ಪ್ರಜಾಪ್ರಭುತ್ವ ಘೋರ ವ್ಯಂಗ್ಯ: ನೀಟ್ ಚರ್ಚೆಯ ವೇಳೆ ಪ್ರತಿಪಕ್ಷ ನಾಯಕನ ಮೈಕ್ ಆಫ್ ಮಾಡಿದ ಸ್ಪೀಕರ್

0
356

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಪಟ್ಟಂತೆ ಲೋಕಸಭೆಯಲ್ಲಿ ಮಾತಾಡುವಾಗ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಮೈಕ್ ಅನ್ನು ಸ್ಪೀಕರ್ ಬಂದ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಮೈಕ್ರೋಫೋನ್ ಆನ್ ಮಾಡಲು ಸ್ಪೀಕರ್ ಗೆ ರಾಹುಲ್ ಹೇಳುವ, ಆಗ್ರಹಿಸುವ ದೃಶ್ಯಗಳನ್ನು ಕಾಂಗ್ರೆಸ್ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದೆ.

ನೀಟ್ ವಿವಾದದಲ್ಲಿ ಚರ್ಚೆ ಬೇಕು ಮತ್ತು ಸರಕಾರ ಇದರ ಕುರಿತು ಹೇಳಿಕೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿತು.

ನೀಟ್ ವಿಷಯದಲಿ ಮೋದಿ ಮೌನ ಮುಂದುವರಿಸಿದ್ದಾರೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಯುವಕರಿಗಾಗಿ ಧ್ವನಿ ಎತ್ತಿದ್ದಾರೆ. ಇಷ್ಟು ಗಂಭೀರ ವಿಷಯದಲ್ಲಿ ಯುವಕರ ಧ್ವನಿಯನ್ನು ದಮನಿಸಲು ಮೈಕ್ ಆಫ್ ಮಾಡುವಂತಹ ಕೆಟ್ಟ ಕೃತ್ಯ ಮಾಡುತ್ತಿದ್ದಾರೆ ಎಂದು ಎಕ್ಸ್‍ನಲ್ಲಿ ವೀಡಿಯೊ ಪೋಸ್ಟ್ ಮಾಡಿ ಕಾಂಗ್ರೆಸ್ ಬರೆದಿದೆ.

ವಿವಾದ ವಿಷಯದಲ್ಲಿ ಚರ್ಚೆ ಆಗ್ರಹಿಸಿ ಕಾಂಗ್ರೆಸ್ ಸಂಸದ ಕೆ.ಸಿ ವೇಣುಗೋಪಾಲ್ ತುರ್ತು ಪ್ರಸ್ತಾವವನ್ನು ಮಂಡಿಸಿದರು. ಆದರೆ ರಾಷ್ಟ್ರಪತಿಯ ಕೃತಜ್ಞತೆ ಪ್ರಸ್ತಾವದಲ್ಲಿ ಚರ್ಚೆ ನಡೆಯಲಿ ಎಂದು ಸ್ಪೀಕರು ಹೇಳುತ್ತಿದ್ದರು.

ಇದೇ ವೇಳೆ ಸಂಸದರ ಮೈಕ್ರೋಫೋನ್ ತಾನು ಆಫ್ ಮಾಡಿಲ್ಲ ಮತ್ತು ಅದರ ನಿಯಂತ್ರಣ ತನಗಿಲ್ಲ ಎಂದು ಓಂ ಬಿರ್ಲಾ ಹೇಳಿದರು. ರಾಷ್ಟ್ರಪತಿಗೆ ಕೃತಜ್ಞತೆ ಪ್ರಸ್ತಾವದಲ್ಲಿ ಚರ್ಚೆ ನಡೆಯುವಾಗ ಇತರ ವಿಷಯಗಳು ಚರ್ಚೆ ಮಾಡುವ ಸಂಪ್ರದಾಯ ಇಲ್ಲ ಎಂದು ಸರಕಾರದ ಮೂಲಗಳು ತಿಳಿಸಿವೆ. ಸದನವನ್ನು ಜುಲೈ ಒಂದರವರೆಗೆ ಮುಂದೂಡಲಾಗಿದೆ.