ ಅವರು ಭಾರತದಲ್ಲಿದ್ದಾರೆ. ಶಮೀಮಾ ಅವರನ್ನು ಭಾರತದಿಂದ ಗಡಿಪಾರು ಮಾಡಬಾರದೆಂದು ಪ್ರಧಾನಿ ಮತ್ತು ಗೃಹ ಸಚಿವರಲ್ಲಿ ಸ್ಥಳೀಯರು ಮನವಿ ಮಾಡಿದ್ದರು. ಅವರು ಪಾಕ್ ಆಕ್ರಮಿತ ಕಾಶ್ಮೀರದವರು. ಆ ಕಾಶ್ಮೀರ ನಮ್ಮದಾಗಿದೆ. ಪಾಕಿಸ್ತಾನೀಯರನ್ನು ಮಾತ್ರ ಗಡಿಪಾರು ಮಾಡಿ ಎಂದು ಈ ತಾಯಿಯ ಸಹೋದರ ಮೊಹಮ್ಮದ್ ಯೂನುಸ್ ವಿನಂತಿಸಿದ್ದರು.
ತನ್ನ ಮಗನ ಶೌರ್ಯ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರುಮು ಅವರಿಂದ ಈ ತಾಯಿ ಪಡೆದುಕೊಂಡಿದ್ದರು. ಇವರ ಗಂಡ ನಿವೃತ್ತ ಪೊಲೀಸ್ ಆಫೀಸರ್ ಆಗಿದ್ದಾರೆ.












