ದ.ಕನ್ನಡದಲ್ಲಿ ನಿರಂತರ ನಡೆಯುತ್ತಿರುವ ಕೊಲೆ ಕೃತ್ಯಗಳು ಖಂಡನಾರ್ಹ: ಡಾ. ಮುಹಮ್ಮದ್ ಸಾದ್ ಬೆಳಗಾಮಿ

0
303

ಸನ್ಮಾರ್ಗ ವಾರ್ತೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಯುವಕರ ಕೊಲೆ ಮತ್ತು ಹಿಂಸಾಚಾರಗಳು ತೀವ್ರ ಖಂಡನೀಯ. ಸುಳ್ಯ ತಾಲೂಕಿನ ಬೆಳ್ಳಾರೆಯ ಮಸೂದ್, ಪ್ರವೀಣ ನಂತರ ಸುರತ್ಕಲ್‌ನ ಫಾಝಿಲ್ ಎಂಬವರ ಕೊಲೆಯು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಹಾಗೂ ಕೋಮು ಉದ್ವಿಗ್ನತೆಯ ಪರಿಣಾಮವಾಗಿದೆ. ಈ ಘಟನೆಗಳು ಕೆಲವು ತೀವ್ರವಾದಿ ಕೋಮು ಸಂಘಟನೆಗಳಿಗೆ ತಮ್ಮ ದ್ವೇಷದ ಮಾರುಕಟ್ಟೆಯನ್ನು ಜೀವಂತವಾಗಿಡಲು ಮುಕ್ತ ಅವಕಾಶ ದೊರೆತಂತಿದೆ. ಸರಕಾರ ಮತ್ತು ಆಡಳಿತ ವರ್ಗವು ಈ ಶಕ್ತಿಗಳನ್ನು ನಿಯಂತ್ರಿಸುವ ಬದಲು ಅನೇಕ ಸಂದರ್ಭಗಳಲ್ಲಿ ಮೌನ ಬೆಂಬಲ ಹಾಗೂ ಮುಕ್ತವಾಗಿ ಕಾರ್ಯಾಚರಿಸಲು ಅವಕಾಶ ನೀಡುತ್ತಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ.ಮುಹಮ್ಮದ್ ಸಾದ್ ಬೆಳಗಾಮಿ‌ರವರು ಆರೋಪಿಸಿದರು.

ಇಂತಹ ವಿಷಮ ಸಂದರ್ಭದಲ್ಲಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೊಲೆಗೀಡಾದ ಪ್ರವೀಣ್ ಕುಟುಂಬ ವರ್ಗವನ್ನು ಭೇಟಿಯಾಗಿ ಪರಿಹಾರ ಘೋಷಣೆ ಮಾಡಿದ್ದಾರೆ. ಇದು ಸ್ವಾಗತಾರ್ಹ. ಆದರೆ, ಹತ್ತಿರದಲ್ಲೇ ವಾಸಿಸುತ್ತಿರುವ ಮಸೂದ್‌ನ ಕುಟುಂಬ ಸದಸ್ಯರನ್ನು ಭೇಟಿಯಾಗದೇ ಇರುವುದು ಖೇದಕರ. ಅವರ ಈ ಪಕ್ಷಪಾತೀಯ ನಿಲುವು ಖಂಡನೀಯ ಎಂದರು.

ಸರಕಾರವು ಎಲ್ಲಾ ಸಮುದಾಯಗಳನ್ನು ಸಮಾನ ದೃಷ್ಟಿಯಲ್ಲಿ ಕಾಣಬೇಕು ಎಂದು ನಾವು ಆಗ್ರಹಿಸುತ್ತೇವೆ. ಇತರ ಸಂತ್ರಸ್ತ ಕುಟುಂಬಕ್ಕೂ ಪರಿಹಾರ ನೀಡಬೇಕು. ಕಾನೂನುಬಾಹಿರ ಕೃತ್ಯ ಹಾಗೂ ಅದರ ಹಿಂದಿರುವ ಶಕ್ತಿಗಳನ್ನು ಶೀಘ್ರವಾಗಿ ಬಂಧಿಸಿ ಶಾಂತಿ ಕಾಪಾಡಬೇಕು. ಅಪರಾಧಿಗಳ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕು. ಅಮಾಯಕರನ್ನು ಸತಾಯಿಸಬಾರದು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡಬಾರದು. ತಮ್ಮ ತುಚ್ಛ ರಾಜಕೀಯ ಲಾಭಕ್ಕಾಗಿ ಶಾಂತಿ, ಸಾಮರಸ್ಯ ಹಾಗೂ ಜನತೆಯ ನೆಮ್ಮದಿಯನ್ನು ಹಾಳು ಮಾಡುವ ಮತ್ತು ಕೋಮು ಉದ್ವಿಗ್ನತೆ ಉಂಟುಮಾಡುವ ಶಕ್ತಿಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು ಹಾಗೂ ಎಚ್ಚರಿಕೆಯಿಂದ ಇರಬೇಕೆಂದು ಅವರು ಕರೆ ನೀಡಿದ್ದಾರೆ.