ಸನ್ಮಾರ್ಗ ಸಂಪಾದಕೀಯ
ದ್ವೇಷ ರಾಜಕಾರಣವು ಸಮಾಜದ ತಳಭಾಗದಲ್ಲಿರುವ ಬಡವರು ಮತ್ತು ದುರ್ಬಲರನ್ನು ಹೇಗೆ ಭ್ರಮೆಯಲ್ಲಿ ಕೆಡವಿ ಪ್ರಪಾತಕ್ಕೆ ತಳ್ಳುತ್ತದೆ ಮತ್ತು ದ್ವೇಷ ಭಾಷಣ ಮಾಡುವ ರಾಜಕಾರಣಿ ಹೇಗೆ ತಮ್ಮ ಮಕ್ಕಳು ಮತ್ತು ಕುಟುಂಬವನ್ನು ಈ ಪ್ರಪಾತಕ್ಕೆ ಬೀಳದಂತೆ ಜಾಗ್ರತೆ ವಹಿಸುತ್ತಾರೆ ಅನ್ನುವುದಕ್ಕೆ ಬಿಜೆಪಿ ಮುಖಂಡ ಅನಂತ ಕುಮಾರ್ ಹೆಗಡೆ ಅವರ ಪ್ರಕರಣ ಮತ್ತೊಮ್ಮೆ ಸಾಕ್ಷ್ಯವನ್ನು ಒದಗಿಸಿದೆ.
‘ನನ್ನ ಮಗ ವಿದೇಶದಲ್ಲಿ ಅಧ್ಯಯನ ನಡೆಸುತ್ತಿದ್ದು, ಆತನ ಮೇಲಿರುವ ಎಫ್ಐಆರ್ ಅನ್ನು ರದ್ದುಗೊಳಿಸಬೇಕು..’ ಎಂದು ವಾರದ ಹಿಂದೆ ಅವರು ನ್ಯಾಯಾಲಯದಲ್ಲಿ ಅರಿಕೆ ಮಾಡಿಕೊಂಡಿದ್ದರು. ‘ಈ ಎಫ್ಐಆರ್ನಿಂದಾಗಿ ಮಗನ ವಿದೇಶಿ ಕಲಿಕೆಗೆ ತೊಂದರೆಯಾಗುತ್ತಿದೆ..’ ಎಂದು ಕಾರಣವನ್ನು ನೀಡಿದ್ದರು.
ತುಮಕೂರು ಜಿಲ್ಲೆಯ ಹಳೇ ನಿಜಗಲ್ ಬಳಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತ ಕುಮಾರ್ ಹೆಗಡೆ ಅವರ ಮಗ ಆಶುತೋಷ್ ಹೆಗಡೆ ವಿರುದ್ಧ ದೂರು ದಾಖಲಾಗಿತ್ತು. ಸೈಫ್ ಖಾನ್ ಎಂಬವರು ದೂರು ದಾಖಲಿಸಿದ್ದರು. ತನ್ನ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ ಮತ್ತು ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಲಾಗಿದೆ ಎಂದವರು ದೂರಿನಲ್ಲಿ ತಿಳಿಸಿದ್ದರು. ಈ ಹಲ್ಲೆಯಿಂದಾಗಿ ಸಲ್ಮಾನ್ ಖಾನ್ ಎಂಬವರ ಹಲ್ಲು ಮುರಿದಿರುವುದು ಕೂಡಾ ದೂರಿನಲ್ಲಿದೆ. ಪ್ರಕರಣದಲ್ಲಿ ಆಶುತೋಷ್ ಹೆಗಡೆ 4ನೇ ಆರೋಪಿಯಾಗಿದ್ದರು. ಇದೀಗ ನ್ಯಾಯಾಲಯ ಆಶುತೋಷ್ ವಿರುದ್ಧದ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ಹೇರಿದೆ. ಈ ಮೂಲಕ ಅವರಿಗೆ ವಿದೇಶಕ್ಕೆ ತೆರಳಿ ಕಲಿಕೆ ಮುಂದುವರಿಸುವುದಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಅಂದಹಾಗೆ,
ತನ್ನ ಮಗನನ್ನು ವಿದೇಶದಲ್ಲಿ ಓದಿಸುವ ಮತ್ತು ಅದಕ್ಕೆ ಅಡ್ಡಿಯಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸಿ ಎಂದು ನ್ಯಾಯಾಲಯದಲ್ಲಿ ಅರಿಕೆ ಮಾಡಿಕೊಳ್ಳುವ ಅನಂತ ಕುಮಾರ್ ಹೆಗಡೆಯವರು ಈವರೆಗೆ ಮಾಡುತ್ತಾ ಬಂದಿರುವ ಭಾಷಣಗಳು ಹೇಗಿವೆ? ತನ್ನೆದುರು ನೆರೆದ ಅಭಿಮಾನಿಗಳಿಗೆ ಒಂದೇ ಒಂದು ಬಾರಿಯಾದರೂ ವಿದೇಶಿ ಶಿಕ್ಷಣ ಪಡೆಯುವಂತೆ ಸಲಹೆ ನೀಡಿದ್ದಾರಾ? ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಅವರು ಒಂದು ಪೋಸ್ಟ್ ಹಂಚಿಕೊಂಡಿದ್ದರು. ಮಾಡರ್ನ್ ಗುರುಕುಲ ಸಂಸ್ಥೆಯನ್ನು ಈ ಪೋಸ್ಟ್ನಲ್ಲಿ ಹೊಗಳಲಾಗಿತ್ತು. ‘ಉತ್ತಮ ಶಿಕ್ಷಣಕ್ಕಾಗಿ ವರ್ಷದ ಪ್ರಶಸ್ತಿ ಪಡೆದಿದೆ’ ಎಂದು ಸಂಸ್ಥೆಯನ್ನು ಅವರು ಪರಿಚಯಿಸಿದ್ದರು. ಮಾತ್ರವಲ್ಲ, ‘ಕಾಲಬಾಹಿರವಾದ ಬ್ರಿಟಿಷ್ ಮಾದರಿ ಶಿಕ್ಷಣ ಕ್ರಮದಿಂದ ದೂರವಾಗಿ ಭಾರತೀಯ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡುತ್ತಿದೆ..’ ಎಂದು ಈ ಪೋಸ್ಟ್ನಲ್ಲಿ ಹೇಳಲಾಗಿತ್ತು. ಬಿಜೆಪಿ ಮತ್ತು ಅದರ ಬೆಂಬಲಿಗರು ವೇದಿಕೆ ಸಿಕ್ಕಾಗಲೆಲ್ಲ ಬ್ರಿಟಿಷ್ ಶಿಕ್ಷಣವನ್ನು ಮೆಕಾಲೆ ಶಿಕ್ಷಣ ಎಂದು ಅಣಕಿಸುತ್ತಾರೆ. ಅದಕ್ಕೆ ಬದಲಿಯಾಗಿ ಗುರುಕುಲ ಶಿಕ್ಷಣವನ್ನು ಮುಂದು ಮಾಡುತ್ತಲೂ ಇದ್ದಾರೆ. ಈ ಪೋಸ್ಟ್ಗಳಲ್ಲೂ ಗುರುಕುಲ ಶಿಕ್ಷಣ ಮಾದರಿಯನ್ನು ಸಕಾರಾತ್ಮಕವಾಗಿ ನೋಡಲಾಗಿದೆ. ವರ್ಷದ ಪ್ರಶಸ್ತಿ ಪಡೆದ ಮಾಡರ್ನ್ ಗುರುಕುಲ ಸಂಸ್ಥೆ ಎಂದು ಸಂಸ್ಥೆಯನ್ನು ಮೆಚ್ಚಿಕೊಳ್ಳಲಾಗಿದೆ. ಆದರೆ,
ಅನಂತ ಕುಮಾರ್ ಹೆಗಡೆಯವರು ತನ್ನ ಮಗನನ್ನು ಈ ಗುರುಕುಲದಲ್ಲಿ ಓದಿಸುತ್ತಿಲ್ಲ. ಅದರ ಬದಲು ಮೆಕಾಲೆ ಶಿಕ್ಷಣದ ತವರೂರು ಆಗಿರುವ ವಿದೇಶದಲ್ಲಿ ಓದಿಸುತ್ತಿದ್ದಾರೆ. ಒಂದುಕಡೆ, ಗುರುಕುಲ ಶಿಕ್ಷಣವನ್ನು ಮೆಚ್ಚಿಕೊಂಡು ಪೋಸ್ಟ್ ಹಾಕುವುದು ಮತ್ತು ಇನ್ನೊಂದು ಕಡೆ ತನ್ನ ಮಗನಿಗೆ ಅದರ ಸೋಂಕೂ ತಗುಲದಂತೆ ವಿದೇಶದಲ್ಲಿ ಓದಿಸುವುದೆಲ್ಲ ಏನನ್ನು ಸೂಚಿಸುತ್ತದೆ? ತನಗೆ ಜೈಕಾರ ಹಾಕುವ ಮತ್ತು ತನ್ನ ಪೋಸ್ಟರ್ಗಳನ್ನು ಹಾದಿ ಬೀದಿಯಲ್ಲಿ ಅಂಟಿಸುತ್ತಾ ಮತ್ತು ತನ್ನ ಭಾಷಣಕ್ಕೆ ಚಪ್ಪಾಳೆ ತಟ್ಟುತ್ತಾ ರೋಮಾಂಚಿತರಾಗುವ ಬಡಪಾಯಿಗಳಿಗೆ ಗುರುಕುಲ ಶಿಕ್ಷಣ ಪಡೆಯುವಂತೆ ಒತ್ತಾಯಿಸುವುದು ಮತ್ತು ತನ್ನ ಮಗನನ್ನು ಮೆಕಾಲೆ ಶಿಕ್ಷಣ ಕ್ರಮದಂತೆ ಓದಿಸುವುದು- ಇದು ಯಾವ ನ್ಯಾಯ? ತನ್ನ ಮಗನಿಗೊಂದು ಮತ್ತು ತನ್ನ ಬೆಂಬಲಿಗರಿಗೊಂದು ಎಂಬ ಇಬ್ಬಗೆಯ ನ್ಯಾಯವನ್ನು ಪ್ರತಿಪಾದಿಸುವವ ಪ್ರಾಮಾಣಿಕ ಹೇಗಾಗುತ್ತಾರೆ? ವೇದಿಕೆಗಳಿಂದ ಅವರು ಕೊಡುವ ಕರೆ ಮತ್ತು ಕೂಗುವ ಘೋಷಣೆಗಳು ಹೇಗೆ ಧರ್ಮಬದ್ಧವಾಗುತ್ತವೆ?
ಓರ್ವ ವ್ಯಕ್ತಿಯ ಪ್ರಾಮಾಣಿಕತೆಯನ್ನು ಆತನ ವರ್ತನೆಯಿಂದ ಅಳೆಯಲಾಗುತ್ತದೆ. ಈ ಮಾನದಂಡದ ಆಧಾರದಲ್ಲಿ ನೋಡಿದರೆ, ಅನಂತ್ ಕುಮಾರ್ ಹೆಗಡೆ ಅನುತ್ತೀರ್ಣರಾಗುತ್ತಾರೆ. ಅವರು ತಳಸಮುದಾಯದ ಬಡಪಾಯಿ ಯುವಕರಲ್ಲಿ ಮುಸ್ಲಿಮ್ ದ್ವೇಷವನ್ನು ಪ್ರಚೋದಿಸಿ ಕಾನೂನು ಕೈಗೆತ್ತಿಕೊಳ್ಳುವಂತೆ ಮಾಡುತ್ತಾರೆ ಮತ್ತು ಆ ಯುವಕರನ್ನು ಕೋರ್ಟು-ಕಛೇರಿ ಎಂದು ಅಲೆದಾಡಿಸುತ್ತಾರೆ. ‘ಭಟ್ಕಳದ ಮಸೀದಿಯನ್ನು ಬಾಬರಿ ಮಸೀದಿಯಂತೆ ಧ್ವಂಸ ಮಾಡುತ್ತೇವೆ’ ಎಂದು 2024ರಲ್ಲಿ ಅವರು ಹೇಳಿಕೆ ನೀಡಿದ್ದರು. ಹಾಗಂತ, ಈ ಧ್ವಂಸ ಮಾಡುವ ಕೃತ್ಯದಲ್ಲಿ ಅವರ ಮಗ ಭಾಗಿಯಾಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಇವರ ಮಗನ ಮೇಲೆ ಪ್ರಕರಣ ದಾಖಲಾಗಿರುವುದು ಕೂಡಾ ಧರ್ಮ ದ್ವೇಷದ ಚಟುವಟಿಕೆಗಾಗಿ ಅಲ್ಲ. ಎರಡು ಕಾರುಗಳ ನಡುವಿನ ಡಿಕ್ಕಿಯ ಹಿನ್ನೆಲೆಯಲ್ಲಿ ಉಂಟಾದ ವಾಗ್ವಾದಕ್ಕಾಗಿ. ‘ಹಿಂದೂ ಹುಡುಗಿಯರನ್ನು ಯಾರಾದರೂ ಮುಟ್ಟಿದರೆ ಅವರ ಕೈ ಇರಲಾರದು’ ಎಂದೂ ಅವರು ಕರೆ ನೀಡಿದ್ದರು. ಈ ಮೂಲಕ ಕಾನೂನು ಕೈಗೆತ್ತಿಕೊಳ್ಳುವಂತೆ ಪರೋಕ್ಷವಾಗಿ ಅವರು ತನ್ನ ಬೆಂಬಲಿಗರಿಗೆ ಕರೆ ನೀಡಿದ್ದರು. ‘ಇಸ್ಲಾಮ್ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಜಗತ್ತಿನಲ್ಲಿ ನೆಮ್ಮದಿ ಇರುವುದಿಲ್ಲ..’ ಎಂದೂ ಅವರು ಹೇಳಿದ್ದರು.
ಅವರು ಮೈಕ್ ಸಿಕ್ಕರೆ ಸಾಕು, ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಾರೆ. ದ್ವೇಷ ಭಾಷಣ ಮಾಡುತ್ತಾರೆ. ಸಿದ್ದರಾಮಯ್ಯ, ರಾಹುಲ್ ಗಾಂಧಿಯಂಥ ನಾಯಕರನ್ನು ಹೀನಾಯ ಭಾಷೆಯಲ್ಲಿ ನಿಂದಿಸುತ್ತಾರೆ. ಇದರಿಂದ ಪ್ರಚೋದಿತರಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಇವರದೇ ಬೆಂಬಲಿಗರು ಕೇಸು ಮೈಮೇಲೆ ಎಳೆದುಕೊಳ್ಳುತ್ತಾರೆ. ಅವರ ಮೇಲೆ ಎಫ್ಐಆರ್ ದಾಖಲಾಗುತ್ತದೆ. ಆ ಬಳಿಕ ಅವರು ವಿದೇಶಕ್ಕೆ ಹೋಗುವುದು ಬಿಡಿ, ತಮ್ಮೂರಿನಿಂದ ಪರವೂರಿಗೆ ಕೆಲಸಕ್ಕೂ ಹೋಗುವುದಕ್ಕಾಗುವುದಿಲ್ಲ. ನ್ಯಾಯಾಲಯದಿಂದ ಸಮನ್ಸ್ ಬರುತ್ತಿರುತ್ತದೆ. ಹಾಜರಾಗಬೇಕು. ಪೊಲೀಸ್ ಠಾಣೆಯಲ್ಲಿ ನಿಗದಿತ ದಿನಾಂಕದಂದು ಹಾಜರಿ ಹಾಕುತ್ತಿರಬೇಕು. ಅದರಿಂದಾಗಿ ಊರಲ್ಲೇ ನಿಲ್ಲುವ ಅನಿವಾರ್ಯತೆ ಎದುರಾಗುತ್ತದೆ. ಉದ್ಯೋಗ ಕೈತಪ್ಪುತ್ತದೆ. ಬದುಕು ದುರ್ಬರವಾಗುತ್ತದೆ. ಹಾಗಂತ,
ತನ್ನ ಮಗ ಆಶುತೋಷ್ ಹೆಗಡೆಯ ಮೇಲಿನ ಎಫ್ಐಆರ್ ರದ್ದುಗೊಳಿಸಿ ಎಂದು ಕೋರಿ ನ್ಯಾಯಾಲಯದ ಮೆಟ್ಟಲೇರಿದ ಅನಂತ್ ಕುಮಾರ್ ಹೆಗಡೆಯವರು ತನ್ನ ಬೆಂಬಲಿಗರ ಪ್ರಕರಣದಲ್ಲೂ ಹೀಗೆ ನ್ಯಾಯಾಲಯದ ಮೆಟ್ಟಲು ಹತ್ತಿದ್ದಿಲ್ಲ. ಅವರನ್ನು ಪ್ರಕರಣದಿಂದ ಕೈಬಿಡಿ ಎಂದು ನ್ಯಾಯಾಲಯವನ್ನು ಕೋರಿದ್ದಿಲ್ಲ.
ನಿಜ ಏನೆಂದರೆ, ಮುಸ್ಲಿಮ್ ದ್ವೇಷದ ಭಾಷಣ ಮಾಡುವ ರಾಜಕಾರಣಿಗಳು, ಸ್ವಂತದ ವಿಷಯಕ್ಕೆ ಬಂದಾಗ ಪಕ್ಕಾ ಸ್ವಾರ್ಥಿಗಳಾಗುತ್ತಾರೆ. ಅವರು ಒಳಗೊಳಗೇ ಮುಸ್ಲಿಮರೊಂದಿಗೆ ಉತ್ತಮ ಸಂಬಂಧವನ್ನೂ ಇಟ್ಟುಕೊಂಡಿರುತ್ತಾರೆ. ದ್ವೇಷ ಭಾಷಣ ಮಾಡುವ ಯತ್ನಾಳ್ ಇದಕ್ಕೆ ಅತ್ಯುತ್ತಮ ಉದಾಹರಣೆ. ಅವರು ಮುಸ್ಲಿಮರೊಂದಿಗೆ ವ್ಯವಹಾರ ಸಂಬಂಧ ಇಟ್ಟುಕೊಂಡಿರುವುದನ್ನು ಈ ಹಿಂದೆ ಪ್ರಜಾವಾಣಿ ಪತ್ರಿಕೆಯೇ ವರದಿ ಮಾಡಿತ್ತು. ಬಿಜೆಪಿ ನಾಯಕ ಸಂಗೀತ್ ಸೋಮ್ ಅವರು ಗೋಮಾಂಸ ರಫ್ತು ಕಂಪೆನಿಯಲ್ಲಿ ಪಾಲುದಾರಿಕೆ ಹೊಂದಿರುವುದನ್ನೂ ಈ ಹಿಂದೆ ಮಾಧ್ಯಮಗಳು ವರದಿ ಮಾಡಿದ್ದುವು.
ರಾಜಕೀಯ ಮೆಟ್ಟಿಲನ್ನು ಹತ್ತುವುದಕ್ಕಾಗಿ ಅನಂತ್ ಕುಮಾರ್ ಹೆಗಡೆಯಂಥ ರಾಜಕಾರಣಿಗಳು ಧರ್ಮದ ಪೋಷಾಕು ಧರಿಸಿಕೊಂಡು ಮತ್ತು ಧಾರ್ಮಿಕ ಘೋಷಣೆ ಕೂಗಿಕೊಂಡು ಮಿಂಚುತ್ತಿರುತ್ತಾರೆಯೇ ಹೊರತು, ಅವರಿಗೂ ಅವರ ನಡವಳಿಕೆಗೂ ಸಂಬಂಧ ಇರುವುದೇ ಇಲ್ಲ. ಧರ್ಮರಕ್ಷಣೆ, ಧರ್ಮನಿಷ್ಠೆ, ಸಂಸ್ಕೃತಿ ರಕ್ಷಣೆ ಇತ್ಯಾದಿಗಳೆಲ್ಲ ಅವರ ಮಟ್ಟಿಗೆ ಬೆಂಬಲಿಗರನ್ನು ಮರಳು ಮಾಡುವ ಟೂಲ್ಗಳಷ್ಟೇ. ಧರ್ಮದ್ವೇಷದ ಭಾಷಣ ಮಾಡುವ ಹೆಚ್ಚಿನ ರಾಜಕಾರಣಿಗಳ ಮಕ್ಕಳು ಒಂದೋ ವಿದೇಶದಲ್ಲಿ ಓದುತ್ತಿರುತ್ತಾರೆ ಅಥವಾ ವಿದೇಶದಲ್ಲಿ ಉದ್ಯೋಗದಲ್ಲಿದ್ದುಕೊಂಡು ಆರಾಮವಾಗಿರುತ್ತಾರೆ. ತಮ್ಮ ಮಕ್ಕಳನ್ನು ಅವರು ಹೊಡಿ-ಬಡಿ ಸಂಸ್ಕೃತಿಗೆ ಪರಿಚಯಿಸುವುದೇ ಇಲ್ಲ. ಅವರು ತಳಮಟ್ಟದ ರಾಜಕೀಯದಲ್ಲಿ ಕಾಣಿಸಿಕೊಳ್ಳುವುದೂ ಇಲ್ಲ. ಅವರು ನೇರವಾಗಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಮತ್ತು ಗೆದ್ದು ದ್ವೇಷ ಭಾಷಣ ಪ್ರಾರಂಭಿಸುತ್ತಾರೆ.
ಆಶುತೋಷ್ ಹೆಗಡೆ ಪ್ರಕರಣ ಈ ದ್ವೇಷ ರಾಜಕಾರಣದ ಬೂಟಾಟಿಕೆಯನ್ನು ಮತ್ತೊಮ್ಮೆ ಬಯಲಿಗೆ ತಂದಿದೆ.












