ಚೆನ್ನೈ: ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿಯಾದ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಮಧುರೈ ಬಳಿಯ ತಿರುಮಂಗಲಂನಲ್ಲಿ ನಡೆದಿದೆ.
ತಿರುಮಂಗಲಂನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಮೃತ ಶಿಕ್ಷಕಿಯ ಜಿ. ರತಿದೇವಿ ಎಂದಾಗಿದೆ. ರಾಮನಾಥಪುರಂನ ಓಂ ಶಕ್ತಿನಗರದ ನಿವಾಸಿ ಪತಿ ಜಿ.ಗುರುಮುನೀಶ್ವರನ್ ಎಂಬವ ಕೌಟುಂಬಿಕ ಕಾರಣದಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರತಿದೇವಿ ಸೋಮವಾರ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಆಗ ಆರೋಪಿ ಗುರುಮುನೀಶ್ವರನ್ ಕ್ಲಾಸ್ರೂಮಿಗೆ ಹೋಗಿದ್ದಾನೆ. ಮಕ್ಕಳ ಎದುರೇ ಪತ್ನಿಗೆ ಇರಿದಿದ್ದಾನೆ ಮತ್ತು ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಆರು ವರ್ಷಗಳ ಹಿಂದೆ ರತಿದೇವಿಯನ್ನು ಗುರುಮುನೀಶ್ವರನ್ ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಮೃತ ರತಿದೇವಿ 10 ತಿಂಗಳ ಹಿಂದೆ ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಪತಿಯಿಂದ ಬೇರೆಯಿದ್ದರು. ಆಕೆ ಸುಮಾರು ಮೂರುವರೆ ವರ್ಷದಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಸಿವಿಲ್ ಎಂಜಿನಿಯರ್ ಮಾಡಿದ್ದು, ವಿದೇಶದಲ್ಲಿ ಕೆಲಸ ಮಾಡುತ್ತಿದ್ದನು. ಈತ ಮೂರು ವರ್ಷದ ಹಿಂದೆ ಭಾರತಕ್ಕೆ ಹಿಂದಿರುಗಿದ್ದ. ಮಕ್ಕಳು ತಾಯಿ ರತಿದೇವಿ ಬಳಿ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಆರೋಪಿ ಶಾಲೆಯೊಳಗೆ ಹೋಗಿದ್ದಾನೆ. ಶಾಲೆಯ ಕಟ್ಟಡದ 2ನೇ ಮಹಡಿಯಲ್ಲಿ ರತಿದೇವಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಹೋಗಿ ಪತ್ನಿಯೊಂದಿಗೆ ಜಗಳ ಮಾಡಿ ನಂತರ ಚಾಕು ತೆಗೆದು ವಿದ್ಯಾರ್ಥಿಗಳ ಮುಂದೆಯೇ ಇರಿದ್ದಾನೆ. ಮಕ್ಕಳ ಕೂಗಾಟ ಕೇಳಿ ಬೇರೆ ಶಿಕ್ಷಕರು ಬಂದಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ರತಿದೇವಿ ಮೃತಪಟ್ಟಿದ್ದಾರೆ.












