ಒಂದುಕಡೆ, ಗಣ್ಯರು ಸಾಂತ್ವನ ಹೇಳುತ್ತಿದ್ದಾರೆ, ಇನ್ನೊಂದೆಡೆ, ಆತ್ಮಹತ್ಯೆಯ ಕುರಿತೇ ಅನುಮಾನ: ಸಿದ್ಧಾರ್ಥ್ ಸಾವಿನ ಹಿಂದೆ ಬೇರೇನೋ ಇದೆಯೇ? ಚಾಲಕ ಕೊಟ್ಟ ಟ್ವಿಸ್ಟ್

0
1041

ಮಂಗಳೂರು: ಕಾಫಿ ಡೇ ಮಾಲಕ ಸಿದ್ಧಾರ್ಥ್ ಸಾವಿಗೀಡಾಗಿ ನಾಲ್ಕು ದಿನಗಳಾದರೂ ಅವರ ಕುರಿತಾದ ಚರ್ಚೆ, ಮಾತುಕತೆ ಈಗಲೂ ಭರ್ಜರಿಯಾಗಿಯೇ ಇದೆ. ಒಂದುಕಡೆ, ಸಿದ್ಧಾರ್ಥ್ ಅವರ ಮನೆಗೆ ವಿವಿಧ ಗಣ್ಯರು ಭೇಟಿ ನೀಡಿ ಸಾಂತ್ವನ ನೀಡುತ್ತಿದ್ದರೆ, ಇನ್ನೊಂದು ಕಡೆ, ಅವರ ಅಭಿಮಾನಿ ಯುವಕರು ಕೆಫೆ ಕಾಫಿ ಡೇಯ ಷೇರು ಖರೀದಿಸುವಂತೆ ವಿನೂತನ ರೀತಿಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. CCD ಯ ಷೇರು ಮಾರುಕಟ್ಟೆಯಲ್ಲಿ ಷೇರು ಮೌಲ್ಯ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಷೇರು ಖರೀದಿಸುವಂತೆ `ಟೀಮ್ ನಮ್ಮುಡುಗ್ರು’ ಹೆಸರಿನ ಗುಂಪು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ನಡೆಸುತ್ತಿದೆ. ಅದೇವೇಳೆ,

ಸಿದ್ಧಾರ್ಥ್ ಅವರ ಮನೆಗೆ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಇಂದು ಭೇಟಿ ನೀಡಿದರಲ್ಲದೆ, ಸಿದ್ದಾರ್ಥ್ ತಾಯಿ ವಸಂತಿ ಹೆಗ್ಡೆ ಹಾಗೂ ಪತ್ನಿ ಮಾಳವಿಕಾ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ಎಲ್ಲ ಸಹಜ ಬೆಳವಣಿಗೆಗಳು ಒಂದುಕಡೆ ನಡೆಯುತ್ತಿರುವಾಗಲೇ, ಸಿದ್ಧಾರ್ಥ್ ಸಾವಿನ ಹಿಂದೆ ನಿಗೂಢತೆಯಿದೆಯೇ ಅನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆಯೇ, ಅವರು ಯಾರೋ ಹೆಣೆದ ಬಲೆಯೊಳಗೆ ನೇತ್ರಾವತಿ ಸೇತುವೆಯಲ್ಲಿ ಬಿದ್ದರೆ ಎಂಬ ಪ್ರಶ್ನೆಗಳಿಗೂ ಆ ದಿನದ ಒಟ್ಟು ಲೆಕ್ಕಾಚಾರಗಳು ಅವಕಾಶ ಮಾಡಿಕೊಟ್ಟಿವೆ. ಈ ಬಗ್ಗೆ ಪೊಲೀಸರು ಚುರುಕಾಗಿದ್ದಾರೆ ಮತ್ತು ಅವರನ್ನೂ ಸಂಶಯದ ಶೂಲ ಕಾಡುತ್ತಿದೆಯೆಂದು ಹೇಳಲಾಗುತ್ತಿದೆ.

ಆದ್ದರಿಂದ, ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿ ನಾಲ್ಕು ತಂಡಗಳನ್ನು ರಚಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎನ್ನಲಾಗುತ್ತಿದ್ದು, ಈ ಎಲ್ಲ ಬೆಳವಣಿಗೆಗೆ ಸಿದ್ಧಾರ್ಥ್ ಚಾಲಕನ ಹೇಳಿಕೆ ಮತ್ತು ಸಿಸಿ ಟಿವಿ ಫೂಟೇಜ್ ಗಳು ಕಾರಣವಾಗಿವೆ ಎಂಬ ವರದಿಯಿದೆ.

ಚಾಲಕ ಬಸವರಾಜ್ ನ ಪ್ರಕಾರ, ಸೋಮವಾರ ಸಂಜೆ 7 ಗಂಟೆಗೆ ನೇತ್ರಾವತಿ ಸೇತುವೆಯ ಬಳಿ ಅವರು ತಲುಪಿದ್ದಾರೆ. ಅವರನ್ನು ಮುಂದೆ ಹೋಗುವಂತೆ ತಿಳಿಸಿ ಸಿದ್ಧಾರ್ಥ್ ಅವರು ನೇತ್ರಾವತಿ ಸೇತುವೆಯಲ್ಲೇ ಇಳಿದುಕೊಂಡಿದ್ದಾರೆ. ಆದರೆ ಬ್ರಹ್ಮರಕೂಟ್ಲು ಟೋಲ್ ಗೇಟನ್ನು ಅವರಿದ್ದ ಕಾರು ಅಂದು ಸಂಜೆ 5.28ಕ್ಕೆ ದಾಟಿರುವುದಾಗಿ ಸಿಸಿ ಟಿವಿ ಕ್ಯಾಮರಾ ಫೊಟೇಜ್ ಹೇಳುತ್ತಿದೆ.

ಬ್ರಹ್ಮರಕೂಟ್ಲು ಟೋಲ್ ಗೇಟ್‍ನಿಂದ ನೇತ್ರಾವತಿ ಸೇತುವೆಗೆ ಬರಲು ಸುಮಾರು 2೦ ಕಿಲೋಮೀಟರ್ ಅಂತರವಷ್ಟೇ ಇರುವುದರಿಂದ ಮತ್ತು ಇದು ದ್ವಿಮುಖ ರಸ್ತೆಯಾಗಿದ್ದು ಮಂಗಳೂರಿನ ತನಕ ಅತ್ಯಂತ ಸರಾಗವಾಗಿ ಬರಬಹುದಾದ್ದರಿಂದ ಎಷ್ಟು ಸಾವಧಾನವಾಗಿ ಬಂದರೂ 35-45 ನಿಮಿಷದಲ್ಲಿ ತಲುಪಬಹುದಾಗಿದ್ದು, ಆದರೆ, ಬಸವರಾಜ್ ನ ಕಾರು ಈ ದೂರವನ್ನು ತಲುಪಲು ಒಂದೂವರೆ ಗಂಟೆಯಷ್ಟು ಅವಧಿಯನ್ನು ಯಾಕೆ ತೆಗೆದುಕೊಂಡಿತು ಅನ್ನುವ ಅನುಮಾನ ವ್ಯಕ್ತವಾಗಿದೆ.