ಸನ್ಮಾರ್ಗ ವಾರ್ತೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಎರಡು ಸೇನಾ ವಾಹನಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ. ಇದರೊಂದಿಗೆ ಹುತಾತ್ಮರಾದ ಯೋಧರ ಸಂಖ್ಯೆ ಐದಾಗಿದೆ. ಮೂವರು ಗಾಯಗೊಂಡಿದ್ದಾರೆ. ಗುರುವಾರ ಮಧ್ಯಾಹ್ನ 3.45ಕ್ಕೆ ಸುರನ್ಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯ ಧೇರಾ ಕಿ ಗಲಿಯಿಂದ ಬುಫ್ಲಿಯಾಸ್ಗೆ ಹೋಗುವ ರಸ್ತೆಯಲ್ಲಿರುವ ಧಾತ್ಯಾರ್ ಮೋರ್ಹಿಲ್ನಲ್ಲಿ ಈ ಘಟನೆ ನಡೆದಿದೆ.
ಬುಧವಾರ ರಾತ್ರಿ, ಧೇರಾ ಕಿ ಗಲಿಯಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಅಲ್ಲಿಂದ ಹೊರಟುಹೋದ ಸೇನಾ ಟ್ರಕ್ ಮತ್ತು ಜಿಪ್ಸಿ ಮೇಲೆ ಭಯೋತ್ಪಾದಕರು ಹೊಂಚು ಹಾಕಿ ಗುಂಡಿನ ದಾಳಿ ನಡೆಸಿದರು. ಒಂದು ತಿಂಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಸೇನೆಯ ಮೇಲೆ ನಡೆದ ಎರಡನೇ ಉಗ್ರರ ದಾಳಿ ಇದಾಗಿದೆ.
ಈ ಪ್ರದೇಶದಲ್ಲಿ ಉಗ್ರರಿಗಾಗಿ ಸೇನೆ ಭಾರೀ ಶೋಧ ನಡೆಸುತ್ತಿದೆ. ಗಡಿ ಸೇರಿದಂತೆ ವಾಹನಗಳ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿದೆ.
ಕಳೆದ ತಿಂಗಳು, ರಾಜೌರಿಯ ಕಲಾಕೋಟ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕ್ಯಾಪ್ಟನ್ಗಳು ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದರು. ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಾಜೌರಿ-ಪೂಂಚ್ ಪ್ರದೇಶದಲ್ಲಿ ಅವಳಿ ದಾಳಿಯಲ್ಲಿ 10 ಸೈನಿಕರು ಸಾವನ್ನಪ್ಪಿದ್ದರು.












