ನೀಟ್ ರದ್ದುಗೊಳಿಸಿ, 12ನೇ ತರಗತಿ ಅಂಕಗಳ ಆಧಾರದಲ್ಲಿ ವೈದ್ಯಕೀಯ ಪ್ರವೇಶ ಮರುಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ತಮಿಳುನಾಡು ವಿಧಾನಸಭೆಯಿಂದ ನಿರ್ಣಯ ಅಂಗೀಕಾರ

0
176

ಸನ್ಮಾರ್ಗ ವಾರ್ತೆ

ಚೆನ್ನೈ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಮತ್ತು 12ನೇ ತರಗತಿಯ ಅಂಕಗಳ ಆಧಾರದ ಮೇಲೆ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲು ಅನುಕೂಲ ಮಾಡಿಕೊಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆಯು ಮಂಗಳವಾರ ಅಂಗೀಕರಿಸಿದೆ.

ನೀಟ್ ಕುರಿತು ಮುನ್ನೆಲೆಗೆ ಬಂದ ಕಳವಳಗಳು, ಅದರಲ್ಲಿನ ಅವ್ಯವಹಾರಗಳು ಮತ್ತು ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳ ಮೇಲೆ ಅದು ಬೀರುತ್ತಿರುವ ಪರಿಣಾಮಗಳ ಹಿನ್ನೆಲೆಯಲ್ಲಿ ಈ ನಿರ್ಣಯವು ಬಂದಿದೆ.

ನಿರ್ಣಯವನ್ನು ಮಂಡಿಸಿದ ಆರೋಗ್ಯ ಸಚಿವ ಕೆ.ಜಿ. ಅರುಣ್‌ರಾಜ್ ಮಾತನಾಡಿ, ನೀಟ್ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯಗಳ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ರಾಜ್ಯ ಸರ್ಕಾರವು ನಿರಂತರವಾಗಿ ಪ್ರತಿಪಾದಿಸುತ್ತ ಬಂದಿದೆ ಎಂದು ಹೇಳಿದರು.

ಡಿಎಂಕೆ, ಎಐಎಡಿಎಂಕೆ, ಪಿಎಂಕೆ ಮತ್ತು ಎಡಪಕ್ಷಗಳ ಸದಸ್ಯರು ನಿರ್ಣಯಕ್ಕೆ ಬೆಂಬಲಿಸಿ ಮಾತನಾಡಿದರು, ನಂತರ ಅದನ್ನು ಅಂಗೀಕರಿಸಲಾಯಿತು.

ಬಿಜೆಪಿ ಶಾಸಕ ಭೋಜರಾಜನ್ ನಿರ್ಣಯವನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು.

ನೀಟ್ ವಿರುದ್ಧ ತಮಿಳುನಾಡಿನ ವಿರೋಧವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಬದ್ಧತೆಯಲ್ಲಿ ಬೇರೂರಿದೆ ಎಂದು ಆರೋಗ್ಯ ಸಚಿವ ಅರುಣ್ ರಾಜ್ ಹೇಳಿದರು. ಆರ್ಥಿಕ ಸ್ಥಿತಿಯ ಬದಲಿಗೆ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಅರ್ಹತೆಯ ಆಧಾರದ ಮೇಲೆ ವೈದ್ಯಕೀಯ ಶಿಕ್ಷಣವು ಲಭ್ಯವಿರಬೇಕು ಎಂದು ಅವರು ವಾದಿಸಿದರು.

ಖಾಸಗಿ ಕೋಚಿಂಗ್‌ ಭರಿಸಬಲ್ಲ ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರಸ್ತುತ ವ್ಯವಸ್ಥೆಯು ಹೆಚ್ಚುವರಿ ಅನುಕೂಲವನ್ನು ಕಲ್ಪಿಸುತ್ತಿದೆ. ಇದರಿಂದ ಆರ್ಥಿಕ ಅಸಮಾನತೆಗಳು ಹೆಚ್ಚಾಗುತ್ತಿವೆ ಮತ್ತು ಉನ್ನತ ಶಿಕ್ಷಣದ ನಿರೀಕ್ಷೆಗಳನ್ನು ನಿರ್ಧರಿಸುವ ಏಕೈಕ ಪರೀಕ್ಷೆಯ ತಯಾರಿಯ ಕಡೆಗೆ ವಿದ್ಯಾರ್ಥಿಗಳು ಶಾಲಾ ಪಠ್ಯಕ್ರಮದಿಂದ ವಿಮುಖರಾಗುತ್ತಿದ್ದಾರೆ ಎಂದು ಅವರು ಹೇಳಿದರು.

ತಮಿಳುನಾಡು ರಾಷ್ಟ್ರೀಯ ಮಾನದಂಡಗಳು ಅಥವಾ ಪಾರದರ್ಶಕತೆಗೆ ವಿರೋಧವಾಗಿಲ್ಲ, ಆದರೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ದುರ್ಬಲಗೊಳಿಸುವ ಪರೀಕ್ಷೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅರುಣ್ ರಾಜ್ ಹೇಳಿದರು. ನೀಟ್ ಸಂಬಂಧಿತ ಬಿಕ್ಕಟ್ಟಿನ ನಡುವೆ ವಿದ್ಯಾರ್ಥಿಗಳು ತಮ್ಮ ಜೀವ ಕಳೆದುಕೊಳ್ಳುತ್ತಿರುವುದರ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.

ನೀಟ್‌ನಿಂದ ವಿನಾಯಿತಿ ಕೋರಿ ವಿಧಾನಸಭೆಯು ಪದೇ ಪದೇ ನಿರ್ಣಯಗಳನ್ನು ಅಂಗೀಕರಿಸಿದೆ ಮತ್ತು 2021 ರಲ್ಲಿ ಅಗತ್ಯ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ, ಆದರೆ ರಾಷ್ಟ್ರಪತಿಗಳು ಅದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಅವರು ಗಮನಸೆಳೆದರು.

ವೈದ್ಯಕೀಯ ಪ್ರವೇಶಗಳ ಮೇಲೆ ರಾಜ್ಯಗಳಿಗೆ ಹೆಚ್ಚಿನ ಅಧಿಕಾರವಿರಬೇಕು ಎಂದು ವಾದಿಸಿದ ಅವರು, ಶಿಕ್ಷಣವನ್ನು ಸಮವರ್ತಿ ಪಟ್ಟಿಯಿಂದ ರಾಜ್ಯ ಪಟ್ಟಿಗೆ ವರ್ಗಾಯಿಸಬೇಕು ಅಥವಾ ರಾಜ್ಯಗಳಿಗೆ ಹೆಚ್ಚಿನ ನಿಯಂತ್ರಣವನ್ನು ನೀಡಲು ಸಮವರ್ತಿ ಪಟ್ಟಿಯೊಳಗೆ ಪ್ರತ್ಯೇಕ ನಿಬಂಧನೆಯನ್ನು ಸೃಷ್ಟಿಸಬೇಕು ಎಂದು ಹೇಳಿದರು. ಈ ಬೇಡಿಕೆಯು ತಮಿಳುನಾಡಿನ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿದ್ದು, ಇದು ರಾಜಕೀಯ ಪ್ರೇರಿತವಲ್ಲ ಎಂದು ಅವರು ಸಮರ್ಥಿಸಿಕೊಂಡರು.

ಸಾಮಾನ್ಯ ಪ್ರವೇಶ ಪರೀಕ್ಷೆಯು ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಅನಾನುಕೂಲತೆಯನ್ನುಂಟುಮಾಡುತ್ತದೆ ಮತ್ತು ಖಾಸಗಿ ಕೋಚಿಂಗ್ ಮೇಲಿನ ಅವಲಂಬನೆಯನ್ನು ಹೆಚ್ಚಿಸುತ್ತದೆ ಎಂದು ವಾದಿಸುತ್ತಾ ರಾಜ್ಯವು ಬಹಳ ಹಿಂದಿನಿಂದಲೂ ನೀಟ್ ಅನ್ನು ವಿರೋಧಿಸುತ್ತ ಬಂದಿದೆ.

ಕೇಂದ್ರೀಕೃತ ವೈದ್ಯಕೀಯ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಪಡೆಯಲು ಮತ್ತು ರಾಜ್ಯದಲ್ಲಿ ವೈದ್ಯಕೀಯ ಪ್ರವೇಶಕ್ಕಾಗಿ 12 ನೇ ತರಗತಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ವ್ಯವಸ್ಥೆಯನ್ನು ಮರುಸ್ಥಾಪಿಸಲು ತಮಿಳುನಾಡು ಮಾಡುತ್ತಿರುವ ಮತ್ತೊಂದು ಪ್ರಯತ್ನವನ್ನು ಇತ್ತೀಚಿನ ನಿರ್ಣಯವು ಸೂಚಿಸುತ್ತದೆ.

https://x.com/ActorVijayTeam/status/2087077597121491193/photo/1