ಐಐಟಿ ವಿದ್ಯಾರ್ಥಿಯ ಸಹಾಯಕ್ಕೆ ಮುಂದಾದ ಸುಪ್ರೀಂ ಕೋರ್ಟ್

0
132

ಸನ್ಮಾರ್ಗ ವಾರ್ತೆ

ಲಕ್ನೊ, ಸೆ.28: ಎಐಟಿಯಲ್ಲಿ ಪ್ರವೇಶ ಸಿಕ್ಕಿರುವ ಮತ್ತು ಸರ್ವರ್ ತೊಂದರೆಯಿಂದ ಶುಲ್ಕ ಕಟ್ಟಲು ಸಾಧ್ಯವಾಗದ ವಿದ್ಯಾರ್ಥಿಗೆ ಸಾಧ್ಯವಾದ ನೆರವು ನೀಡುವುದಾಗಿ ಸುಪ್ರೀಂಕೋರ್ಟು ಚೀಫ್ ಜಸ್ಟಿಸ್ ಡಿವೈ ಚಂದ್ರಚೂಡ್ ಹೇಳಿದರು.

ಉತ್ತರಪ್ರದೇಶದ ಮುಝಫ್ಫರ್ ನಗರದ ತಿತೊರ ಗ್ರಾಮದ ಬಡ ದಲಿತ ವಿದ್ಯಾರ್ಥಿ ಅತುಲ್ ಕುಮಾರ್ ಗೆ ಐಐಟಿಯಲ್ಲಿ ಪ್ರವೇಶ ಸಿಕ್ಕಿತ್ತು. ಆದರೆ ಅಡ್ಮಿಷನ್ ದೃಢಪಡಿಸಲು ನೀಡಬೇಕಾದ ಶುಲ್ಕ 17,500 ರೂಪಾಯಿ ಸರಿಯಾದ ಸಮಯಕ್ಕೆ ಪಾವತಿಸಲು ಅತುಲ್ ಕುಮಾರ್ ಗೆ ಸಾಧ್ಯವಾಗಿಲ್ಲ. ಶುಲ್ಕ ಕಟ್ಟುವ ಸಮಯ ಮುಗಿಯಲು ಮೂರು ನಿಮಿಷ ಇದ್ದಾಗ ಸರ್ವರ್‍ ನಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಆದುದರಿಂದ ವಿದ್ಯಾರ್ಥಿಯ ಕಲಿಯುವ ಕನಸು ಮುಗ್ಗರಿಸಿ ಹೋಗಿತ್ತು.

ಕಲಿಯಲು ಹಣ ಇಲ್ಲದ ವಿದ್ಯಾರ್ಥಿಗೆ ಗ್ರಾಮದ ಜನರು ಶುಲ್ಕ ಕಟ್ಟುವ ಹಣವನ್ನು ಸಂಗ್ರಹಿಸಿ ಕೊಟ್ಟಿದ್ದರು. ಜೂನ್ 24ಕ್ಕೆ ವಿದ್ಯಾರ್ಥಿ ಶುಲ್ಕ ಕಟ್ಟಬೇಕಾಗಿತ್ತು. ಅದು ಕೊನೆಯ ದಿನಾಂಕವಾದ್ದರಿಂದ ಅಂದು ಐದು ಗಂಟೆಗಳೊಳಗೆ ಹಣ ಪಾವತಿಸಿಯಾಗಿರಬೇಕಾಗಿತ್ತು.

ಐಐಟಿ ಧನ್‍ಬಾದ್‍ನಲ್ಲಿ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‍ನಲ್ಲಿ ಅತುಲ್‍ಗೆ ಅಡ್ಮಿಶನ್ ಸಿಕ್ಕಿತ್ತು. ಶುಲ್ಕ ಕಟ್ಟಲು ಸಾಧ್ಯವಾಗದಿರುವುದರಿಂದ ಸಹಾಯ ಕೋರಿ ಅತುಲ್ ಝಾರ್ಕಂಡ್ ಹೈಕೋರ್ಟಿನ ಮೊರೆ ಹೋಗಿದ್ದರು. ಆದರೆ ಮದ್ರಾಸ್‍ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲು ಝಾರ್ಕಂಡ್ ಹೈಕೋರ್ಟು ಸೂಚಿಸಿತ್ತು.

ಆದರೆ ಪ್ರಕರಣದ ವಿಚಾರಣೆಗೆತ್ತಿಕೊಳ್ಳಲು ಮದ್ರಾಸ್ ಹೈಕೋರ್ಟಿನಲ್ಲಿ ತಡವಾದ್ದರಿಂದ ಅರ್ಜಿಯನ್ನು ಅತುಲ್‍ರ ವಕೀಲರು ಹಿಂಪಡೆದು ಸುಪ್ರೀಂಕೋರ್ಟಿನ ಮೊರೆ ಹೋದರು. ಚೀಫ್ ಜಸ್ಟಿಸ್ ಡಿವೈ ಚಂದ್ರ ಚೂಡ್, ಜಸ್ಟಿಸ್ ಜೆಬಿ ಪಾರ್‍ದಿವಾಲ, ಜಸ್ಟಿಸ್ ಮನೋಜ್ ಮಿಶ್ರರ ಪೀಠ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡು ಸಾಧ್ಯವಿರುವ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.