1000 ಕಿಲೋಮೀಟರ್ ಗಿಂತ ಅಧಿಕ ದೂರದಿಂದ ಬಂದು ತಾಯಿಯನ್ನು ಕರೆದುಕೊಂಡು ಹೋದ ಮಗ
ಕಳೆದ ನಾಲ್ಕು ವರ್ಷಗಳಿಂದ ಮನೆ ತೊರೆದು ಬೀದಿ ಬೀದಿಯಲ್ಲಿ ಅಲೆಯುತ್ತಿದ್ದ ವೃದ್ಧ ಮಹಿಳೆಯೋರ್ವಳನ್ನು ಒಂದು ವರ್ಷದಿಂದ ಪೋಷಿಸಿ ಆಕೆಯ ವಿಳಾಸವನ್ನು ಪತ್ತೆಹಚ್ಚಿ ಮನೆಯವರಿಗೆ ಒಪ್ಪಿಸಿದ ಧನ್ಯತೆಯ ಕ್ಷಣಕ್ಕೆ ಸಿದ್ದಾಪುರದ ಪುನೀತ್ ರಾಜಕುಮಾರ್ ಆಶ್ರಯಧಾಮ, ಅನಾಥಾಶ್ರಮದ ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ಪಾತ್ರವಾದರೆ; ಕಳೆದ ನಾಲ್ಕು ವರ್ಷಗಳಿಂದ ತಾಯಿಗಾಗಿ ಹಂಬಲಿಸುತ್ತಿದ್ದ ಮಗನಿಗೆ ತಾಯಿ ಮರಳಿ ಸಿಕ್ಕ ಸಂತಸ ಕಣ್ಣೀರಾಗಿ ಹರಿದ ಸುಮಧುರ ಸಂದರ್ಭಕ್ಕೆ ಸಾಕ್ಷಿಯಾಯಿತು.
ಕಳೆದ ವರ್ಷ ಜೋಯಿಡಾ ತಾಲೂಕಿನ ಗುಂದದ ಕಾಡಿನಲ್ಲಿ ಅನಾಥ ಸ್ಥಿತಿಯಲ್ಲಿ ವೃದ್ದ ಮಹಿಳೆಯೊಬ್ಬರು ಇರುವ ಬಗ್ಗೆ ಸ್ಥಳೀಯ ಪತ್ರಕರ್ತರಾದ ಗಿರೀಶ್ ಪಾಟೀಲ್ ಹಾಗೂ ಗುಂದದ ಗಿರೀಶ್ ಬಾಗ್ವತ್ ರವರು ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾಗಿರುವ ನಾಗರಾಜ ನಾಯ್ಕ ರವರಿಗೆ ಮಾಹಿತಿ ನೀಡಿದ್ದರು. ಹಾಗೂ ಆಕೆಯನ್ನು ಜೊಯಿಡಾ ಸರ್ಕಾರಿ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದರು.
ನಂತರ ಜೋಯಿಡಾ ಪೊಲೀಸ್ ಠಾಣೆಯ ಪಿಎಸ್ಐ ರವರಾಗಿದ್ದ ಲಕ್ಷ್ಮಣ ಪೂಜಾರಿ ರವರು ನಾಗರಾಜ ನಾಯ್ಕರಲ್ಲಿ ಈ ಅನಾಥ ವೃದ್ಧ ಮಹಿಳೆಯನ್ನು ಆಶ್ರಮಕ್ಕೆ ಸೇರಿಸಿಕೊಳ್ಳುವಂತೆ ಕೋರಿಕೊಂಡಿದ್ದರು. ತಕ್ಷಣ ನಾಗರಾಜ ನಾಯ್ಕರು ಆಶ್ರಮದ ಮೇಲ್ವಿಚಾರಕಿ ಮಮತಾ ನಾಯ್ಕರ ಜೊತೆ ಸೇರಿ ಜೊಯಿಡಾಕ್ಕೆ ಹೋಗಿ ಪೇಚಿಯಮ್ಮ ಎನ್ನುವ ವ್ರದ್ದ ಮಹಿಳೆಯನ್ನು ಅನಾಥಾಶ್ರಮಕ್ಕೆ ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ರಾಮನಗರ ಪೊಲೀಸ್ ಠಾಣೆಯ ಪಿಎಸ್ಐ ಆಗಿದ್ದ ಕಿರಣ್ ಪಾಟೀಲ್ ರವರು ಸಹಕರಿಸಿದ್ದರು.
ಅನಾರೋಗ್ಯ ಪೀಡಿತರಾಗಿದ್ದ ವೃದ್ಧ ಮಹಿಳೆಯನ್ನು ಅನೇಕ ಬಾರಿ ಸಿದ್ದಾಪುರ ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಅಸ್ತಮಾ ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿರುವ ವ್ರದ್ದ ಮಹಿಳೆ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಆಶ್ರಮಕ್ಕೆ ಭೇಟಿ ನೀಡಿದ್ದ ತಮಿಳುನಾಡು ಮೂಲದ ಸಿದ್ದಾಪುರದಲ್ಲಿ ಉದ್ಯಮ ನಡೆಸುತ್ತಿರುವ ಸಣ್ಮುಗ ವೇಲನ್, ಹಾಗೂ ಇವರ ಪತ್ನಿಯವರಾದ ಕವಿತಾರವರಿಗೆ ಈ ಪೇಚಿಯಮ್ಮ ಎನ್ನುವ ಮಹಿಳೆಯ ವಿಳಾಸವನ್ನು ಹುಡುಕಿಕೊಡಲು ನಾಗರಾಜ ನಾಯ್ಕರವರು ಮನವಿ ಮಾಡಿಕೊಂಡಿದ್ದರು. ಇವರು ತಕ್ಷಣ ಪೇಚಿಯಮ್ಮಳ ಫೋಟೋವನ್ನು ಹಾಗೂ ಮಾಹಿತಿಯನ್ನು ತಮ್ಮ ಪರಿಚಯದ ತಮಿಳುನಾಡಿನ ರಾಮನಾಥಪುರಮ್ ನ ಪಿಎಸ್ಐ ಆಸೈ ತಂಬಿ ರವರಿಗೆ ನೀಡಿದ್ದರು. ಅಲ್ಲಿ ಪರಿಶೀಲಿಸಿದ ರಾಮನಾಥಪುರಮ್ ಪಿಎಸ್ಐ ಆಸೈ ತಂಬಿ ರವರು ಪೇಚಿಯಮ್ಮಳ ಕುಟುಂಬವನ್ನು ಕಂಡುಹಿಡಿದಿದ್ದು, ತಕ್ಷಣ ಪೇಚಿಯಮ್ಮಾಳ ಮಗ ಮುನಿಸ್ವಾಮಿ ಹಾಗೂ ಪೇಚಿಯಮ್ಮಳ ತಂಗಿ ಜಯಲಕ್ಷ್ಮಿ ಬಾಡಿಗೆ ಕಾರಿನಲ್ಲಿ ಸಿದ್ದಾಪುರಕ್ಕೆ ಬಂದು ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಪೇಚಿಯಮ್ಮಳನ್ನು ಕರೆದುಕೊಂಡು ಹೋಗಿರುತ್ತಾರೆ.
ಈ ಸಂದರ್ಭದಲ್ಲಿ ಪೇಚಿಯಮ್ಮಳ ಮಗ ಹಾಗೂ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದು ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕರನ್ನು ಹಾಗೂ ಮಮತಾ ನಾಯ್ಕರನ್ನು ಅಭಿನಂದಿಸಿದ್ದಾರೆ. ಪೇಚಿಯಮ್ಮಾಳನ್ನು ಅವಳ ಕುಟುಂಬಕ್ಕೆ ಸೇರಿಸುವ ಯಶಸ್ವಿ ಕಾರ್ಯಚರಣೆಯಲ್ಲಿ ಭಾಗಿಯಾದ ಎಲ್ಲರಿಗೂ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕರವರು ಧನ್ಯವಾದಗಳನ್ನು ತಿಳಿಸಿದ್ದಾರೆ. ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕರ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಗನ ಸಂತಸಕ್ಕೆ ಪಾರವೇ ಇರಲಿಲ್ಲ
ಕಳೆದ ನಾಲ್ಕು ವರ್ಷಗಳಿಂದ ಮನೆಬಿಟ್ಟು ಕಾಣೆಯಾಗಿದ್ದ ತಾಯಿ ಸಿಕ್ಕಿದ್ದಕ್ಕೆ ಮಗ ಮುನಿಸ್ವಾಮಿ ಸಂತೋಷಕ್ಕೆ ಪಾರವೇ ಇರಲಿಲ್ಲ ತಾಯಿ ಕಳೆದು ಹೋದ ದಿನದಿಂದ ಹುಡುಕಿ ಹುಡುಕಿ ಸುಸ್ತಾಗಿ ಇನ್ನೇನು ಸಿಗುವುದಿಲ್ಲ ಎಂದು ನಿರಾಸೆ ರಾಗಿದ್ದ ಸಮಯದಲ್ಲಿ ತಾಯಿ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ. ಇನ್ನು ಮುಂದೆ ನಮ್ಮ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎನ್ನುತ್ತಾರೆ ಮುನಿಸ್ವಾಮಿ. ಅಕ್ಕ ಮನೆ ಬಿಟ್ಟು ನಾಲ್ಕು ವರ್ಷದಿಂದ ಎಲ್ಲಾ ಕಡೆ ಹುಡುಕಿ ಅವರಿವರ ಬಳಿ ಕೇಳಿ ಸೋತು ಹೋಗಿದ್ದೆವು. ಎಲ್ಲಾದರೂ ಅನಾಥ ಶವ ಸಿಕ್ಕ ಸುದ್ದಿ ಕೇಳಿದಾಗೆಲ್ಲಾ ಓಡಿ ಹೋಗಿ ನೋಡುತ್ತಿದ್ದವು. ಆದರೀಗ ನಮ್ಮ ಅಕ್ಕ ಸಿಕ್ಕಿದ್ದಾಳೆ. ನಂಬಲಾಗುತ್ತಿಲ್ಲಾ. ಕಳೆದ ಒಂದು ವರ್ಷದಿಂದ ಆಕೆಯನ್ನು ಸಾಕಿ, ಚಿಕಿತ್ಸೆ ನೀಡಿ, ಆರೈಕೆ ಮಾಡಿ ನಮಗೆ ಒಪ್ಪಿಸಿದ ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ರವರಿಗೆ ಹಾಗೂ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಪೇಚಯಮ್ಮನ ತಂಗಿ ಜಯಲಕ್ಷ್ಮಿ ತಿಳಿಸಿದರು.













