- ಸನ್ಮಾರ್ಗ ವಾರ್ತೆ
ಮಂಗಳೂರು; ಮಾ. 28- ಕೋಮು ಪ್ರಚೋದನಕಾರಿ ವರದಿ ಪ್ರಕಟಿಸಿರುವ ‘ವಿಜಯ ಕರ್ನಾಟಕ’ ದಿನ ಪತ್ರಿಕೆಯ ವಿರುದ್ಧ ದೂರು ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಮುಸ್ಲಿಂ ಲೇಖಕರ ಸಂಘವು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.
ಮಾರ್ಚ್ ೨೮ ರ ವಿಜಯ ಕರ್ನಾಟಕ ದಿನಪತ್ರಿಕೆಯ ಮೊದಲ ಪುಟದಲ್ಲಿ ’ಸತ್ತವರೆಲ್ಲ ಒಂದೇ ಸಮುದಾಯದವರು‘ ಎಂಬ ತಲೆಬರಹದಲ್ಲಿ ವರದಿಯೊಂದು (ಈ ದೂರಿನೊಂದಿಗೆ ಲಗತ್ತಿಸಿರುವ) ಪ್ರಕಟವಾಗಿದ್ದು, ಈ ವರದಿಯು ಕೋಮು ಪ್ರಚೋದನಾಕಾರಿ ವರದಿಯಾಗಿರುತ್ತದೆ. ಒಂದು ಧರ್ಮದ ಜನರ ಭಾವನೆಗಳನ್ನು ಕೆರಳಿಸಿ, ಸಮಾಜದಲ್ಲಿ ದೊಂಬಿ, ಗಲಭೆಗೆ ಕುಮ್ಮಕ್ಕು ನೀಡುವಂತಿದೆ. ವಿಶ್ವದಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್ ಕರ್ನಾಟಕ ರಾಜ್ಯದಲ್ಲಿ ಹಬ್ಬಲು ಮುಸ್ಲಿಮರು ಕಾರಣವೆಂಬಂತೆ ಚಿತ್ರೀಕರಿಸಿರುವ ಈ ವರದಿಯ ಹಿಂದೆ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಸಮುದಾಯದ ವಿರುದ್ದ ಸಮಾಜದ ಜನರನ್ನು ಎತ್ತಿಕಟ್ಟುವ ಷಡ್ಯಂತ್ರವಿದೆ. ‘ಕೊವಿಡ್-19’ರ ಭೀತಿಯಿಂದಿರುವ ಸಮಾಜದಲ್ಲಿನ ಆತಂಕವನ್ನು ಈ ವರದಿ ಇಮ್ಮಡಿಗೊಳಿಸಿದೆ.
ಆದ್ದರಿಂದ, ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರು, ಸಂಪಾದಕೀಯ ಮಂಡಳಿ, ಮಾಲಕರು/ಪಾಲುದಾರರು ಮತ್ತು ಮುದ್ರಣಗಾರರ ವಿರುದ್ದ ದೂರು ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ವಿನಂತಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಉಮರ್ ಯು ಹೆಚ್ ಅವರು ದೂರಿನಲ್ಲಿ ತಿಳಿಸಿದ್ದಾರೆ.












