ಸನ್ಮಾರ್ಗ ವಾರ್ತೆ
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧೀನದಲ್ಲಿರುವ ಶ್ರೀವಾದಿರಾಜ ಪೆರುಮಾಳ್ ದೇವಾಲಯಕ್ಕೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ದಲಿತ ಸಮುದಾಯದ ಸದಸ್ಯರು ಹೂಮಾಲೆ, ಹಣ್ಣುಗಳ ಬುಟ್ಟಿಯನ್ನು ಹಿಡಿದು ದೇವಾಲಯ ಪ್ರವೇಶಿಸಿ, ಪ್ರಾರ್ಥನೆ ಸಲ್ಲಿಸಿದರು.
ದಲಿತ ಸಮುದಾಯದ ಯುವಕ ಪಿ.ರಮೇಶ್ಕುಮಾರ್ ಹೇಳುವಂತೆ, “ದೇವಾಲಯವು 200 ವರ್ಷಗಳಷ್ಟು ಹಳೆಯದಾಗಿದ್ದು, ದೇವಾಲಯ ಪ್ರಾರಂಭವಾದಾಗಿನಿಂದ ದೇವಾಲಯ ಪ್ರವೇಶಕ್ಕೆ ದಲಿತರಿಗೆ ನಿಷೇಧ ಹೇರಲಾಗಿತ್ತು. ನಾವು ಗ್ರಾಮದ ಸವರ್ಣೀಯರಿಗೆ ದೇವಾಲಯದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತಮಗೂ ಅವಕಾಶ ನೀಡುವಂತೆ ಪದೇ ಪದೇ ಮನವಿ ಮಾಡಿದ್ದೆವು. ಆದರೆ, ಅದಕ್ಕೆ ನಿರಾಕರಿಸಿದ್ದ ಸವರ್ಣೀಯರು, 2008ರಿಂದ ದೇವಾಲಯದ ಮೆರವಣಿಗೆಯನ್ನೂ ಅಮಾನತುಗೊಳಿಸಿದ್ದರು. ನಾವು ನಮ್ಮ ಜೀವನದಲ್ಲಿ ಇದೇ ಪ್ರಥಮ ಬಾರಿಗೆ ದೇವಾಲಯ ಪ್ರವೇಶಿಸುತ್ತಿದ್ದು, ನಮ್ಮ ಮನವಿಯನ್ನು ಅಂಗೀಕರಿಸಿದ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಧನ್ಯವಾದ ಅರ್ಪಿಸುತ್ತೇವೆ” ಎಂದು ತಿಳಿಸಿದ್ದಾರೆ.
ಕೃತ ಮೂಲಗಳ ಪ್ರಕಾರ, ದಲಿತರ ದೇವಾಲಯ ಪ್ರವೇಶಕ್ಕೆ ಗ್ರಾಮಸ್ಥರು ಅಲಿಖಿತ ನಿಷೇಧ ಹೇರಿದ್ದರು. ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದ ದಲಿತ ಸಮುದಾಯದವರು, ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು. ಇದರ ಬೆನ್ನಿಗೇ ಕಲ್ಲಕುರಿಚಿ ಜಿಲ್ಲಾ ಕಂದಾಯ ಉಪ ವಿಭಾಗಾಧಿಕಾರಿ ಎಸ್.ಪವಿತ್ರ ಡಿಸೆಂಬರ್ 27ರಂದು ಉಭಯ ಬಣಗಳ ನಡುವೆ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಬಯಸುವ ಯಾವುದೇ ವ್ಯಕ್ತಿಯನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಸವರ್ಣೀಯರಿಗೆ ಮನವರಿಕೆ ಮಾಡಿಕೊಡಲಾಗಿತ್ತು.












