ಸುಧಾ, ಪೆರೇರಾ, ಗಾಡ್ಗಿಲ್…ಮೂರು ವರ್ಷಗಳ ಬಂಧನಕ್ಕೆ ನಾಳೆ ತೆರೆ ಬೀಳಲಿದೆಯೇ?

0
597

ಬರಹ: ದಿನೇಶ್ ಕುಮಾರ್ ಎಸ್.ಸಿ.

ಸುಧಾ ಭಾರದ್ವಾಜ್, ಮಹೇಶ್ ರಾವತ್, ವರ್ನಾನ್ ಗೋನ್ಸಾಲ್ವಿಸ್, ಅರುಣ್ ಫೆರೇರಾ, ಸುಧೀರ್ ಧವಾಲೆ, ರೋನಾ‌ ವಿಲ್ಸನ್, ಶೋಮಾ ಸೇನ್, ಸುರೇಂದ್ರ ಗಾಡ್ಗೀಳ್ ಮತ್ತು ವರವರರಾವ್…. ಇವರೆಲ್ಲರಿಗೂ ನಾಳೆ ಬಾಂಬೆ ಹೈಕೋರ್ಟ್ ಜಾಮೀನು ನೀಡುತ್ತದೆಯೇ? ಮೂರು ವರ್ಷಗಳಿಂದ ಜೈಲಿನಲ್ಲಿರುವ ಈ ಮಾನವ ಹಕ್ಕು ಹೋರಾಟಗಾರರು, ಕಾರ್ಮಿಕ-ಆದಿವಾಸಿ-ಬುಡುಕಟ್ಟು ಜನರ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳಿಗೆ ನಾಳೆ ಬಿಡುಗಡೆಯ ನಿಟ್ಟುಸಿರು ದಕ್ಕಬಹುದಾ? ಯುಎಪಿಎ ಅಡಿಯಲ್ಲಿ ರಾಜಕೀಯ ಖೈದಿಗಳನ್ನು ಜೈಲಿನಲ್ಲೇ ಮುಗಿಸಿಬಿಡುವ ಪ್ರಭುತ್ವದ ಕ್ರೌರ್ಯಕ್ಕೆ ಸಣ್ಣ ತಡೆಗೋಡೆ ನಾಳೆ ನಿರ್ಮಾಣವಾಗಬಹುದಾ?

ನಾಳೆ ಬಾಂಬೆ ಹೈಕೋರ್ಟ್ ನಲ್ಲಿ ಸುಧಾ ಭಾರದ್ವಾಜ್ ಅವರ ಜಾಮೀನು ಅರ್ಜಿಯ ವಿಚಾರಣೆ ನಿರ್ಣಾಯಕ‌ ಹಂತ ತಲುಪಲಿದೆ. ಸುಧಾ ಅವರ ಅರ್ಜಿಯ ಮೆರಿಟ್ ಗಳು ಇತರ ಎಂಟೂ ಜನರಿಗೆ ಅನ್ವಯಿಸುವುದರಿಂದ ಸಿಕ್ಕರೆ ಈ ಎಲ್ಲರಿಗೂ ಜಾಮೀನು ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ನಿನ್ನೆ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆಯ ಅಂಶಗಳು ಸಾಕಷ್ಟು ಕುತೂಹಲ ಕೆರಳಿಸುವಂತಿತ್ತು.

ಎಲ್ಲರಿಗೂ ಗೊತ್ತಿರುವಂತೆ ಈ ಎಲ್ಲ ಹೋರಾಟಗಾರರು ಬಂಧನಕ್ಕೆ ಒಳಗಾಗಿದ್ದು 2018ರ‌ ಮೇ ತಿಂಗಳಿನಲ್ಲಿ. 2017ರ ಡಿಸೆಂಬರ್ ನಲ್ಲಿ ನಡೆದ ಎಲ್ಗಾರ್ ಪರಿಷತ್ ಸಮ್ಮೇಳನದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದರೆಂದು ಇವರ ಮೇಲೆ 2018ರ ಏಪ್ರಿಲ್ ನಲ್ಲಿ ಪುಣೆ‌ ಪೊಲೀಸರು ಮೊಕದ್ದಮೆ ಹೂಡಿದರು. ಅದಾದ ನಂತರ NIA ಪೊಲೀಸರು ಈ ಪ್ರಕರಣವನ್ನು ಮುಂದುವರೆಸಿದರು. ಎಲ್ಲರ ಮೇಲೂ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಯುಎಪಿಎ ಅಡಿ ಯಾರನ್ನಾದರೂ ಬಂಧಿಸಿದ ನಂತರ ತೊಂಭತ್ತು ದಿನಗಳ ಒಳಗೆ ಚಾರ್ಜ್‌ಶೀಟ್ ಸಲ್ಲಿಸುವುದು ಕಡ್ಡಾಯ. Section 43-D(2)(b) of the UAPA ಇದನ್ನು ಸ್ಪಷ್ಟವಾಗಿ ಹೇಳುತ್ತದೆ. ಒಂದು ವೇಳೆ ಚಾರ್ಜ್‌ಶೀಟ್ ದಾಖಲಾಗದಿದ್ದರೆ ಸಹಜವಾಗಿಯೇ ( by default) ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡುತ್ತದೆ. ಜಾರ್ಜ್ ಶೀಟ್ ಸಲ್ಲಿಸಲು ಇನ್ನಷ್ಟು ಸಮಯಾವಕಾಶವನ್ನು ವಿಚಾರಣಾ ಏಜೆನ್ಸಿ ಸಮರ್ಥ ಕಾರಣ ನೀಡಿ ಪಡೆಯಬಹುದು. ಹೀಗೆ ಸಮಯ ಪಡೆದ ನಂತರವೂ ಜಾರ್ಜ್ ಶೀಟ್ ಸಲ್ಲಿಕೆಯಾಗದಿದ್ದರೆ ನ್ಯಾಯಾಲಯಗಳು ಜಾಮೀನು ನೀಡುತ್ತವೆ. ಈಗಾಗಲೇ ಹಲವು ಪ್ರಕರಣಗಳಲ್ಲಿ ಹೀಗೆ ಜಾಮೀನು ಮಂಜೂರು ಮಾಡಲಾಗಿದೆ.

ಬಹಳ ಕುತೂಹಲಕಾರಿ ವಿಷಯವೇನೆಂದರೆ ಸುಧಾ‌‌ ಭಾರದ್ವಾಜ್ ಮತ್ತು ಇತರ ಎಂಟುಮಂದಿಯ ಪ್ರಕರಣಗಳಲ್ಲಿ 2018ರ ನವೆಂಬರ್ 26ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ವಡಾನೆ ಚಾರ್ಜ್ ಶೀಟ್ ಸಲ್ಲಿಕೆಗೆ ತೊಂಬತ್ತು ದಿನಗಳ ಹೆಚ್ಚುವರಿ ಕಾಲಾವಕಾಶವನ್ನು NIA ಗೆ ನೀಡಿದ್ದರು. ಇದಾದ ನಂತರ 2019ರ ಫೆಬ್ರವರಿಯಲ್ಲಿ NIA ಸಲ್ಲಿಸಿದ 1800 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಅಂಗೀಕರಿಸಿದ್ದೂ ಇದೇ ನ್ಯಾಯಮೂರ್ತಿಗಳು. ಈಗ ಸುಧಾ ಭಾರದ್ವಾಜ್ ಅವರ ಪರ ವಕೀಲರು ಈ ಆದೇಶಗಳನ್ನು ಮಾಡಿದ ನ್ಯಾಯಾಧೀಶರಿಗೆ ಚಾರ್ಜ್ ಶೀಟ್ ಗೆ ಕಾಲಾವಕಾಶ ನೀಡುವ ಅಥವಾ ಹೆಚ್ಚುವರಿ‌ ಚಾರ್ಜ್ ಶೀಟ್ ಸ್ವೀಕರಿಸುವ ಅರ್ಹತೆಯೇ ಇರಲಿಲ್ಲ ಎಂದು ವಾದಿಸುತ್ತಿದ್ದಾರೆ.

NIA ಆಕ್ಟ್ 11 ಅಥವಾ 22ರ ಪ್ರಕಾರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗಷ್ಟೇ ಈ ಅಧಿಕಾರವಿರುತ್ತದೆ. ಆದೇ ನ್ಯಾಯಮೂರ್ತಿ ವಡಾನೆ ಈ ಆಕ್ಟ್ ಅಡಿ ನಿಯೋಜಿಸಲಾದ ನ್ಯಾಯಾಧೀಶರಲ್ಲ. ಒಂದು ವೇಳೆ ವಿಶೇಷ ನ್ಯಾಯಾಧೀಶರು ಇಲ್ಲದ ಸಮಯದಲ್ಲಿ ಸೆಷನ್ಸ್ ನ್ಯಾಯಾಧೀಶರು ಈ‌ ಅಧಿಕಾರ ಚಲಾಯಿಸಬಹುದು. ಆದರೆ ವಿಶೇಷ ನ್ಯಾಯಾಧೀಶರು ಹಲವರು ಇದ್ದರೂ ನ್ಯಾಯಮೂರ್ತಿ ವಡಾನೆ ಅವರಿಂದ ಈ ಆದೇಶಗಳು ಬಂದಿದ್ದವು. ಬಾಂಬೆ ಹೈಕೋರ್ಟ್ ಡೆಪ್ಯುಟಿ ರಿಜಿಸ್ಟ್ರಾರ್ ಅವರು ಆರ್ ಟಿ ಐ ಪ್ರಶ್ನೆಗಳಿಗೆ ಉತ್ತರಿಸುತ್ತ ನ್ಯಾಯಮೂರ್ತಿ ವಡಾನೆಯವರು NIA ಕಾಯ್ದೆಯಡಿ ನಿಯೋಜಿತ‌ ವಿಶೇಷ ನ್ಯಾಯಾಧೀಶರಾಗಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ.

ಸುಧಾ ಭಾರದ್ವಾಜ್ ಅವರ ಪರ ವಕೀಲರಾದ ಯುಗ್ ಚೌಧರಿ ಇದನ್ನೇ ಇಟ್ಟುಕೊಂಡು ನಿನ್ನೆ ಹೈಕೋರ್ಟ್ ಮುಂದೆ ಬಲವಾಗಿ ವಾದಿಸಿದ್ದಾರೆ. ತಮ್ಮ ನ್ಯಾಯವ್ಯಾಪ್ತಿಯಲ್ಲೇ ಇರದ ಆದೇಶವನ್ನು ನ್ಯಾಯಾಧೀಶರು ಹೇಗೆ ಹೊರಡಿಸಲು ಸಾಧ್ಯ? ಇದು ಅಕ್ರಮ ಬಂಧನ. ಆರ್ ಟಿ ಐ ಮೂಲಕ ಪಡೆದ ಮಾಹಿತಿ ಇದನ್ನು ದೃಢಪಡಿಸುತ್ತದೆ. ಹೀಗಾಗಿ ನನ್ನ ಕಕ್ಷಿದಾರರಿಗೆ ಕೂಡಲೇ ಜಾಮೀ‌ನು‌ ಮಂಜೂರು ಮಾಡಬೇಕು ಎಂದು ಯುಗ್ ಹೇಳಿದ್ದಾರೆ.

ಇದು ನಮ್ಮ ನ್ಯಾಯವ್ಯವಸ್ಥೆಯ ತಳಹದಿಯನ್ನೇ ಅಲುಗಾಡಿಸುವಂತಿದೆ. ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತವರಿಗೆ ಆ ಅಧಿಕಾರವೇ ಇಲ್ಲದಾಗ ಅವರ ಆದೇಶದಿಂದ ಜನರು ಜೈಲಿನಲ್ಲಿ ಕೊಳೆಯುವಂತಾಗಿರುವುದು ಎಷ್ಟು ಸರಿ ಎಂದು ಯುಗ್ ಪ್ರಶ್ನಿಸಿದ್ದಾರೆ. ನ್ಯಾಯಮೂರ್ತಿ ವಡಾನೆ ಒಂದು ಆದೇಶದಲ್ಲಿ ಸಹಿ ಮಾಡುವಾಗ ವಿಶೇಷ ನ್ಯಾಯಾಧೀಶರೆಂದೂ, ಇನ್ನೊಂದು ಆದೇಶದಲ್ಲಿ ಯುಎಪಿಎ ನ್ಯಾಯಾಧೀಶರೆಂದೂ ಬರೆದುಕೊಂಡಿದ್ದಾರೆ ಎಂದು ನ್ಯಾಯವಾದಿ ಯುಗ್ ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. ಸುಧಾ ಭಾರದ್ವಾಜ್ ಹೊರತುಪಡಿಸಿ ಉಳಿದ ಎಂಟು ಜನರ ಪರವಾಗಿ ವಾದಿಸುತ್ತಿರುವ ನ್ಯಾಯವಾದಿ ಆರ್. ಸತ್ಯನಾರಾಯಣ್ ನಿನ್ನೆ ತಮ್ಮ ಅಹವಾಲುಗಳನ್ನೂ ಆಲಿಸಬೇಕು ಎಂದು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಎಲ್ಲ ಪ್ರಕರಣಗಳನ್ನು ಸೇರಿಸಿಕೊಂಡೇ ಜು.8 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.

ಸುಧಾ ಪರ ವಕೀಲರಾದ ಯುಗ್ ಚೌಧರಿಯವರ ವಾದಮಂಡನೆಯನ್ನು ತಾತ್ತ್ವಿಕವಾಗಿ ಒಪ್ಪಿರುವುದಾಗಿಯೂ, ಕೇವಲ ದಾಖಲೆಗಳನ್ನು (ಆರ್ ಟಿ ಐ‌) ಒಮ್ಮೆ ಪರಿಶೀಲಿಸುವುದಾಗಿಯೂ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶರುಗಳಾದ ಎಸ್ ಎಸ್ ಶಿಂಧೆ ಮತ್ತು ಜಾಮದಾರ್ ಹೇಳುವುದರೊಂದಿಗೆ ಹೋರಾಟಗಾರರ ಬಿಡುಗಡೆಯ ಹಾದಿ ತೆರೆದುಕೊಂಡಿದೆಯಾ ಎಂಬ ಸಣ್ಣ ಆಸೆಯ ಬೆಳಕು ಮೂಡಿದಂತಾಗಿದೆ. ರಾಜ್ಯ ಸರ್ಕಾರ ಆರ್ ಟಿ ಐ ದಾಖಲೆಗಳಿಗೆ ಸಂಬಂಧಿಸಿದಂತೆ ಯಾವ ಆಕ್ಷೇಪಣೆಯನ್ನೂ ಸಲ್ಲಿಸದಿರುವುದು ನಾವು ಆಶಾವಾದಿಗಳಾಗಿರಲು‌ ಇನ್ನಷ್ಟು ಕಾರಣಗಳನ್ನು ಒದಗಿಸುತ್ತಿದೆ.

ನಾಳೆ ಗುರುವಾರ ನಮಗೆಲ್ಲ ಒಳ್ಳೆಯ ದಿನವಾಗಲಿ. ಭಾರತದ ಹೆಮ್ಮೆಯ ಪ್ರಜಾಪ್ರಭುತ್ವಕ್ಕೆ ಅಂಟಿದ ಕಪ್ಪುಚುಕ್ಕಿ ಅಳಿಸುವ ಕಾರ್ಯ ಆರಂಭವಾಗಲಿ.