ರಹಸ್ಯ ಕರ್ಮಗಳೆಂಬ ಅಮೂಲ್ಯ ರತ್ನಗಳು

0
196

✍️ ಟಿ. ಮುಹಮ್ಮದ್ ವೇಳಂ
ಬರಹಗಾರರು, ಭಾಷಣಕಾರರು ಮತ್ತು ಇಸ್ಲಾಮೀ ಚಿಂತಕರು

ರಹಸ್ಯಗಳಿಗೆ ಯಾವಾಗಲೂ ಮೌಲ್ಯ ಹೆಚ್ಚು. ಅದಕ್ಕಾಗಿಯೇ ರಹಸ್ಯವನ್ನು ಕಾಯ್ದುಕೊಳ್ಳದವರನ್ನು ನಾವು ಅಗ್ಗದವರಾಗಿ ನೋಡುತ್ತೇವೆ.

ನಮಗೆ ಬಹಿರಂಗ ಜೀವನವೂ ಇದೆ, ರಹಸ್ಯ ಜೀವನವೂ ಇದೆ. ಬಹಿರಂಗ ಜೀವನವು ಮನುಷ್ಯನ ಸಾಮಾಜಿಕತೆಯನ್ನು ಸಾಧ್ಯವಾಗಿಸುತ್ತದೆ. ಅದಕ್ಕಾಗಿಯೇ ಇಸ್ಲಾಮಿನಲ್ಲಿ ಕಡ್ಡಾಯ ಕರ್ಮಗಳನ್ನು ಬಹಿರಂಗವಾಗಿ ನಿರ್ವಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಅದಕ್ಕೆ ದೊಡ್ಡ ಪುಣ್ಯವಿದೆ ಎಂದು ಪರಿಗಣಿಸಲಾಗುತ್ತದೆ. ಕಡ್ಡಾಯ ನಮಾಝ್ ಅನ್ನು ಬಹಿರಂಗವಾಗಿ ಸಾಮೂಹಿಕವಾಗಿ ನಿರ್ವಹಿಸುವುದು ಪುಣ್ಯವಾಗಿದೆ. ಹಜ್ ಮತ್ತು ಝಕಾತ್ ಕೂಡ ಸಂಘಟಿತವಾಗಿ ಮತ್ತು ಬಹಿರಂಗವಾಗಿ ಮಾತ್ರ ನಿರ್ವಹಿಸಲು ಸಾಧ್ಯ. ಝಕಾತ್ ಸಂಘಟಿತವಾಗಿದೆ. ಕಡ್ಡಾಯ ಅನುಷ್ಠಾನಗಳಲ್ಲಿ ಸ್ವಯಂಪ್ರೇರಿತ ಹಾಗೂ ಖಾಸಗಿಯಾದ ಅನುಷ್ಠಾನವೆಂದರೆ ಉಪವಾಸ. ಅದಕ್ಕಾಗಿಯೇ “ಉಪವಾಸವು ನನಗಾಗಿಯೇ ಇದೆ, ನಾನೇ ಅದಕ್ಕೆ ಪ್ರತಿಫಲ ನೀಡುತ್ತೇನೆ” ಎಂದು ಅಲ್ಲಾಹನು ಹೇಳಿರುವುದು. ಆದಾಗ್ಯೂ, ಎಲ್ಲಾ ಸತ್ಯವಿಶ್ವಾಸಿಗಳೂ ಒಂದೇ ಅವಧಿಯಲ್ಲಿ ಉಪವಾಸ ಆಚರಿಸುತ್ತಾರೆ. ಉಪವಾಸ ಪ್ರಾರಂಭವಾಗುವುದೂ ಮುಕ್ತಾಯಗೊಳ್ಳುವುದೂ ಒಂದೇ ಸಮಯದಲ್ಲಿ.

ಮನುಷ್ಯನಿಗೆ ಸಾಮಾಜಿಕ ರಂಗ ಮಾತ್ರವಲ್ಲ, ಸಾಮಾಜಿಕತೆಯಿಂದ ದೂರವಿರುವ ಆಂತರಿಕ ರಂಗವೂ ಇದೆ. ಇದರ ಭಾಗವಾಗಿಯೇ ಐಚ್ಛಿಕ ಕರ್ಮಗಳನ್ನು ಒಂಟಿಯಾಗಿಯೂ ರಹಸ್ಯವಾಗಿಯೂ ಮಾಡುವುದನ್ನು ಇಸ್ಲಾಮ್‌ ಪ್ರೋತ್ಸಾಹಿಸುವುದು. ಸುನ್ನತ್ ನಮಾಝ್‌ಗಳು ಸಾಮಾನ್ಯವಾಗಿ ಸಂಘಟಿತವಾಗಿರುವುದಿಲ್ಲ. ಮಸೀದಿಯಲ್ಲಿ ಆ ನಮಾಝ್ ಮಾಡುವುದಕ್ಕಿಂತ ಮನೆಯಲ್ಲಿ ಮಾಡುವುದು ಹೆಚ್ಚು ಉತ್ತಮ.

ಒಬ್ಬ ವಿಶ್ವಾಸಿಗೂ ಅವನ ಸೃಷ್ಟಿಕರ್ತನ ನಡುವೆ ಮಾತ್ರವೇ ಇರುವಂತಹ ಕೆಲವು ಅನುಷ್ಠಾನಗಳು ವಿಶ್ವಾಸಿಯಲ್ಲಿ ಇರಬೇಕಾಗುತ್ತದೆ. ಆದ್ದರಿಂದಲೇ ಕೆಲವು ಪಂಡಿತರು ರಹಸ್ಯ ಕರ್ಮಗಳನ್ನು ಗುಡಾರವನ್ನು ಹಿಡಿದಿಡುವ ಮೊಳೆಗೆ ಹೋಲಿಸಿದ್ದಾರೆ. ಆ ಬಲದಲ್ಲಿಯೇ ಒಬ್ಬ ವ್ಯಕ್ತಿಯ ಇಸ್ಲಾಮೀ ಜೀವನದ ಗುಡಾರವು ಗಾಳಿಯಲ್ಲಿ ಹಾರಿಹೋಗದೆ ಸ್ಥಿರವಾಗಿ ನಿಲ್ಲುವುದು. ಬಾಹ್ಯ ಪ್ರಪಂಚ ವಿಸ್ತಾರವಾಗುವುದು ಮಾತ್ರವಲ್ಲ, ಆಂತರಿಕ ಪ್ರಪಂಚ ಬಲವಾಗುವುದು ಕೂಡ ಮುಖ್ಯವಾಗಿದೆ.

ಪಂಡಿತರು ಹೇಳುತ್ತಾರೆ, ಪ್ರತಿಯೊಬ್ಬ ಮನುಷ್ಯನಲ್ಲೂ ರಹಸ್ಯವಾದ ಪಾಪಗಳು ಇದ್ದೇ ಇರುತ್ತವೆ. ಅವೆಲ್ಲವೂ ನಮ್ಮ ಪಾಪಪುಣ್ಯಗಳ ಪಟ್ಟಿಯಲ್ಲಿ ದಾಖಲಾಗುತ್ತದೆ. ಸೂರಾ ಯಾಸೀನ್ (12) ನಲ್ಲಿಯೂ ಅದರ ಉಲ್ಲೇಖ ಇದೆ.

ರಹಸ್ಯ ಕಾರ್ಯಗಳ ಮೂಲಕವೇ ರೂಪುಗೊಳ್ಳುವ ಒಂದು ಸಾಮಾಜಿಕತೆಯೂ ಇದೆ. ಆಂತರಿಕ ಆಧ್ಯಾತ್ಮಿಕತೆಯನ್ನು ಮಾತ್ರವಾಗಿ ಉಳಿಸದೆ, ಆ ಸಾಮಾಜಿಕತೆಯು ಬೆಳೆದುಬರುವ ಅನುಭವವಾಗಿದೆ ಇಸ್ಲಾಮಿನಲ್ಲಿರುವುದು. ಕಾರ್ಯಗಳನ್ನು ಸಂಘಟಿತವಾಗಿಯೂ ಬಹಿರಂಗವಾಗಿಯೂ ನಿರ್ವಹಿಸುವುದು ಎಷ್ಟು ಪ್ರಮುಖವೋ, ಅದಕ್ಕೆ ಸಾಮಾಜಿಕ ಮಹತ್ವ ಮಾತ್ರವಲ್ಲ ಆಧ್ಯಾತ್ಮಿಕ ಪ್ರಾಮುಖ್ಯತೆಯೂ ಇದೆ. ಏಕೆಂದರೆ, ಅಲ್ಲಾಹನು ನಮ್ಮ ಕಾರ್ಯಗಳನ್ನು ಮಾತ್ರವಲ್ಲ, ಕಾರ್ಯಗಳ ಫಲಗಳನ್ನು ಕೂಡ ದಾಖಲಿಸುತ್ತಾನೆ. ನಮ್ಮ ಕರ್ಮಗಳು ಸಮಾಜದಲ್ಲೂ ಇತಿಹಾಸದಲ್ಲೂ ಎಷ್ಟೆಲ್ಲಾ ಫಲಗಳನ್ನು ಉಂಟುಮಾಡಿದೆಯೋ, ಅವೆಲ್ಲವೂ ಮನುಷ್ಯನ ರಹಸ್ಯವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯಕ್ಕೆ ಸಂಬಂಧಿಸಿವೆ. ಈ ಸಾಮರ್ಥ್ಯವನ್ನು ಒಳಿತಿಗಾಗಿಯೂ ಕೆಡುಕಿಗಾಗಿಯೂ ಉಪಯೋಗಿಸಬಹುದು.

ರಹಸ್ಯ ಜೀವನ ಮತ್ತು ಬಹಿರಂಗ ಜೀವನದ ನಡುವಿನ ಸಂಬಂಧದ ಆಧಾರದಲ್ಲಿ ಪಂಡಿತರು ವಿಶ್ವಾಸಿಗಳನ್ನು ಮೂರು ಭಾಗಗಳಾಗಿ ವಿಂಗಡಿಸುತ್ತಾರೆ:

  1. ಬಹಿರಂಗ ಜೀವನಕ್ಕಿಂತ ಕೆಟ್ಟದಾದ ರಹಸ್ಯ ಜೀವನ. ಇದು ಕಪಟತನ.
  2. ರಹಸ್ಯ ಜೀವನವೂ ಬಹಿರಂಗ ಜೀವನವೂ ಒಂದೇ ರೀತಿ ಇರುವುದು. ಇದು ನಿಷ್ಠೆಯಾಗಿದೆ.
  3. ಬಹಿರಂಗ ಜೀವನಕ್ಕಿಂತಲೂ ಶ್ರೇಷ್ಠವಾದ ರಹಸ್ಯ ಜೀವನ. ಇದು ಇಹ್ಸಾನ್.

ಉನ್ನತ ಆಧ್ಯಾತ್ಮಿಕತೆಯನ್ನು ಸೂಚಿಸುವ ಇಸ್ಲಾಮ್‌ನ ಪಾರಿಭಾಷಿಕ ಪದವೇ ‘ಇಹ್ಸಾನ್’. ಈ ಅವಸ್ಥೆಯಲ್ಲಿರುವವರು ದೇವನಿಗೆ ಅತ್ಯಂತ ಹತ್ತಿರದವರಾಗಿರುತ್ತಾರೆ. ಅವರೇ ದೇವನ ಮಿತ್ರರು (ಔಲಿಯಾಗಳು). ಇದು ಪ್ರತಿಯೊಬ್ಬ ವಿಶ್ವಾಸಿಗೂ ಆಂತರಿಕ ಶ್ರಮದಿಂದಲೂ ದೈವಿಕ ಕೃಪೆಯಿಂದಲೂ ತಲುಪಬಹುದಾದ ಅವಸ್ಥೆಯಾಗಿದೆ. ಆದರೆ ವಲಿಗಳಾಗುವುದು ಎಂದರೆ ಅದ್ಭುತಗಳನ್ನು ತೋರಿಸುವುದು ಎಂದಲ್ಲ. ಪ್ರತಿಯೊಬ್ಬ ವಿಶ್ವಾಸಿಯೂ ತನ್ನ ಆಂತರಿಕ ಶುದ್ಧತೆಗಾಗಿ ಪರಿಶ್ರಮಿಸಬೇಕಾಗಿದೆ.

ವಿಶ್ವಾಸಿಯಾಗಿ ಜೀವಿಸಲು ಸಾಧ್ಯವಾದರೆ ತಲುಪಬೇಕಾದ ಗುರಿ ಇದಾಗಿದೆ. ಅದು ನಿರಂತರವಾದ ಆಧ್ಯಾತ್ಮಿಕ ಹಾಗೂ ಬಾಹ್ಯ ಶ್ರಮವಾಗಿದೆ. ರಹಸ್ಯ ಪುಣ್ಯಗಳನ್ನು ಮೂರು ರೀತಿಯಲ್ಲಿ ಮಾಡಬಹುದು:

  • ನಮಗೂ ಅಲ್ಲಾಹನಿಗೆ ಮಾತ್ರವೇ ಗೊತ್ತಿರುವ ಒಳಿತುಗಳು.
  • ರಾತ್ರಿಯ ಏಕಾಂತದಲ್ಲಿ ಮಾಡುವ ನಮಾಝ್, ಧ್ಯಾನ್ಯ (ಝಿಕ್ರ್)ಗಳು.
  • ಫಲಾನುಭವಿಗೆ ಕೂಡ ತಿಳಿಯದಂತೆ ಅವರಿಗೆ ನೀಡುವ ಸಹಾಯಗಳು.

ಬಹಿರಂಗವಾಗಿಯೂ ಭಾಗಶಃ ರಹಸ್ಯವಾಗಿಯೂ ನಾವು ಮಾಡುವ ಒಂದು ಸಹಾಯ ಅಥವಾ ಉಪಕಾರವು ಫಲ ನೀಡುತ್ತದೆ. ಅದು ಸಮಾಜದ ಮುಂದೆ ಬಹಿರಂಗವಾದ ಕರ್ಮವಾಗಿದೆ. ಆದರೆ, ಅದರಲ್ಲಿಯೂ ನಾವು ರಹಸ್ಯವಾಗಿಡಬೇಕಾದದ್ದು ನಮ್ಮ ಮನಸ್ಸಿನ ಕರ್ಮವಾಗಿದೆ. ಕರ್ಮವು ಸ್ವಾಭಾವಿಕವಾಗಿ ರಹಸ್ಯವಾಗುವುದು ಮಾತ್ರವಲ್ಲ, ಪ್ರಜ್ಞಾಪೂರ್ವಕವಾಗಿ ರಹಸ್ಯವಾಗಿಡುವುದು ಕೂಡ ಪ್ರಮುಖವಾಗಿದೆ.

ಪ್ರವಾದಿ(ಸ) ಹೇಳುತ್ತಾರೆ: “ನಾಳೆ ಪರಲೋಕದಲ್ಲಿ ಅಲ್ಲಾಹನ ನೆರಳು ಮಾತ್ರ ಇರುವ ದಿನದಂದು, ಬಲಗೈ ನೀಡಿದ್ದನ್ನು ಎಡಗೈಗೆ ತಿಳಿಯದಂತೆ ರಹಸ್ಯವಾಗಿ ದಾನ ಮಾಡಿದವನಿಗೆ ಅಲ್ಲಾಹನು ತನ್ನ ಸಿಂಹಾಸನದ ನೆರಳನ್ನು ನೀಡುವನು.”

ಪ್ರವಾದಿ(ಸ) ಇಲ್ಲಿ ಬಳಸಿದ ಪದ ರಹಸ್ಯವಾಗಿಡುವುದು ಎಂದಾಗಿದೆ.

ಅಜ್ಞಾತವಾಗಿ ಗುಹೆಯಲ್ಲಿ ಸಿಲುಕಿಕೊಂಡ ಮೂರು ಜನರ ಕಥೆಯನ್ನು ಪ್ರವಾದಿ(ಸ) ಹೇಳುತ್ತಾರೆ. ದೊಡ್ಡ ಬಂಡೆಯೊಂದು ಬಂದು ಗುಹೆಯ ಬಾಯಿಯನ್ನು ಮುಚ್ಚಿತು. ಅವರು ಆಂತರಿಕವಾಗಿ ಪ್ರಾರ್ಥಿಸಿದರು. ಆಗ ಅವರಲ್ಲೊಬ್ಬನು ತಾನು ಅತ್ಯಂತ ಗುಪ್ತವಾಗಿ, ಕೇವಲ ಅಲ್ಲಾಹನ ತೃಪ್ತಿಗಾಗಿ ಮಾಡಿದ ಅತ್ಯಂತ ರಹಸ್ಯವಾದ ಕರ್ಮವನ್ನು ಮುಂದಿಟ್ಟು ಅಲ್ಲಾಹನಲ್ಲಿ ಸಹಾಯ ಕೇಳಿದನು. ಬಂಡೆಯು ಸ್ವಲ್ಪ ಜಾರಿತು. ಎರಡನೆಯವನೂ ಅದೇ ರೀತಿ ಅತ್ಯಂತ ರಹಸ್ಯವಾದ, ಕೇವಲ ದೇವನಿಗಾಗಿ ಮಾಡಿದ ಕರ್ಮವನ್ನು ಮುಂದಿಟ್ಟು ಪ್ರಾರ್ಥಿಸಿದನು. ಆಗಲೂ ಅವರಿಗೆ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಮೂರನೆಯವನೂ ತನ್ನ ಅತ್ಯಂತ ರಹಸ್ಯವಾದ ಕರ್ಮವನ್ನು ಮುಂದಿಟ್ಟು ಅಲ್ಲಾಹನಲ್ಲಿ ಬೇಡಿದನು. ಕಲ್ಲು ಪೂರ್ತಿಯಾಗಿ ಜಾರಿಹೋಯಿತು. ಅವರು ಹೊರಗೆ ಬಂದರು. ಈ ಮೂರು ಕರ್ಮಗಳೂ ಗುಣಮಟ್ಟವಿರುವ ಕರ್ಮಗಳಾಗಿದ್ದವು. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಆ ಮೂರು ಕರ್ಮಗಳು ಪಡೆದಿದ್ದ ಗುಣವೆಂದರೆ, ಅಲ್ಲಾಹನ ಹೊರತು ಬೇರೆ ಯಾರಿಗೂ ಆ ವಿಷಯ ತಿಳಿದಿರಲಿಲ್ಲ ಎಂಬುವುದಾಗಿದೆ.

ಒಬ್ಬ ವ್ಯಕ್ತಿ ಅತ್ಯಂತ ರಹಸ್ಯವಾಗಿ ಕೋಟಿಗಟ್ಟಲೆ ಹಣ ದಾನ ಮಾಡುವುದು ರಹಸ್ಯ ಕರ್ಮಗಳ ಒಂದು ರೂಪವಾಗಿದೆ.

ಮತ್ತೊಂದು ವಿಷಯವೆಂದರೆ, ಕರ್ಮವನ್ನು ಮಾಡಿದ ನಂತರ ನಾವು ಅದಕ್ಕೊಂದು ನಿರ್ವಿಕಾರತೆಯನ್ನು ಕಾಯ್ದುಕೊಳ್ಳುವುದು. ಅಂದರೆ, ಕರ್ಮದ ಬಗ್ಗೆ ಬೇರೆಯವರ ಪ್ರತಿಕ್ರಿಯೆಯನ್ನು ನಿರೀಕ್ಷಿಸದಿರುವುದು. ಇದು ಅತ್ಯಂತ ವಿಶೇಷವಾದ ಒಂದು ಮಾನಸಿಕ ಅವಸ್ಥೆಯಾಗಿದೆ. ಕರ್ಮವನ್ನು ಮಾಡಿದ ಮೇಲೆಯೂ ಅದರ ಬಗ್ಗೆ ಯೋಚಿಸುತ್ತಾ, ಆ ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದರೆ, ಕರ್ಮದ ತಕ್ಷಣದ ಪ್ರತಿಕ್ರಿಯೆಗಳು ಸಿಗಬೇಕು ಎಂದು ನಾವು ಬಯಸುತ್ತಿದ್ದೇವೆ ಎಂದರ್ಥ. ಅದು ಸಿಗದೇ ಇದ್ದಾಗ ನಿರಾಶೆಯಾಗುತ್ತದೆ. ಈ ನಿರಾಶೆಯೂ ಕರ್ಮದ ನಂತರ ನಾವು ಅದಕ್ಕೆ ಸಂಪರ್ಕ ರಹಿತರಾಗದಿರುವುದರ (ಡಿಟ್ಯಾಚ್ ಆಗದಿರುವುದರ) ಲಕ್ಷಣವಾಗಿದೆ.

ಕರ್ಮವು ಎಷ್ಟೇ ದೊಡ್ಡದಾಗಿದ್ದರೂ ಅದರ ಉದ್ದೇಶವು ಕೇವಲ ದೇವಪ್ರಿಯತೆಯಾಗಿರಲಿ. ನಮ್ಮ ಸತ್ಕಾರ್ಯಗಳ ರಹಸ್ಯವು ಕೊನೆಯವರೆಗೂ ರಹಸ್ಯವಾಗಿಯೇ ಉಳಿಯಲಿ. ಅವುಗಳನ್ನು ನಾಟಕೀಯವಾಗಿ ಪ್ರದರ್ಶಿಸದೆ, ಕೇವಲ ಸೃಷ್ಟಿಕರ್ತನ ತೃಪ್ತಿಗಾಗಿ ಮೀಸಲಾಗಿಡುವುದೇ ನೈಜ ಇಹ್ಸಾನ್. ರಹಸ್ಯ ಕರ್ಮದ ಮೂರನೇ ರೂಪವೆಂದರೆ, ಕರ್ಮವು ಎಷ್ಟೇ ದೊಡ್ಡದಾಗಿದ್ದರೂ ಅದರ ಉದ್ದೇಶವನ್ನು ಅತ್ಯುತ್ತಮವಾಗಿಸುವುದು. ಪ್ರತಿಯೊಂದು ಸತ್ಕರ್ಮದ ಲೋಕವೂ ನಮಗೂ ಅಲ್ಲಾಹನಿಗೂ ಮಧ್ಯದಲ್ಲಿ ಮಾತ್ರವೇ ಇರಬೇಕು. ಅದನ್ನಷ್ಟೇ ಅತ್ಯುತ್ತಮವಾಗಿಸಲು ಸಾಧ್ಯ. ರಹಸ್ಯಗಳು ರಹಸ್ಯಗಳಾಗಿಯೇ ಇರಬೇಕು. ಅದಕ್ಕೆ ಸಂಬಂಧಪಡದವರು ಅದನ್ನು ಬಹಿರಂಗಪಡಿಸಲು ಶ್ರಮಿಸಬಾರದು, ಅಥವಾ ಅದನ್ನು ನಾಟಕೀಯವಾಗಿ ಪ್ರದರ್ಶಿಸಿ ರಂಜಿಸಬಾರದು.