ಕಳೆದುಹೋದ ವಿವೇಕದ ಮರುಶೋಧಕ: ಸಯ್ಯಿದ್ ಮುಹಮ್ಮದ್ ನಖೀಬ್ ಅಲ್-ಅತ್ತಾಸ್ 

0
294

✍️ ಡಾ. ಮುನೀರ್ ಮುಹಮ್ಮದ್ ರಫೀಕ್

ಸಯ್ಯದ್ ಮುಹಮ್ಮದ್ ನಖೀಬ್ ಅಲ್-ಅತ್ತಾಸ್ ರವರು ಮಾರ್ಚ್‌ 8 (2026) ರಂದು ತನ್ನ 94 ವಯಸ್ಸಿನಲ್ಲಿ ನಿಧನರಾದರು. ಇದು ಆಧುನಿಕ ಇಸ್ಲಾಮಿಕ್ ಚಿಂತನೆಯ ಒಂದು ಅನನ್ಯ ಅಧ್ಯಾಯದ ಅಂತ್ಯ. ಸಯ್ಯದ್ ಅಲ್-ಅತ್ತಾಸ್ ಕೇವಲ ದಾರ್ಶನಿಕ, ಶಿಕ್ಷಣತಜ್ಞ ಅಥವಾ ಆಧ್ಯಾತ್ಮವಾದಿ ಎಂಬ ಬಿರುದುಗಳಿಗೆ ಸೀಮಿತರಾದವರಲ್ಲ. ಇಂದಿನ ದಿನಗಳಲ್ಲಿ ಇಂತಹ ಇಸ್ಲಾಮಿಕ್ ಚಿಂತಕರು ಅಪರೂಪ. ಆಧುನಿಕ ನಾಗರಿಕತೆಯು ಸೃಷ್ಟಿಸಿರುವ ಬಿಕ್ಕಟ್ಟುಗಳನ್ನು ಆಳವಾಗಿ ಅರ್ಥಮಾಡಿಕೊಂಡಿದ್ದ ವಿದ್ವಾಂಸರಾಗಿದ್ದರು. ಅನೇಕರು ಆಧುನಿಕತೆಯ ಬಿಕ್ಕಟ್ಟನ್ನು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ದೃಷ್ಟಿಕೋನಗಳಿಂದ ವ್ಯಾಖ್ಯಾನಿಸಿದರೆ, ಅತ್ತಾಸ್ ರವರ ವಿಶ್ಲೇಷಣೆ ಸಮಸ್ಯೆಯ ಮೂಲವನ್ನೇ ಸ್ಪರ್ಶಿಸಿತ್ತು. ಮನುಷ್ಯನ ಆತ್ಮದಲ್ಲಿನ ಅರ್ಥಹೀನತೆ, ಜ್ಞಾನದ ಭ್ರಷ್ಟತೆ ಮತ್ತು ಸರಿಯಾದ ಕ್ರಮದ ಕೊರತೆಯೇ ಈ ಬಿಕ್ಕಟ್ಟಿಗೆ ಮೂಲ ಕಾರಣ ಎಂದು ಅವರು ವಾದಿಸಿದರು.

ಅತ್ತಾಸ್ ಕೇವಲ ದಾರ್ಶನಿಕರಾಗಿರದೆ, ‘ವಿಚಾರಗಳ ವೈದ್ಯ’ (Healer of Ideas) ಕೂಡ ಆಗಿದ್ದರು. ಅತ್ತಾಸ್ ಅವರ ದೃಷ್ಟಿಯಲ್ಲಿ, ಆಧುನಿಕ ಜಗತ್ತು ಮಾಹಿತಿಯಲ್ಲಿ ಶ್ರೀಮಂತವಾಗಿದ್ದರೂ ತನ್ನ ವಿವೇಕವನ್ನು ಕಳೆದುಕೊಂಡಿತ್ತು. ಮುಸ್ಲಿಂ ಜಗತ್ತು ಕೇವಲ ಅಧಿಕಾರದ ದೌರ್ಬಲ್ಯದಿಂದ ಮಾತ್ರವಲ್ಲದೆ ವಿಚಾರಗಳು, ಭಾಷೆ ಮತ್ತು ಉದ್ದೇಶಗಳ ಬಗ್ಗೆ ಇರುವ ಗೊಂದಲದಿಂದಾಗಿ ಹಿಂದೆ ಬಿದ್ದಿದೆ ಎಂದು ಅವರು ಗಮನಿಸಿದ್ದರು. ಸ್ಪಷ್ಟತೆಯನ್ನು ಶೋಧಿಸುವುದು, ವ್ಯವಸ್ಥೆಯನ್ನು ಸರಿಪಡಿಸುವುದು ಮತ್ತು ಕಳೆದುಹೋದ ವಿವೇಕವನ್ನು ಮರಳಿ ತರುವುದೇ ಅತ್ತಾಸ್ ಅವರ ಜೀವನದ ಉದ್ದೇಶವಾಗಿತ್ತು.

ಅತ್ತಾಸ್ ಅವರು ಸೆಪ್ಟೆಂಬರ್ 5, 1931 ರಂದು ಇಂಡೊನೇಷ್ಯಾದ ಜಾವಾ ದ್ವೀಪದ ಬೋಗೋರ್‌ನ ಹಲ್ರಾಮಿ ಕುಟುಂಬದಲ್ಲಿ ಜನಿಸಿದರು. ಇದು ಧಾರ್ಮಿಕ ಶಿಕ್ಷಣ, ಆಧ್ಯಾತ್ಮ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಕುಟುಂಬವಾಗಿತ್ತು. ಇಸ್ಲಾಮಿಕ್ ಸಂಸ್ಕೃತಿಯಿಂದ ಕೂಡಿದ ಬಾ-ಅಲವಿ ಕುಟುಂಬದ ವಾತಾವರಣವು ಅತ್ತಾಸ್ ಅವರ ಆಧ್ಯಾತ್ಮಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಎರಡನೇ ಮಹಾಯುದ್ಧದ ನಂತರ, ಅತ್ತಾಸ್ ಮಲೇಷ್ಯಾದ ಜೊಹೋರ್‌ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಿದರು ಮತ್ತು ಮಲಯ-ಇಸ್ಲಾಮಿಕ್ ಸಂಪ್ರದಾಯ ಹಾಗೂ ಪಾಶ್ಚಾತ್ಯ ಚಿಂತನೆಗಳೆರಡನ್ನೂ ಅಭ್ಯಾಸ ಮಾಡಿದರು. ಈ ಆರಂಭಿಕ ಅಧ್ಯಯನವು ಅತ್ತಾಸ್ ಅವರಿಗೆ ಪಾಶ್ಚಾತ್ಯ ಚಿಂತನೆಗಳನ್ನು ಒಳಗಿನಿಂದ ಅರ್ಥಮಾಡಿಕೊಳ್ಳಲು ಮತ್ತು ಅದೇ ಸಮಯದಲ್ಲಿ ಇಸ್ಲಾಮಿಕ್ ಬೌದ್ಧಿಕ ಸಂಪ್ರದಾಯದಲ್ಲಿ ದೃಢವಾಗಿ ಬೇರೂರಲು ಅನುವು ಮಾಡಿಕೊಟ್ಟಿತು.

1951 ರಲ್ಲಿ, ಅವರು ಬ್ರಿಟನ್‌ನ ರಾಯಲ್ ಮಿಲಿಟರಿ ಅಕಾಡೆಮಿಗೆ ಸೇರಿ ಮಿಲಿಟರಿ ತರಬೇತಿ ಪಡೆದರು, ಇದು ಅವರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ತಂದಿತು. ಮಿಲಿಟರಿ ತರಬೇತಿಯು ಅತ್ತಾಸ್ ಅವರಲ್ಲಿ ಶಿಸ್ತು ಮತ್ತು ಗಂಭೀರತೆಯನ್ನು ತುಂಬಿತು. ನಂತರದ ದಿನಗಳಲ್ಲಿ, ಈ ತರಬೇತಿಯು ಅತ್ತಾಸ್ ಒಬ್ಬ ಚಿಂತಕನಾಗಿ ರೂಪುಗೊಳ್ಳುವಲ್ಲಿ ಪ್ರಭಾವ ಬೀರಿತು. ಸ್ಪೇನ್ ಮತ್ತು ಉತ್ತರ ಆಫ್ರಿಕಾದ ದೇಶಗಳಿಗೆ ಅವರು ಕೈಗೊಂಡ ಪ್ರವಾಸಗಳು ಇಸ್ಲಾಮಿಕ್ ನಾಗರಿಕತೆಯ ಬಗ್ಗೆ ಆಳವಾಗಿ ಯೋಚಿಸಲು ಪ್ರೇರೇಪಿಸಿದವು. ನಾಗರಿಕತೆಯ ಬಲವು ರಾಜಕೀಯ ಪ್ರಾಬಲ್ಯದಲ್ಲಿಲ್ಲ, ಬದಲಿಗೆ ಅದು ಎತ್ತಿ ಹಿಡಿಯುವ ವಿಚಾರಗಳಲ್ಲಿದೆ ಎಂದು ಅವರು ಅರಿತುಕೊಂಡರು. ಸೈನ್ಯಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಜ್ಞಾನದ ಹಾದಿಗೆ ಮರಳಿದ್ದು ಅತ್ತಾಸ್ ಅವರ ವೈಯಕ್ತಿಕ ಜೀವನದ ಬೆಳವಣಿಗೆಗೆ ಮಾತ್ರವಲ್ಲದೆ, ಆಧುನಿಕ ಇಸ್ಲಾಮಿಕ್ ಚಿಂತನೆಯ ವಿಕಾಸಕ್ಕೂ ಕಾರಣವಾಯಿತು.

ಸಿಂಗಾಪುರದ ಮಲಯಾ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣವನ್ನು ಮತ್ತು ಕೆನಡಾದ ಪ್ರತಿಷ್ಠಿತ ಮೆಕ್ಗಿಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪೂರೈಸಿದರು. ಅಲ್ಲಿ ಫಜಲೂರ್ ರಹಮಾನ್ ಮತ್ತು ತೋಷಿಕೋ ಇಜುಟ್ಸು ಅವರಂತಹ ಪ್ರಮುಖ ವಿದ್ವಾಂಸರ ಮಾರ್ಗದರ್ಶನದಲ್ಲಿ ಇಸ್ಲಾಮಿಕ್ ತತ್ವಶಾಸ್ತ್ರ ಮತ್ತು ಸೂಫಿ ಸಂಪ್ರದಾಯದಲ್ಲಿ ಎಂ.ಎ ಪದವಿ ಪಡೆದರು. ನಂತರ ಲಂಡನ್‌ನ ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್ (SOAS) ನಿಂದ ಡಾಕ್ಟರೇಟ್ ಪಡೆದರು. ಆರ್ಥರ್ ಅರ್ಬರಿ ಮತ್ತು ಮಾರ್ಟಿನ್ ಲಿಂಗ್ಸ್ ಅವರಂತಹ ಪ್ರಸಿದ್ಧ ವಿದ್ವಾಂಸರ ಅಡಿಯಲ್ಲಿ ಪಿಎಚ್.ಡಿ ಅಧ್ಯಯನ ಮಾಡಿದರು. ಪ್ರಸಿದ್ಧ ಮಲಯ ಸೂಫಿ ಕವಿ ಹಮ್ಜಾ ಫನ್ಸೂರಿ ಬಗ್ಗೆ ಅವರು ನಡೆಸಿದ ಸಂಶೋಧನೆಯು (The Mysticism of Hamzah Fansuri) ಮಲಯ ಸೂಫಿ ಸಂಪ್ರದಾಯಕ್ಕೆ ಮಹತ್ವದ ಕೊಡುಗೆಯಾಗಿದೆ. ಈ ಕೃತಿಯು ಕೇವಲ ಮಲೇಶಿಯನ್ ಸೂಫಿ ಸಂಪ್ರದಾಯಕ್ಕೆ ಮರುಜೀವ ನೀಡಿದ ಅಧ್ಯಯನ ಮಾತ್ರವಲ್ಲದೆ, ಮಲಯ ಮುಸ್ಲಿಮರು ಇಸ್ಲಾಮಿಕ್ ಬೌದ್ಧಿಕ ಸಂಪ್ರದಾಯದಲ್ಲಿ ಶ್ರೀಮಂತರಾಗಿದ್ದಾರೆ ಎಂಬ ಘೋಷಣೆಯೂ ಆಗಿತ್ತು. ಪ್ರಾಚೀನ ಮಲಯ ಹಸ್ತಪ್ರತಿಗಳು ಮತ್ತು ಮಲಯ ಇಸ್ಲಾಮಿಕ್ ಕ್ಯಾಲೆಂಡರ್ ಕುರಿತ ಅತ್ತಾಸ್ ಅವರ ಅಧ್ಯಯನಗಳು ಆಗ್ನೇಯ ಏಷ್ಯಾದ ದೇಶಗಳಲ್ಲಿನ ಇಸ್ಲಾಮಿನ ಬೌದ್ಧಿಕ ಪರಂಪರೆಯನ್ನು ಎತ್ತಿ ತೋರಿಸುತ್ತವೆ.

ಮಲೇಷ್ಯಾಕ್ಕೆ ಮರಳಿದ ನಂತರ, ಅತ್ತಾಸ್ ಅವರು ಮಲಯಾ ವಿಶ್ವವಿದ್ಯಾಲಯ ಮತ್ತು ನ್ಯಾಷನಲ್ ಯೂನಿವರ್ಸಿಟಿಯಲ್ಲಿ (UKM) ಶೈಕ್ಷಣಿಕ ಹುದ್ದೆಗಳನ್ನು ಅಲಂಕರಿಸಿದರು. ಪ್ರಾಧ್ಯಾಪಕರಾಗಿ ಮತ್ತು ಆಡಳಿತಗಾರರಾಗಿ, ಅವರು ಮಲಯ ಭಾಷೆಯನ್ನು ಜ್ಞಾನ ಮತ್ತು ಕಲಿಕೆಯ ಭಾಷೆಯನ್ನಾಗಿ ಮಾಡಲು ಶ್ರಮಿಸಿದರು. ಭಾಷೆಯು ಒಂದು ನಾಗರಿಕತೆಯ ವಿಶ್ವದೃಷ್ಟಿ ಮತ್ತು ನೆನಪುಗಳನ್ನು ಹೊತ್ತು ತರುತ್ತದೆ ಎಂದು ಅತ್ತಾಸ್ ಬೆಟ್ಟು ಮಾಡಿದರು. ಭಾಷೆಯ ದೌರ್ಬಲ್ಯ ಎಂದರೆ ಒಂದು ಜನಾಂಗದ ಬೌದ್ಧಿಕ ಸ್ವಾತಂತ್ರ್ಯದ ದೌರ್ಬಲ್ಯ ಎಂದರ್ಥ. ಅತ್ತಾಸ್ ಅವರು ಭಾಷಾಶಾಸ್ತ್ರದ ದೃಷ್ಟಿಯಿಂದ ಅನೇಕ ನಾಮಪದಗಳನ್ನು ತಿದ್ದುವ ಮೂಲಕ ಅವುಗಳ ನಿಜವಾದ ಅರ್ಥವನ್ನು ವಿವರಿಸುತ್ತಿದ್ದರು. ಆಧುನಿಕ ಕಾಲದ ಗೊಂದಲ ಪದಗಳು ಅವುಗಳ ನಿಜವಾದ ಅರ್ಥದಿಂದ ಬೇರ್ಪಟ್ಟಿರುವುದರಿಂದ ಉಂಟಾಗಿವೆ ಎಂದು ಅವರು ನಂಬಿದ್ದರು. ನಾಮಪದಗಳ ಅರ್ಥಗಳನ್ನು ತಪ್ಪಾಗಿ ಅರ್ಥೈಸಿಕೊಂಡರೆ, ವಾಸ್ತವವನ್ನೂ ತಪ್ಪಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಬೌದ್ಧಿಕ ಸುಧಾರಣೆಯು ಭಾಷೆಯ ಶುದ್ಧತೆ, ವಿಚಾರಗಳ ನಿಖರತೆ ಮತ್ತು ಸತ್ಯದ ಮೇಲಿನ ನಿಷ್ಠೆಯಿಂದ ಮಾತ್ರ ಸಾಧ್ಯ.

ಅತ್ತಾಸ್ ಅವರ ಮೂಲಭೂತ ಕೊಡುಗೆಗಳಲ್ಲಿ ಅತ್ಯಂತ ಪ್ರಮುಖವಾದುದು ಅವರು ‘ಅದಬ್’ (adab) ಪರಿಕಲ್ಪನೆಯನ್ನು ವ್ಯಾಖ್ಯಾನಿಸಿದ ರೀತಿ. ಅದಬ್ ಎಂದರೆ ಸಾಮಾನ್ಯವಾಗಿ ಹವ್ಯಾಸ, ನಡವಳಿಕೆ ಮತ್ತು ಚಾರಿತ್ರ್ಯ ಎಂದು ಅನುವಾದಿಸಲಾಗುತ್ತದೆ. ಆದರೆ ಅತ್ತಾಸ್ ಅದನ್ನು ಆಳವಾದ ದಾರ್ಶನಿಕ ರೀತಿಯಲ್ಲಿ ವ್ಯಾಖ್ಯಾನಿಸಿದರು. ಅದಬ್ ಎಂದರೆ ಪ್ರತಿಯೊಂದನ್ನು ಅದರ ಸರಿಯಾದ ಸ್ಥಾನದಲ್ಲಿರಿಸುವುದು. ಇದು ದೇವರು ಮತ್ತು ಮನುಷ್ಯನ ನಡುವಿನ, ದಿವ್ಯಜ್ಞಾನ ಮತ್ತು ಬುದ್ಧಿಶಕ್ತಿಯ ನಡುವಿನ ಹಾಗೂ ಗುರು ಮತ್ತು ಶಿಷ್ಯನ ನಡುವಿನ ಸಮತೋಲಿತ ಮತ್ತು ನಿಖರವಾದ ಸಂಬಂಧವಾಗಿದೆ. ಅದಬ್ ಇದ್ದರೆ ಜ್ಞಾನವು ವಿವೇಕಕ್ಕೆ ದಾರಿ ಮಾಡಿಕೊಡುತ್ತದೆ. ಅದಬ್ ಕಳೆದುಹೋದರೆ ಗೊಂದಲ ಉಂಟಾಗುತ್ತದೆ, ಅಧಿಕಾರದ ಶ್ರೇಣಿ ವ್ಯವಸ್ಥೆ ತಪ್ಪುತ್ತದೆ, ಶಿಕ್ಷಣವು ವ್ಯರ್ಥವಾಗುತ್ತದೆ ಮತ್ತು ಸಂಸ್ಕೃತಿ ಭ್ರಷ್ಟಗೊಳ್ಳುತ್ತದೆ. ಅತ್ತಾಸ್ ಅವರ ದೃಷ್ಟಿಯಲ್ಲಿ, ಮುಸ್ಲಿಂ ಜಗತ್ತಿನ ಬಿಕ್ಕಟ್ಟು ರಾಜಕೀಯ ದೌರ್ಬಲ್ಯವಲ್ಲ, ಬದಲಿಗೆ ಅದಬ್ ಅನ್ನು ಕಳೆದುಕೊಂಡಿರುವುದು. ಶ್ರೇಷ್ಠತೆ ಮತ್ತು ಕನಿಷ್ಠತೆಯ ನಡುವಿನ ವ್ಯತ್ಯಾಸ ತಿಳಿಯದಿದ್ದಾಗ, ಮನಸ್ಸಿನಲ್ಲಿ ಮತ್ತು ಸಮಾಜದಲ್ಲಿ ಅಸ್ತವ್ಯಸ್ತತೆ ಹಾಗೂ ಸಂಘರ್ಷ ಉಂಟಾಗುವುದು ಅನಿವಾರ್ಯ.

ಇದು ಅತ್ತಾಸ್ ಅವರ ಶಿಕ್ಷಣ ಚಿಂತನೆಯ ಮೂಲ ಆಲೋಚನೆಯಾಗಿದೆ. ತಮ್ಮ ‘ದ ಕಾನ್ಸೆಪ್ಟ್ ಆಫ್ ಎಜುಕೇಶನ್ ಇನ್ ಇಸ್ಲಾಮ್’ ಪುಸ್ತಕದಲ್ಲಿ, ಅವರು ಇಸ್ಲಾಮಿಕ್ ಶಿಕ್ಷಣಕ್ಕೆ ಸೂಕ್ತವಾದ ಪದ ‘ತಾ’ದಿಬ್’ (ta’dib) ಎಂದು ವಾದಿಸುತ್ತಾರೆ. ಏಕೆಂದರೆ ಇಸ್ಲಾಮಿಕ್ ಶಿಕ್ಷಣವು ಕೇವಲ ಬೋಧನೆ (ತಲೀಮ್) ಮತ್ತು ಶಿಸ್ತು (ತರ್ಬಿಯಾ) ಮಾತ್ರವಲ್ಲ, ಅದು ಆತ್ಮದಲ್ಲಿ ‘ಅದಬ್’ ಅನ್ನು ಬೆಳೆಸುವ ಪ್ರಕ್ರಿಯೆಯಾಗಿದೆ. ಇದರ ಮೂಲಕ ಮನುಷ್ಯ ದೇವರು, ಜ್ಞಾನ ಮತ್ತು ಪ್ರಪಂಚದೊಂದಿಗೆ ತನ್ನ ನಿಜವಾದ ಸಂಬಂಧವನ್ನು ಅರಿತುಕೊಳ್ಳುತ್ತಾನೆ. ಆದ್ದರಿಂದ ಶಿಕ್ಷಣದ ಗುರಿ ಕೇವಲ ವೃತ್ತಿಪರರನ್ನು ಮತ್ತು ತಂತ್ರಜ್ಞರನ್ನು ತಯಾರಿಸುವುದಲ್ಲ, ಬದಲಿಗೆ ನ್ಯಾಯಯುತ ವ್ಯವಸ್ಥೆಯನ್ನು ಮುನ್ನಡೆಸುವ ದೈವಪ್ರಜ್ಞೆಯುಳ್ಳ ಬುದ್ಧಿಜೀವಿಗಳನ್ನು ರೂಪಿಸುವುದಾಗಿದೆ.

ಈ ದೃಷ್ಟಿಕೋನಕ್ಕೆ ನಿಕಟವಾಗಿ ಸಂಬಂಧಿಸಿದ ಮತ್ತೊಂದು ವಿಚಾರವೆಂದರೆ ‘ಜ್ಞಾನದ ಇಸ್ಲಾಮೀಕರಣ’. ಇದನ್ನು ಅವರು ತಮ್ಮ ‘ಇಸ್ಲಾಮ್ ಅಂಡ್ ಸೆಕ್ಯುಲರಿಸಂ’ (1978) ಪುಸ್ತಕದಲ್ಲಿ ಮಂಡಿಸಿದ್ದಾರೆ. ಅತ್ತಾಸ್ ಅವರ ದೃಷ್ಟಿಯಲ್ಲಿ, ಸಮಕಾಲೀನ ಜಗತ್ತಿನ ಬೌದ್ಧಿಕ ಬಿಕ್ಕಟ್ಟು ಎಂದರೆ ನೈತಿಕ ಮತ್ತು ಆಧ್ಯಾತ್ಮಿಕ ಗುರಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ಪಾಶ್ಚಾತ್ಯ ಲೌಕಿಕ (ಸೆಕ್ಯುಲರ್) ವಿಚಾರಗಳನ್ನು ವಿಮರ್ಶೆಯಿಲ್ಲದೆ ಅನುಕರಿಸುವುದು. ಈ ವಿಮರ್ಶೆಯು ಆಧುನಿಕ ವಿಜ್ಞಾನದ ತಿರಸ್ಕಾರವಲ್ಲ. ಬದಲಾಗಿ, ಆಧುನಿಕ ವಿಜ್ಞಾನವನ್ನು ಸತ್ಯ ಮತ್ತು ನೈತಿಕ ಜವಾಬ್ದಾರಿಯ ಮೇಲೆ ಆಧಾರಿತವಾದ ಇಸ್ಲಾಮಿಕ್ ವಿಶ್ವದೃಷ್ಟಿಗೆ ಅನುಗುಣವಾಗಿ ಮರುಸಂಘಟಿಸಬೇಕು ಎಂದು ಅತ್ತಾಸ್ ವಾದಿಸುತ್ತಾರೆ.

ಈ ದೃಷ್ಟಿಕೋನವು ಅವರು 1987 ರಲ್ಲಿ ಕೌಲಾಲಂಪುರದಲ್ಲಿ ಸ್ಥಾಪಿಸಿದ ISTAC (International Institute of Islamic Thought and Civilization) ಮೂಲಕ ಸಾಕಾರಗೊಂಡಿತು. ಅಲ್ಲಿ ಶಾಸ್ತ್ರೀಯ ಇಸ್ಲಾಮಿಕ್ ಸಂಪ್ರದಾಯ ಮತ್ತು ಆಧುನಿಕ ಜಗತ್ತಿನ ಜ್ಞಾನವನ್ನು ಸಂಯೋಜಿಸಲಾಯಿತು. ISTAC ನ ವಾಸ್ತುಶಿಲ್ಪ, ಪಠ್ಯಕ್ರಮ ಮತ್ತು ಕಲಿಕಾ ವಾತಾವರಣವು ವಿವೇಕ, ಸೌಂದರ್ಯ ಮತ್ತು ಆಧ್ಯಾತ್ಮಿಕ ಶಿಸ್ತುಗಳು ಪರಸ್ಪರ ಸಂಬಂಧ ಹೊಂದಿವೆ ಎಂಬ ಅತ್ತಾಸ್ ಅವರ ಚಿಂತನೆಯನ್ನು ಪ್ರತಿಬಿಂಬಿಸುತ್ತವೆ.

ಅತ್ತಾಸ್ ಅವರ ಗದ್ಯ ಬರಹಗಳು ಅತ್ಯಂತ ಸುಂದರವಾಗಿದ್ದವು. ಅವು ಮಲಯ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿಖರವಾದ ಪದಗಳನ್ನು ಹೊಂದಿದ್ದ ಶುದ್ಧ ಶೈಲಿಯ ಬರಹಗಳಾಗಿದ್ದವು. ಕ್ಯಾಲಿಗ್ರಫಿ (ಅಕ್ಷರ ವಿನ್ಯಾಸ) ಕಲೆಯ ಮೇಲಿನ ಆಸಕ್ತಿಯಿಂದ ಅತ್ತಾಸ್ ಅವರು ರಚಿಸಿದ ಹಲವಾರು ಕ್ಯಾಲಿಗ್ರಫಿಗಳನ್ನು ‘ಇಸ್ತಿಕ್ಲಾಲ್’ನ ಗೋಡೆಗಳ ಮೇಲೆ ಕಾಣಬಹುದು. ಇಸ್ಲಾಮ್ ಅಂಡ್ ಸೆಕ್ಯುಲರಿಸಂ, ದ ಕಾನ್ಸೆಪ್ಟ್ ಆಫ್ ಎಜುಕೇಶನ್ ಇನ್ ಇಸ್ಲಾಮ್, ಪ್ರೊಲೆಗೊಮೆನಾ ಟು ದ ಮೆಟಾಫಿಸಿಕ್ಸ್ ಆಫ್ ಇಸ್ಲಾಮ್, ಇಸ್ಲಾಮ್: ದ ಕಾನ್ಸೆಪ್ಟ್ ಆಫ್ ರಿಲಿಜನ್ ಅಂಡ್ ದ ಫೌಂಡೇಶನ್ ಆಫ್ ಎಥಿಕ್ಸ್ ಅಂಡ್ ಮೊರಾಲಿಟಿ ಇವು ಅವರ ಪ್ರಮುಖ ಕೃತಿಗಳು.

ಮಲೇಷ್ಯಾದ ಹೊರಗೂ ಅವರು ಪ್ರಭಾವಶಾಲಿಯಾಗಿದ್ದರು. ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಉಪನ್ಯಾಸ ನೀಡಿದರು ಮತ್ತು ಇಸ್ಲಾಮಿಕ್ ಶಿಕ್ಷಣಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಪ್ರಮುಖ ಶಿಷ್ಯರಾದ ವಾನ್ ಮುಹಮ್ಮದ್ ವಾನ್ ದಾವೂದ್ ಅವರು ಅತ್ತಾಸ್ ಅವರ ವಿಚಾರಗಳನ್ನು ಪಸರಿಸುವಲ್ಲಿ ಮತ್ತು ವ್ಯಾಖ್ಯಾನಿಸುವಲ್ಲಿ ಪ್ರಮುಖರಾಗಿದ್ದಾರೆ.

ಅನೇಕ ವಿದ್ವಾಂಸರು ಅತ್ತಾಸ್ ಅವರ ವಿಚಾರಗಳನ್ನು ಟೀಕಿಸಿದ್ದಾರೆ. ಆಧುನಿಕ ಮುಸ್ಲಿಂ ಜಗತ್ತು ಎದುರಿಸುತ್ತಿರುವ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಅವರ ಸುಧಾರಣಾ ಪ್ರಸ್ತಾಪಗಳು ಸಾಕಾಗುವುದಿಲ್ಲ ಎಂದು ಕೆಲವರು ವಾದಿಸಿದ್ದಾರೆ. ಅತ್ತಾಸ್ ಅವರ ಸುಧಾರಣಾವಾದಿ ವಿಚಾರಗಳು ಕೇವಲ ಬುದ್ಧಿಜೀವಿಗಳಿಗೆ ಸೀಮಿತವಾಗಿವೆ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಅತ್ತಾಸ್ ಅವರ ವಿಚಾರಗಳ ಮೂಲಭೂತತೆ ಮತ್ತು ಆಳವು ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿದೆ. ಅವರ ಪ್ರಭಾವವು ಸಾಂಸ್ಥಿಕವಾಗಿ ವ್ಯಾಪಕವಾಗಿ ಹರಡದಿದ್ದರೂ, ಅದರ ಬೌದ್ಧಿಕ ಪ್ರಭಾವವು ದೀರ್ಘಕಾಲ ಉಳಿಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅತ್ತಾಸ್ ಅವರ ವಿದ್ವತ್ಪೂರ್ಣ ಕೊಡುಗೆಗಳನ್ನು ಗುರುತಿಸಿ, ಮಲೇಷ್ಯಾ ಸರ್ಕಾರವು 2014 ರಲ್ಲಿ ಅವರಿಗೆ ‘ರಾಯಲ್ ಪ್ರೊಫೆಸರ್’ (Profesor Diraja) ಎಂಬ ಬಿರುದು ನೀಡಿ ಗೌರವಿಸಿತು. ಈ ಗೌರವ ಪಡೆದ ಎರಡನೇ ಮಲೇಷಿಯನ್ ವಿದ್ವಾಂಸರು ಇವರಾಗಿದ್ದರು.

ಈ ಮಹಾನ್‌ ವಿದ್ವಾಂಸರ ನಿಧನದೊಂದಿಗೆ ಮುಸ್ಲಿಂ ಜಗತ್ತು ತನ್ನ ಅತ್ಯಂತ ಆಳ ಚಿಂತಕರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಆದರೆ ಅತ್ತಾಸ್ ಅವರು ಬಿಟ್ಟುಹೋದ ಬೌದ್ಧಿಕ ಪರಂಪರೆ ಮತ್ತು ಬರಹಗಳು ಶಿಷ್ಯರ ಮೂಲಕ ಮುಂದಿನ ಪೀಳಿಗೆಗೆ ದಾಟುತ್ತದೆ. ನಮ್ಮ ಸಂಸ್ಕೃತಿಯು ಸಾರ್ವಜನಿಕ ಜೀವನದಿಂದ ಮರೆಯಾಗುವ ಮೊದಲು ಅದು ಹೃದಯದಿಂದ ಮರೆಯಾಗಬೇಕು ಎಂದು ನೆನಪಿಸಿದ ವಿದ್ವಾಂಸರಿವರು. ಅದಬ್ ಅನ್ನು ಮರುಸ್ಥಾಪಿಸುವ ಮೂಲಕ ಮಾತ್ರ ಪುನರುತ್ಥಾನ ಸಾಧ್ಯ ಎಂದು ನಮಗೆ ಕಲಿಸಿಕೊಟ್ಟವರು. ನಮಗೆ ಏನು ತಿಳಿಯಬೇಕು ಎಂದು ಮಾತ್ರವಲ್ಲದೆ, ಶಿಕ್ಷಣವನ್ನು ಹೇಗೆ ನೋಡಬೇಕು ಎಂದು ಕಲಿಸಿದ ವಿದ್ವಾಂಸರವರು.