ಕಾಂಗ್ರೆಸ್ ಇಲ್ಲದೆ ವಿರೋಧ ಪಕ್ಷಗಳ ಮೈತ್ರಿಕೂಟ ರಚನೆ ಅಸಾಧ್ಯ: ರಾಹುಲ್ ಭೇಟಿಯ ನಂತರ ಸಂಜಯ್ ರಾವುತ್ ಹೇಳಿಕೆ

0
236

ಸನ್ಮಾರ್ಗ ವಾರ್ತೆ

ಮುಂಬೈ: ಕಾಂಗ್ರೆಸ್​ ಅನ್ನು ಬಿಟ್ಟು ವಿರೋಧ ಪಕ್ಷಗಳ ಮೈತ್ರಿಕೂಟ ರಚನೆ ಮಾಡುವುದು ಅಸಾಧ್ಯವಾದುದು ಎಂದು ಶಿವಸೇನೆಯ ಸಂಸದ ಸಂಜಯ್ ರಾವುತ್ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ನಂತರ ಹೇಳಿಕೆ ನೀಡಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿಕೂಟ ರಚನೆ ಬಗ್ಗೆ ಶಿವಸೇನೆಗೆ ಆಸಕ್ತಿಯಿದೆ. ಈ ಮೈತ್ರಿಕೂಟದ ಮುಖ ಯಾರಾಗಿರಬೇಕು ಎನ್ನುವುದನ್ನು ಚರ್ಚೆಯ ನಂತರ ನಿರ್ಧರಿಸಬೇಕು. ರಾಹುಲ್ ಗಾಂಧಿ ಅವರು ಶೀಘ್ರ ಮುಂಬೈಗೆ ಬರಲಿದ್ದಾರೆ. ದೇಶದಲ್ಲಿ ಒಂದೇ ಒಂದು ವಿರೋಧ ಪಕ್ಷಗಳ ಮೈತ್ರಿಕೂಟ ಇರಬೇಕು ಎಂದರು.

ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದೆ. ಮೊದಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಚರ್ಚೆಯ ವಿವರಗಳನ್ನು ತಿಳಿಸುತ್ತೇನೆ. ಅದಾದ ನಂತರ ಎಲ್ಲರಿಗೂ ಮಾಹಿತಿ ನೀಡುತ್ತೇನೆ ಎಂದರು.

ತೃಣಮೂಲ ಕಾಂಗ್ರೆಸ್​ನ ನಾಯಕಿ ಮಮತಾ ಬ್ಯಾನರ್ಜಿ ಅವರು ಎನ್​ಸಿಪಿ ನಾಯಕ ಶರದ್​ ಪವಾರ್ ಅವರನ್ನು ಕೆಲದಿನಗಳ ಹಿಂದೆ ಮುಂಬೈನಲ್ಲಿ ಭೇಟಿಯಾಗಿ ಚರ್ಚಿಸಿದ್ದರು. ಭಾರತದಲ್ಲಿ ಯುಪಿಎ ಎಂಬುದು ಉಳಿದಿಲ್ಲ ಎಂಬ ಅವರ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಕಾಂಗ್ರೆಸ್​ ಪಕ್ಷವನ್ನು ದೂರ ಇರಿಸಿಯೇ ವಿರೋಧ ಪಕ್ಷಗಳ ಮೈತ್ರಿಕೂಟ ರಚಿಸುವ ಬಗ್ಗೆ ಮಮತಾ ಬ್ಯಾನರ್ಜಿ ಈ ವೇಳೆ ಸುಳಿವು ನೀಡಿದ್ದರು.