ಭ್ರಷ್ಟ ಕೋಮುವಾದಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆದು ಸಂವಿಧಾನ ಉಳಿಸಬೇಕಿದೆ: ಸಿದ್ದರಾಮಯ್ಯ

0
371

ಸನ್ಮಾರ್ಗ ವಾರ್ತೆ

ದಾವಣಗೆರೆ: “ದೇಶದ ಜನರಿಗಾಗಿ ಡಾ.ಬಿ ಆರ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ಉಳಿದರೆ ಮಾತ್ರ ನಾವೆಲ್ಲ ಉಳಿಯಲಿಕ್ಕೆ ಸಾಧ್ಯ. ಆದ್ದರಿಂದ ಹಿಂದುತ್ವ, ಸರ್ವಾಧಿಕಾರ ಹಾಗೂ ಭ್ರಷ್ಟ ಕೋಮುವಾದಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆದು ಸಂವಿಧಾನ ಉಳಿಸಬೇಕಿದೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದಾವಣಗೆರೆಯ ಎಸ್ ಎಸ್ ಮೈದಾನದಲ್ಲಿ ಬುಧವಾರ ತಮ್ಮ 75ನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ʼಅಮೃತ ಮಹೋತ್ಸವʼ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿಜೆಪಿಯವರು ಸೇಡಿನ ಮೂಲಕ ಇಂದು ಹಿಂದುತ್ವ, ಕೋಮುವಾದದ ಆಧಾರದಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಇಂದು ಆತಂಕದಿಂದ ಬದುಕು ಸಾಗಿಸುತ್ತಿದ್ದಾರೆ. ಆರೆಸ್ಸೆಸ್‌ನವರು ಒಂದು ನಾಯಕತ್ವ, ಒಂದು ಚಿಹ್ನೆ, ಒಂದು ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡವರು. ಇದನ್ನೇ ಹಿಟ್ಲರ್ ಕೂಡ ನಂಬಿಕೊಂಡಿದ್ದ. ಇಂದು ಸರ್ವಾಧಿಕಾರವನ್ನು ನಡೆಸಲು ಹೊರಟಿದ್ದಾರೆ. ಆ ಮೂಲಕ ಸಂವಿಧಾನವನ್ನು ನಾಶ ಮಾಡಲಿಕ್ಕೆ ಹೊರಟಿದ್ದಾರೆ. ಆದ್ದರಿಂದ ಸಂವಿಧಾನವನ್ನು ನಾವು ಉಳಿಸಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಎಲ್ಲ 224 ಕ್ಷೇತ್ರಗಳಿಂದ ದಾವಣಗೆರೆಗೆ ಬಂದ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿ ತಮ್ಮ ಮಾತು ಆರಂಭಿಸಿದ ಸಿದ್ದರಾಮಯ್ಯ, “ಸ್ವಾತಂತ್ರ್ಯ ದೊರಕಿ ಆಗಸ್ಟ್ 15ಕ್ಕೆ 75 ವರ್ಷಗಳು ತುಂಬುತ್ತಿದೆ. ಈ ವರ್ಷ ಇಡೀ ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ನಾಡಿನ ಎಲ್ಲ ಜನರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಾಶಯಗಳು” ಎಂದರು.

“ನಾನು ಮೂಲತಃ ಬೇರೆ ಪಕ್ಷದಿಂದ ಬಂದವನಾದರೂ ಕೂಡ ನಾನು ಮುಖ್ಯಮಂತ್ರಿಯಾಗಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಕಾರಣಕರ್ತರು. ನಾನು ಮುಖ್ಯಮಂತ್ರಿಯಾಗಿದ್ದಾಗ ಐದು ವರ್ಷಗಳ ಕಾಲ ಎಲ್ಲ ರೀತಿಯ ಸಹಕಾರವನ್ನು ಕೊಟ್ಟಿದ್ದಾರೆ ಎಂಬುದನ್ನು ನೆನಪಿಸುತ್ತೇನೆ. ಅವರ ಸಹಕಾರ ಮತ್ತು ಬೆಂಬಲಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ” ಎಂದು ಸಿದ್ದರಾಮಯ್ಯ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರನ್ನು ಉದ್ದೇಶಿಸಿ ಹೇಳಿದರು.

“ನಾನು ಈ ಹಿಂದೆ ಎಂದೂ ಕೂಡ ಹುಟ್ಟುಹಬ್ಬ ಆಚರಿಸಿಕೊಂಡವನಲ್ಲ. ನೀವು ಕಳೆದ 44 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದೀರಿ. ಹಾಗಾಗಿ ಆಚರಣೆ ಮಾಡಲಿಕ್ಕೆ ಒತ್ತಾಯ ಮಾಡಿದ್ದರು. ಅವರ ಒತ್ತಾಯಕ್ಕೆ ಮಣಿದು ಈ ಆಚರಣೆ ನಡೆಯುತ್ತಿದೆ. ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದು ಸಿದ್ದರಾಮಯ್ಯ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

“ಕಳೆದ 50 ವರ್ಷಗಳಿಂದ ಜನರ ನಡುವೆ ಇದ್ದೇನೆ. 1972ನೇ ಆಗಸ್ಟ್ ತಿಂಗಳಲ್ಲಿ ನಾನು ವಕೀಲನಾಗಿ ನೋಂದಣಿ ಮಾಡಿಕೊಂಡೆ. 1978ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯನಾದೆ. 1983ರಲ್ಲಿ ಶಾಸಕನಾದೆ. 1984ರಲ್ಲಿ ಮಂತ್ರಿಯಾದೆ. ಅಂದಿನಿಂದ ಇವತ್ತಿನವರೆಗೂ ನಿರಂತರವಾಗಿ ಜನರೊಂದಿಗೆ ಸಂಪರ್ಕ ಇಟ್ಟುಕೊಂಡು, ಜನಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ” ಎಂದು ಸಿದ್ದರಾಮಯ್ಯ ತಿಳಿಸಿದರು.

“ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಶಕ್ತಿಯೇ ಪ್ರಮುಖವಾದುದು. ಜನಶಕ್ತಿಯ ಆಶೀರ್ವಾದ ಇಲ್ಲದೇ ಹೋದರೆ ಯಾರೂ ಕೂಡ ದೀರ್ಘ ಕಾಲ ರಾಜಕೀಯದಲ್ಲಿರಲು ಸಾಧ್ಯವಿಲ್ಲ. ಜನ ನಿರಂತರವಾದ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದದಿಂದ ಇಂದು ಶಾಸಕನಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕನ್ನಡ ನಾಡಿನ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಇಡೀ ಕರ್ನಾಟಕದ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ಎಲ್ಲಿಯವರೆಗೆ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿ ಇರುತ್ತೇನೋ ಅಲ್ಲಿಯವರೆಗೆ ಸಕ್ರಿಯ ರಾಜಕಾರಣ ಮಾಡಿ, ಈ ನಾಡಿನ ಸೇವೆಯನ್ನು ಮಾಡಲಿದ್ದೇನೆ” ಎಂದು ಸಿದ್ದರಾಮಯ್ಯ ಇನ್ನೂ ಕರ್ನಾಟಕದ ರಾಜಕೀಯದಲ್ಲಿ ಇರಲಿದ್ದೇನೆ ಎಂಬ ಸ್ಪಷ್ಟ ಸಂದೇಶ ನೀಡಿದರು.

“ನನ್ನ ಮತ್ತು ಡಿ ಕೆ ಶಿವಕುಮಾರ್ ನಡುವೆ ಬಿರುಕಿದೆ. ನನ್ನ 75ನೇ ಹುಟ್ಟುಹಬ್ಬ ಆಚರಣೆ ಮಾಡೋದಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ವಿರೋಧವಿದೆ ಎಂದು ಗುಲ್ಲು ಹಬ್ಬಿಸಲಾಗಿದೆ. ಇದು ವಿರೋಧ ಪಕ್ಷದವರ ಭ್ರಮೆ. ಕೆಲ ಮಾಧ್ಯಮಗಳ ಸೃಷ್ಟಿ” ಎಂದು ಸಿದ್ದರಾಮಯ್ಯ ಹೇಳಿದರು.

“ನಮ್ಮಿಬ್ಬರ ನಡುವೆ ಯಾವುದೇ ಬಿರುಕಿಲ್ಲ. ನಾವು ಇಬ್ಬರೂ ಒಟ್ಟಾಗಿದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇವತ್ತು ನಮ್ಮ ಮುಂದೆ ಇರುವ ಸವಾಲು ಏನೆಂದರೆ, ಕರ್ನಾಟಕದಲ್ಲಿ ಭ್ರಷ್ಟ ಮತ್ತು ಕೋಮುವಾದಿ ಸರ್ಕಾರ ಇದೆ. ಜನಪೀಡಕ ಸರ್ಕಾರವನ್ನು ಕಿತ್ತೊಗೆದು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ” ಎಂದು ಸಿದ್ದರಾಮಯ್ಯ ತಿಳಿಸಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಬಿ ಕೆ ಹರಿ ಪ್ರಸಾದ್, ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿದ್ದರು.